ಕುಂದಾಪುರ,ನ.4: ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕವಾದ ಮನಸ್ಸುಗಳನ್ನು ಹುಟ್ಟು ಹಾಕುವುದರ ಮೂಲಕ ಅವರನ್ನು ಪ್ರಯೋಗಶೀಲತೆಗೆ ಒಳಪಡಿಸಬೇಕು ಎಂದು ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ್ ಹೇಳಿದರು.
ಅವರು ಶನಿವಾರ ಕುಂದಾಪುರ ಸಂತ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ (ನ.4:) ನಡೆದ ಅಂತರ್ ಶಾಲಾ ಮಟ್ಟದ ವಿಜ್ಞಾನ ಮಾದರಿ ಮತ್ತು ರಸ ಪ್ರಶ್ನೆ ಸ್ಪರ್ಧೆ ‘ಅವಿನ್ಯಾ-2ಕೆ23’ ಉದ್ಘಾಟನಾ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದರು.
ತರಗತಿ ಕೋಣೆಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಬೆಳಕಿಗೆ ತರಲು ಕಷ್ಟಸಾಧ್ಯ. ಇಂತಹ ವೇದಿಕೆಯನ್ನು ಕಲ್ಪಿಸಿದಾಗ ಮಾತ್ರ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಬೆಳಗಿಸಲು ಸಾಧ್ಯವಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಚಾಲಕ ಅತೀ.ವಂ.ಫಾ.ಸ್ಟ್ಯಾನಿ ತಾವ್ರೋ ವಹಿಸಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಪಡುಬಿದ್ರಿ ವಿಭಾಗದ ಅಬಕಾರಿ ಇನ್‍ಸ್ಪೆಕ್ಟರ್ ಮಿಲ್ಲರ್ ಜಾನ್‍ಸನ್ ಡಿಸೋಜಾ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕುಂದಾಪುರ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಡೋರತಿ ಸುವಾರಿಸ್, ಸೈಂಟ್ ಮೇರಿಸ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೆಜಾ ಶಾಂತಿ, ಹೋಲಿ ರೋಜರಿ ಕಿಂಡರ್ ಗಾರ್ಟನ್ ಮುಖ್ಯ ಶಿಕ್ಷಕಿ ಶೈಲಾ ಲೂಯಿಸ್ ಉಪಸ್ಥಿತರಿದ್ದರು.
ಸಂತ ಮೇರಿಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ರೇಷ್ಮಾ ಫೆರ್ನಾಂಡಿಸ್ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಮಂಜುಳ ನಾಯರ್ ವಂದಿಸಿದರು. ಉಪನ್ಯಾಸಕರಾದ ನಾಗರಾಜ ಶೆಟ್ಟಿ, ಶರ್ಮಿಳಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.
ಚಂದ್ರಯಾನದ ಉದ್ಘಾಟನೆ: ಖುಷಿಯ ಸಂಭ್ರಮ
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಅಂತರ್ ಶಾಲಾ ಮಟ್ಟದ ವಿಜ್ಞಾನ ಮಾದರಿ ಮತ್ತು ರಸ ಪ್ರಶ್ನೆ ಸ್ಪರ್ಧೆ ‘ಅವಿನ್ಯಾ-2ಕೆ23’ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರಚಿಸಿದ ಚಂದ್ರಯಾನ 3ರ ಮಾದರಿಯಲ್ಲಿ ರಾಕೇಟ್‍ನ್ನು ಸಿದ್ದಪಡಿಸಿ ಸ್ವಿಚ್ ಹಾಕಿದ ತಕ್ಷಣ ಅದು ಆಕಾಶಕ್ಕೆ ಚಿಮ್ಮಿದಾಗ ನೆರೆದ ವಿದ್ಯಾರ್ಥಿಗಳು ಮತ್ತು ಅತಿಥಿಗಳು ಖುಷಿಯಿಂದ ಸಂಭ್ರಮಿಸಿದರು.