ಕೋಲಾರ:- ಅಪಘಾತದಿಂದ ಕಾಲಿಗೆ ಶಸ್ತ್ರಚಿಕಿತ್ಸೆಗೆ ಇದ್ದೆಲ್ಲಾ ಹಣ ಖರ್ಚು ಮಾಡಿ ತನ್ನ ಮಗಳ ಮದುವೆಗೆ ಹಣವಿಲ್ಲದೇ ನೊಂದಿದ್ದ ಕುಟುಂಬಕ್ಕೆ ಹಾಗೂ ಪಾಶ್ರ್ವವಾಯು ಪೀಡಿತ ಇಬ್ಬರಿಗೆ ಆರ್ಥಿಕ ನೆರವು ನೀಡುವ ಮೂಲಕ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಮುನೇಶ್ವರ ನಗರದ ನಿವಾಸಿಯಾಗಿದ್ದು, ಗಾರೆ ಕೆಲಸದಿಂದ ಜೀವನ ಸಾಗಿಸುತ್ತಿದ್ದ ನಾಗರಾಜ್ ಎಂಬುವವರಿಗೆ ಅಪಘಾತವಾಗಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮಗಳ ಮದುವೆಗೆಂದು ಕೂಡಿಟ್ಟಿದ್ದ ಒಂದೂವರೆ ಲಕ್ಷ ಹಣವನ್ನು ತಮ್ಮ ಚಿಕಿತ್ಸೆಗೆ ಖರ್ಚು ಮಾಡಿದ್ದರು.
ಮಗಳ ಮದುವೆ ಮಾಡಲು ಹಣವಿಲ್ಲದೇ ಜೀವನ ನಿರ್ವಹಣೆಗೂ ಕಷ್ಟವಾಗಿತ್ತು. ಅವರ ಪತ್ನಿ ಭಾಗ್ಯಮ್ಮ ಮೂರುಮನೆಗಳಲ್ಲಿ ಮನೆ ಕೆಲಸ ಮಾಡಿ ಮನೆಯನ್ನು ಸಾಗಿಸುತ್ತಿದ್ದರು. ಅವರ ಕುರಿತು ಮಾಹಿತಿ ಪಡೆದ ಗೋವಿಂದಗೌಡರು ಅವರ ನಿವಾಸಕ್ಕೆ ತೆರಳಿ ಆರ್ಥಿಕ ನೆರವು ನೀಡಿದರು.
ಜತೆಗೆ ಮುಂದಿನ ಫೆಬ್ರವರಿ ತಿಂಗಳಲ್ಲಿ ನಿಗಧಿಯಾಗಿದ್ದ ಮಗಳ ಮದುವೆ ನಡೆಸಲಾಗದ ನೋವು ತೋಡಿಕೊಂಡ ಕುಟುಂಬದ ನೆರವಿಗೆ ಮುಂದಾದ ಬ್ಯಾಲಹಳ್ಳಿ ಗೋವಿಂದಗೌಡರು ಮದುವೆ ಖರ್ಚಿಗೂ ನೆರವು ಒದಗಿಸುವ ಭರವಸೆ ನೀಡಿ ಆ ಕುಟುಂಬಕ್ಕೆ ಧೈರ್ಯ ತುಂಬಿದರು.
ಪಾಶ್ರ್ವವಾಯು ಪೀಡಿತರಿಗೂ ನೆರವು
ಮುನೇಶ್ವರ ನಗರದಲ್ಲಿ ಪತಿಯನ್ನು ಕಳೆದುಕೊಂಡಿದ್ದರೂ ಎದೆಗುಂದದೇ ಸುಮಾರು 10 ವರ್ಷಗಳಿಂದ ಹೂ ಕಟ್ಟಿ ಮಾರಿ ಮಗಳೊಂದಿಗೆ ಕುಟುಂಬ ನಿರ್ವಹಿಸುತ್ತಿದ್ದ ಭಾಗ್ಯಮ್ಮ ಎಂಬ ಮಹಿಳೆ ಇತ್ತೀಚೆಗೆ ಪಾಶ್ರ್ವವಾಯುವಿನಿಂದಾಗಿ ಹಾಸಿಗೆ ಹಿಡಿದಿದ್ದು, ತುತ್ತು ಅನ್ನಕ್ಕೂ ಅತ್ಯಂತ ಕಷ್ಟಪಡುತ್ತಿದ್ದರು.
ಈ ಭಾಗದ ಮುಖಂಡ ಬೆಟ್ಟಪ್ಪ ಮತ್ತಿತರರಿಂದ ಈ ಮಹಿಳೆಯ ಸಂಕಷ್ಟದ ಕುರಿತು ಮಾಹಿತಿ ಪಡೆದ ಬ್ಯಾಲಹಳ್ಳಿ ಗೋವಿಂದಗೌಡರು, ಆಕೆಗೂ ಆರ್ಥಿಕ ನೆರವು ನೀಡಿ ಹೃದಯವಂತಿಕೆ ಮೆರೆದರು.
ಇದೇ ರೀತಿ ಮಕ್ಕಳಿಲ್ಲವೆಂಬ ಚುಚ್ಚುಮಾತಿನಿಂದ ಮನನೊಂದಿದ್ದ ನಗರದ ಕಾರಂಜಿಕಟ್ಟೆ 8ನೇ ಕ್ರಾಸ್‍ನ ಮಹಿಳೆ ಗಾಯಿತ್ರಿ ಇತ್ತೀಚೆಗೆ ಮಾನಸಿಕ ಯಾತನೆಗೆ ಗುರಿಯಾಗಿ ಪಾಶ್ರ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು.
ಈಕೆಗೆ ತಂದೆ ಇಲ್ಲ, ತಾಯಿಯೇ ಜೀವನಕ್ಕೆ ಆಸರೆಯಾಗಿದ್ದು, ಕೂಲಿ ಮಾಡಿ ಮಗಳನ್ನು ಸಾಕುತ್ತಿದ್ದಳು, ಆಕೆಯ ಪತಿ ಈಕೆಯನ್ನು ತವರು ಮನೆಯಲ್ಲೇ ಬಿಟ್ಟಿದ್ದು, ಈಕೆಯ ಸಂಕಷ್ಟ ಕಂಡು ಮನನೊಂದ ಬ್ಯಾಲಹಳ್ಳಿ ಗೋವಿಂದಗೌಡರು ಈಕೆಗೂ ಆರ್ಥಿಕ ನೆರವುನೀಡಿ ಮಾನವೀಯತೆ ಮೆರೆದರು.
ಹತ್ತಾರು ವರ್ಷಗಳಿಂದಲೂ ಬಡರೋಗಿಗಳಿಗೆ, ಬಡವರ ಮದುವೆಗೆ ನಿರಂತರವಾಗಿ ಆರ್ಥಿಕ ನೆರವು ನೀಡಿಕೊಂಡು ಬಂದಿರುವ ಬ್ಯಾಲಹಳ್ಳಿ ಗೋವಿಂದಗೌಡರ ಹೃದಯವಂತಿಕೆಗೆ ಈ ಭಾಗದ ಮುಖಂಡ ಬೆಟ್ಟಪ್ಪ ಧನ್ಯವಾದ ಸಲ್ಲಿಸಿ, ಕಳೆದ 2019 ರಂದು ಕ್ಯಾನ್ಸರ್ ಪೀಡಿಗ ಮಗುವಿನ ಚಿಕಿತ್ಸೆಗೆನೆರವಾಗಿ ಜೀವ ಉಳಿಸಿದ ಸುದ್ದಿಯನ್ನು ಕಂಡು ಈ ಭಾಗದಲ್ಲಿ ಸಂಕಷ್ಟದಲ್ಲಿರುವ ಈ ಮೂರು ಕುಟುಂಬಗಳಿಗೆ ನೆರವಾಗಲು ಕೋರಿದ್ದೆ, ತಕ್ಷಣವೇ ನೆರವಿಗೆ ಮುಂದಾಗಿ ಸಹಾಯಹಸ್ತ ಚಾಚಿದ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಈ ಭಾಗದ ಮುಖಂಡರಾದ ಬೆಟ್ಟಪ್ಪ, ರಮೇಶ್,ಪೈಂಟರ್ ರಾಜ್‍ಕುಮಾರ್ ಮತ್ತಿತರರಿದ್ದರು.