ಜನತೆಯಿಂದ ಜನತೆಗೆ ನೆರವು ಮೂಲ ಮಂತ್ರ ಪಾಲಿಸಿ – ಡಾ. ಬಿ.ಮರಿಸ್ವಾಮಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಮೇ. 8 : ಆಧುನಿಕ ಸಮಾಜದಲ್ಲಿ ಆಗಿಂದಾಗ್ಗೆ ಉದ್ಭವಿಸುತ್ತಿರುವ ಆಕಸ್ಮಿಕಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಅಗತ್ಯವಿದ್ದು, ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯ ಮೌಲ್ಯಗಳನ್ನು ಬೆಳೆಸಿ ಕೊಳ್ಳುವುದು ಒಳಿತು ಈ ದೆಸೆಯಲ್ಲಿ ಜನತೆಯಿಂದ ಜನತೆಗೆ ನೆರವು ಎಂಬ ಮೂಲ ಮಂತ್ರವನ್ನು ಎಲ್ಲರೂ ಪಾಲಿಸುವಂತಾಗಬೇಕು ಎಂದು ಜಿಲ್ಲಾ ಗೃಹ ರಕ್ಷಕ ದಳದ ನಿಕಟಪೂರ್ವ ಕಮಾಂಡೆಂಟ್ ಡಾ.ಬಿ.ಮರಿಸ್ವಾಮಿ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾ ಗೃಹರಕ್ಷಕ ದಳ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಏರ್ಪಡಿಸಿದ್ದ ವಿಶ್ವ ರೆಡ್‍ಕ್ರಾಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತು ಸಂಕಟದ ಸಂಕೋಲೆಯೊಳಗೆ ಸಿಲುಕಿಕೊಂಡು ಬರುವಾಗಲೆಲ್ಲ ಆಪದ್ಬಾಂಧವನಂತೆ ನೆರವಿಗೆ ನಿಂತು ಮನುಕುಲದ ನೋವನ್ನು ನಿವಾರಿಸುವ ಮಹಾನ್ ಸಂಸ್ಥೆಯಾದ ರೆಡ್ಕ್ರಾಸ್ ಸೇವಾ ಮನೋಭಾವನೆ ಶ್ಲಾಘನೀಯವಾಗಿದೆ. ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕ ಜೀನ್ ಹೆನ್ರಿ ಡ್ಯೂನಾಂಟ್ ರವರ ಸೇವಾ ಮನೋಭಾವನೆಯಿಂದ ಆರಂಭವಾದ ಭಾರತೀಯ ರೆಡ್ ಕ್ರಾಸ್ ಇಂದು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿರುವುದು ಸುತ್ಯಾರ್ಹ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಜಿ.ಶ್ರೀನಿವಾಸ್ ಮಾತನಾಡಿ ಮಾನವೀಯತೆ, ನಿಷ್ಪಕ್ಷಪಾತ, ತಾಟಸ್ಥ್ಯ, ಐಕ್ಯಮತ್ಯ, ವಿಶ್ವವ್ಯಾಪಕತೆ, ಸ್ವಯಂಸೇವೆ, ಸ್ವಾತಂತ್ರ್ಯ ಮೂಲತತ್ವಗಳನ್ನು ಪಾಲಿಸಿದಾಗ ಜೀನ್ ಹೆನ್ರಿ ಡ್ಯೂನಾಂಟ್ ರವರ ಜನ್ಮ ದಿನಾಚರಣೆಗೆ ಅರ್ಥ ಬಂದಂತಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಉಪ ಸಭಾಪತಿ ಆರ್.ಶ್ರೀನಿವಾಸನ್ ಮಾತನಾಡಿ ಗೃಹ ರಕ್ಷಕರು ಸಮಾಜದ ಉತ್ತಮ ಸಮಾಜ ಸೇವಕರಾಗಿದ್ದು, ಇವರ ಸೇವಾ ಮನೋಭಾವವನ್ನು ಸರ್ಕಾರ ಗುರ್ತಿಸಿ ಹುದ್ದೆಗಳನ್ನು ಖಾಯಂ ಮಾಡುವಂತಹ ಚಿಂತನೆ ನಡೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ಗೃಹ ರಕ್ಷಕ ದಳದ ಉತ್ತಮ ಸೇವೆಯನ್ನು ಗುರ್ತಿಸಿ ಶಿಲ್ಪ ಮತ್ತು ಪಟೇಲಪ್ಪ ರವರನ್ನು ಸನ್ಮಾನಿಸಿದ ಸಮಾರಂಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಸ್.ನಂದೀಶ್ ಕುಮಾರ್, ಸದಸ್ಯ ಜಿ.ಸೀನಪ್ಪ, ಗೃಹ ರಕ್ಷಕ ದಳದ ಕಮಾಂಡೆಂಟ್ ಕಿರಣ್‍ಕುಮಾರ್, ಡÉಪ್ಯೂಟಿ ಕಮಾಂಡೆಂಟ್ ರಾಜೇಂದ್ರಕುಮಾರ್, ಸಹಾಯಕ ಬೋಧಕ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಗೃಹ ರಕ್ಷಕ ದಳದ ಸಿಬ್ಬಂದಿಗೆ ಮಾಸ್ಕ್‍ಗಳನ್ನು ವಿತರಿಸಲಾಯಿತು.