ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ : ಗ್ರಾಮಗಳಲ್ಲಿ ಗ್ರಾಮಸ್ಥರು ಪ್ಲಾಸ್ಟಿಕ್‌ನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಜನರಿಗೆ ಹಾಗೂ ಜಾನುವಾರುಗಳ ಆರೋಗ್ಯದಲ್ಲಿ ಏರು – ಪೇರಾಗುತ್ತದೆ . ಆದ್ದರಿಂದ ಜಿಲ್ಲೆಯ ಪ್ರತಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸೋಣ ಎಂದು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ತಿಳಿಸಿದರು . ಇಂದು ಶ್ರೀನಿವಾಸಪುರ ತಾಲ್ಲೂಕಿನ ಯಲ್ಲೂರು ಹೋಬಳಿಯ ನೆರ್ನಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ “ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ” – ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಗ್ರಾಮಕ್ಕೆ ಶೀಘ್ರದಲ್ಲಿ ರಸ್ತೆ ಸಂಪರ್ಕ ಒದಗಿಸಲಾಗುವುದು . ಸ್ಮಶಾನದಿಂದ ಗ್ರಾಮಕ್ಕೆ ಎರಡು ಕಿಲೋಮೀಟರ್ ಉತ್ತಮ ರಸ್ತೆಯನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು . ಗ್ರಾಮಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸೌಲಭ್ಯವನ್ನು ಒದಗಿಸಲಾಗುವುದು . ಟ್ರಾನ್ಸ್‌ಫಾರ ವ್ಯವಸ್ಥೆಯನ್ನು ದೇವಸ್ಥಾನಕ್ಕೆ ಮತ್ತು ಸ್ಮಶಾನಗಳಿಗೆ ಶೀಘ್ರದಲ್ಲಿ ಕಲ್ಪಿಸಲಾಗುವುದು . ಗ್ರಾಮಸ್ಥರ ಸಮಸ್ಯೆಗಳನ್ನು ಈ ಗ್ರಾಮ ವಾಸ್ತವ್ಯದಲ್ಲಿ ಸ್ಥಳದಲ್ಲೇ ಬಗೆಹರಿಸಲಾಗುವುದು ಎಂದು ತಿಳಿಸಿದರು . ವಿದ್ಯಾರ್ಥಿವೇತನ ಬಗ್ಗೆ ಪರಿಶೀಲಿಸಿ ಗ್ರಾಮದಲ್ಲಿರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲಾಗುವುದು . ಸಿ.ಎಸ್.ಆರ್ ಮೂಲಕ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುವುದು . ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ಕುಡಿಯುವ ನೀರಿನ ನಳಗಳನ್ನು ಸ್ಥಾಪಿಸಲಾಗುವುದು . ಸರ್ಕಾರದಿಂದ ವಸತಿ ಯೋಜನೆಯಡಿ ಮಂಜೂರಾದ ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಳ್ಳಬೇಕು . ಗ್ರಾಮ ಪಂಚಾಯತಿ ಮೂಲಕ ಎಲ್ಲಾ ಹಳ್ಳಿಗಳಲ್ಲಿ ಕಸ ವಿಲೇವಾರಿ ಮಾಡಲಾಗುವುದು . ಎಲ್ಲಾ ಗ್ರಾಮಸ್ಥರು ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಪೌರಕಾರ್ಮಿಕರಿಗೆ ನೀಡಲು ವಿನಂತಿಸಿದರು . ಯಾವುದೇ ಕೆಲಸ ಪೂರ್ಣಗೊಳಿಸಲು ಗ್ರಾಮಸ್ಥರ ಸಹಕಾರ ಪ್ರಮುಖವಾಗಿರುತ್ತದೆ ಎಂದು ಅಭಿಪ್ರಾಯ ಪಡಿಸಿದರು . ಶ್ರೀನಿವಾಸಪುರ ತಾಲ್ಲೂಕಿನ ತಹಶೀಲ್ದಾರ್‌ರಾದ ಶರೀನ್ ತಾಜ್ ಅವರು ಮಾತನಾಡಿ , ಕೋವಿಡ್ ಪೂರ್ವದಲ್ಲಿ ಗ್ರಾಮ ವಾಸ್ತವ್ಯ ನಡೆಸಲು ಸಾಧ್ಯವಾಗಲಿಲ್ಲ . ಪ್ರಸ್ತುತ ಸರ್ಕಾರಿ ಅಧಿಕಾರಿಗಳು ಗ್ರಾಮಸ್ಥರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಜನಪ್ರಿಯ ಕಾರ್ಯಕ್ರಮವನ್ನು ಮುಂದುವರಿಸಲಾಗುತ್ತಿದೆ . ಸಾರ್ವಜನಿಕರು ಈ ಯೋಜನೆಯ ಪೂರ್ಣ ಲಾಭವನ್ನು ಪಡೆಯಲು ಮನವಿ ಮಾಡಿದರು . ಪಿಂಚಣಿ ಮತ್ತು ಮಾಸಾಶನಗಳ ಸಂಪೂರ್ಣ ಮಾಹಿತಿಯನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು . ಗ್ರಾಮಸ್ಥರ ಕುಂದುಕೊರತೆಗಳನ್ನು ಅರ್ಜಿಗಳ ಮೂಲಕ ನೀಡಿ ಬಗೆಹರಿಸಿಕೊಳ್ಳಬಹುದು .
ಗ್ರಾಮಸ್ಥರು ಕಛೇರಿಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳನ್ನು ತಿಳಿದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು . ಶ್ರೀನಿವಾಸಪುರ ತಾಲ್ಲೂಕಿನ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್.ಆನಂದ್ ಅವರು ಮಾತನಾಡಿ ಈ ಗ್ರಾಮದ ರೈತರು ಕೃಷಿಯನ್ನು ಹೆಚ್ಚಾಗಿ ಆವಲಂಬಿಸಿದ್ದಾರೆ . ಸ್ಮಶಾನಗಳ ಅಭಿವೃದ್ಧಿಗಾಗಿ 296 ಸ್ಥಳಗಳನ್ನು ಸರ್ವೇ ಮಾಡಿ ಗುರುತಿಸಲಾಗಿದೆ . ಎಲ್ಲಾ ಗ್ರಾಮಗಳಲ್ಲಿ ಕಡ್ಡಾಯವಾಗಿ ಸ್ಮಶಾನಗಳನ್ನು ನಿರ್ಮಿಸಲಾಗುವುದು . ಚರಂಡಿ ಸಮಸ್ಯೆ ಬಗೆಹರಿಸಲಾಗುವುದು . ಬಳಸಿದ ನೀರನ್ನು ಸೋಕ್ ಪಿಟ್‌ಗಳನ್ನು ನಿರ್ಮಿಸಿ ಅದರಲ್ಲಿ ಶೇಖರಿಸಿ ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಒತ್ತು ನೀಡಬೇಕು . ಈ ಮೂಲಕ ನೀರಿನ ಅಭಾವವನ್ನು ತಡೆಗಟ್ಟಬಹುದು . ಸೋಕ್ ಪಿಟ್ ನಿರ್ಮಾಣಕ್ಕಾಗಿ ರೂ . 12 ಸಾವಿರದಿಂದ 14 ರವರೆಗೂ ಸರ್ಕಾರದಿಂದ ಸಹಾಯಧನ ನೀಡಲಾಗುವುದು . ಸೋಕ್ ಪಿಟ್ ವ್ಯವಸ್ಥೆಯಿಂದ ಸ್ವಚ್ಛತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು . ಕುರಿ ಮತ್ತು ಕೋಳಿ ಶೆಡ್ ನಿರ್ಮಾಣಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ . 45,000 / – ಹಾಗೂ ಸಾಮಾನ್ಯ ವರ್ಗದವರಿಗೆ ರೂ . 25,000 / – ಗಳ ಸಹಾಯಧನ ನೀಡಲಾಗುತ್ತಿದೆ . ಗ್ರಾಮಸ್ಥರು ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕು . ಗ್ರಾಮಗಳಲ್ಲಿರುವ ಶಾಲೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಗ್ರಾಮಸ್ಥರ ಜವಾಬ್ದಾರಿಯಾಗಿರುತ್ತದೆ . ಟೊಮೊಟೋ ಹಾಗೂ ಮಾವು ಬೆಳೆಗಳನ್ನು ಹೆಚ್ಚಾಗಿ ಬೆಳೆಯದೆ ಇತರೆ ಎಲ್ಲಾ ವಿವಿಧ ಬೆಳೆಗಳನ್ನು ಬೆಳೆದು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು . ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಲ್ಲಿ ಏನೆಲ್ಲ ಸೌಲಭ್ಯಗಳು ಸಿಗುತ್ತದೆ ಎಂಬುದನ್ನು ಗ್ರಾಮಸ್ಥರಿಗೆ ವಿವರವಾಗಿ ತಿಳಿಸಿದರು . ಗ್ರಾಮ ವಾಸ್ತವ್ಯದಲ್ಲಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಗುವಿಗೆ ಅನ್ನಪ್ರಾಶನ ಮತ್ತು ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಮಾಡಲಾಯಿತು . ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಮಿನಿಕಿಟ್ ಬಿತ್ತನೆ ಬೀಜ ವಿತರಣೆ , ವೃದ್ಧಾಪ್ಯ ವೇತನ , ವಿಧವಾ ಪಿಂಚಣಿ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ಗ್ರಾಮದ ಫಲಾನುಭವಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಸ್ಥಳದಲ್ಲೇ ವಿತರಿಸಲಾಯಿತು . ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಜಗದೀಶ್ , ಜಿಲ್ಲಾ ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಸೋಮಶಂಕರಪ್ಪ , ಡಿ.ಡಿ.ಎಲ್.ಆರ್ ಡಿ.ಭಾಗ್ಯಮ್ಮ , ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ | ಚಾರಿಣಿ , ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೇಮ , ಸೋಮಯಾಜಲಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ವನಿತಾ , ಶ್ರೀನಿವಾಸಪುರ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ || ವಿಜಯ , ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಎಸ್.ಶ್ರೀನಿವಾಸನ್ , ಅರಣ್ಯಾಧಿಕಾರಿಗಳಾದ ಬಾಲು , ಕೃಷಿ ಇಲಾಖೆ ಅಧಿಕಾರಿಗಳಾದ ರಘು , ರೇಷ್ಮೆ ಇಲಾಖೆ ಅಧಿಕಾರಿಗಳಾದ ಕೃಷ್ಣಪ್ಪ , ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಶಿವಕುಮಾರ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಮುದ್ದಣ್ಣ , ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.