ಕಾರವಾರ: ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆಗೈದು ಶವವನ್ನು ಗೋಣಿ ಚೀಲದಲ್ಲಿ ತುಂಬಿ ಅರಣ್ಯದಲ್ಲಿ ಎಸೆದು ಹೋಗಿದ್ದ ಮೂವರು ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಹಣಕ್ಕಾಗಿ ಕೊಲೆಗೈದು ಬಳಿಕ ಕೊರ್ಲಕಟ್ಟಾ – ವಡ್ಡಿನಕೊಪ್ಪ ರಸ್ತೆಯ ಅರಣ್ಯದಲ್ಲಿ ಶವವನ್ನು ಎಸೆದು ಹೋಗಿದ್ದರು.
ಬಂಧಿತ ಆರೋಪಿಗಳನ್ನು ಹಾನಗಲ್ನ ಗೆಜ್ಜೆಹಳ್ಳಿಯ ಕಿರಣ್ ಸುರಳೇಶ್ವರ (23), ನಿರಂಜನ ಗೋವಿಂದಪ್ಪ ತಳವಾರ (19) ಹಾಗೂ ಗುಡ್ಡಪ್ಪ ಕೊಟಪ್ಪ ತಿಳುವಳ್ಳಿ (19) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಹಣಕ್ಕಾಗಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಆರೋಪಿಗಳು ಅದೇ ಗ್ರಾಮದ ಅಶೋಕ್ ಉಪ್ಪಾರ್ (55) ಎಂಬಾತನನ್ನು ಮೂರು ದಿನಗಳ ಹಿಂದೆ ಕೊಲೆ ಮಾಡಿದ್ದರು. ಬಳಿಕ ಗುರುತು ಸಿಗದಂತೆ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದರು. ಆರೋಪಿಗಳಿಂದ ಸ್ವಿಪ್ಟ್, ಕ್ರೇಟಾ ಕಾರ್ ಹಾಗೂ ಒಂದು ಬೈಕ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿರಸಿ ಡಿಎಸ್ಪಿ ಕೆ.ಎಲ್.ಗಣೇಶ ಮಾರ್ಗದರ್ಶನದಲ್ಲಿ ಸಿ.ಪಿ.ಐ ರಾಮಚಂದ್ರ ನಾಯಕ್, ಬನವಾಸಿ ಠಾಣೆ ಪಿ.ಎಸ್.ಐ ಚಂದ್ರಕಲಾ ಪತ್ತಾರ, ಸುನೀಲ್ ಕುಮಾರ್ ಬಿ.ವೈ ಇವರು ಬಂಧನದ ಕಾರ್ಯಾಚರಣೆ ಭಾಗವಹಿಸಿದ್ದರು.