ನ್ಯಾಯಾಲಯದ ಆದೇಶದಂತೆ ಅಕ್ರಮ ಮದ್ಯ ಮಾರಾಟ ತಕ್ಷಣ ನಿಲ್ಲಿಸಬೇಕೆಂದು ಮನವಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಮದ್ಯ ನಿಷೇಧ ಆಂದೋಲದ ಸದಸ್ಯರು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಆಂದೋಲನದ ಸದಸ್ಯರು, ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧವಾಗಬೇಕೆಂದು ಮಹಿಳೆಯರು ಕಳೆದ 6 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ನಮ್ಮ ರಾಜ್ಯದ ಹಳ್ಳಿಗಳ ಗಲ್ಲಿ ಗಲ್ಲಿಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಈಗಾಗಲೇ ಮಹಿಳೆಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತಂದಿದ್ದಾರೆ.
ಇದನ್ನು ಗಮನಿಸಿದ ಉಚ್ಛ ನ್ಯಾಯಾಲಯವು ತಕ್ಷಣವೇ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆದೇಶ ನೀಡಿದ್ದರೂ ಅಕ್ರಮ ಮದ್ಯ ಮಾರಾಟ ಮಾತ್ರ ಇದುವರೆಗೂ ನಿಂತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಹಾಗಾಗಿ ನ್ಯಾಯಾಲಯದ ಆದೇಶದಂತೆ ತಕ್ಷಣವೇ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕು. ಸರ್ಕಾರ ಈ ಆದೇಶವನ್ನು 15 ದಿನಗಳ ಒಳಗಾಗಿ ಕಾರ್ಯರೂಪಕ್ಕೆ ತಂದು ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕಿದ್ದು, ಇಲ್ಲವಾದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ತೀವ್ರತರಹದ ಉಗ್ರ ಹೋರಾಟವನ್ನು ಆರಂಭಿಸುತ್ತೇವೆಂದು ಎಚ್ಚರಿಕೆ ನೀಡಿದರು.
ಈ ಸಂದಭದಲ್ಲಿ ಆಂದೋಲದ ಸದಸ್ಯರಾದ ಶಾಂತಾ, ಎ.ನಳಿನಿಗೌಡ, ಸಂಧ್ಯಾ, ಸುನಿತಾ, ಖುಷ್ಬು, ಪವಿತ್ರ, ವಿನುತಾ, ಪವಿತ್ರ, ಮಹಾಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.