ಕೋಲಾರ : ಕೋಲಾರ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಗುಣಮಟ್ಟದ ಫಲಿತಾಂಶ ಹೊಂದಲು ಜಿಲ್ಲಾಡಳಿತದಿಂದ ಹಿಂದುಳಿದ 68 ಸರ್ಕಾರಿ ಪ್ರೌಢಶಾಲೆಯ ಮತ್ತು ವಸತಿ ಶಾಲೆಗಳಿಗೆ ಆರು ವಿಷಯಗಳ ಕುರಿತು ಆಂಗ್ಲ ಮಾಧ್ಯಮದ ಸುಮಾರು 4500 ಪುಸ್ತಕಗಳನ್ನು ವಿತರಿಸಲಾಗಿದೆಯೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷಾ ದೀವಿಗೆ ಕೈಪಿಡಿಗಳ ಬಿಡುಗಡೆ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಕೆಸೆಟ್, ನೀಟ್, ಜೆಇಇ ಪರೀಕ್ಷೆಗಳಿಗೆ ಸಿದ್ಧಪಡಿಸಲು ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಿಂದ ಸಂಪನ್ಮೂಲ ಪುಸ್ತಕಗಳನ್ನು ಜಿಲ್ಲೆಯ 26 ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ವಸತಿ ಕಾಲೇಜುಗಳಿಗೆ ವಿತರಿಸಲಾಗಿದ್ದು, ಜಿಲ್ಲೆಯಲ್ಲಿ 344 ಪ್ರೌಢಶಾಲೆಗಳಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮುಖ್ಯೋಪಾಧ್ಯಾಯರುಗಳಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಈ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉದ್ದೇಶವಾಗಿದೆಯಂದರು.
ಮುಂಚೂಣಿಗೆ ತರಲು ಖಾಸಗಿ ಶಾಲೆಗಳಲ್ಲಿ ಇರುವಂತೆ ಮೂಲ ಸೌಕಯ್ಯಗಳು ಸರ್ಕಾರಿ ಶಾಲೆಗಳಲ್ಲಿ ಇರುವುದಿಲ್ಲ. ಹೀಗಾಗಿ ಪ್ರತಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಿ ನಿಗದಿತ ಫಲಿತಾಂಶ ಬರುವಂತೆ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ ಎಂದರು. 135 ಸರ್ಕಾರಿ ಶಾಲೆಗಳಲ್ಲಿ 68 ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಮುರಳಿಯವರು ಮಕ್ಕಳ ಪೂರಕ ಕಲಿಕೆಗೆ ಬೇಕಾಗಿರುವ ಮಾಹಿತಿಯನ್ನೊಳಗೊಂಡ ಪುಸ್ತಕವನ್ನು ರಚಿಸಿದ್ದು, ಅವರಿಗೆ ಧನ್ಯವಾದಗಳನ್ನು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಈ ಪುಸ್ತಕಗಳು ಮುಖ್ಯವಾಗಿ ಸರ್ಕಾರಿ ಶಾಲೆಗೆ ತಲುಪಬೇಕು. ಪ್ರತಿ ತಾಲ್ಲೂಕಿಗೆ 15 ಸೆಟ್ ಅಂತೆ ಪುಸ್ತಕಗಳನ್ನು ವಿತರಿಸಿದ್ದು, ಮುಂದಿನ ವರ್ಷ ಆರಂಭದಲ್ಲೆಗೆ ಎಲ್ಲಾ ಶಾಲೆಗಳಿಗೆ ಈ ಪುಸ್ತಕವನ್ನು ವಿತರಿಸುವಂತೆ ಕ್ರಮಕೈಗೊಳ್ಳಲಾಗುವುದು.
ಶಿಕ್ಷಕರು ದ್ವಿತೀಯ ಪಿಯುಸಿಯಲ್ಲಿ 68 ಕಾಲೇಜುಗಳಿಗೆ ಪುಸ್ತಕಗಳನ್ನು ನೀಡಲಾಗುತ್ತಿದ್ದು, ಅವುಗಳನ್ನು ಮೂಲೆ ಗುಂಪು ಮಾಡದೇ ಪ್ರತಿ ಮಕ್ಕಳಿಗೆ ಓದುವಂತೆ ಪ್ರೇರಣೆ ಮಾಡಬೇಕೆಂದರು.
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ನೀಡುವ ದೃಷ್ಟಿಯಿಂದ ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಒಂದರಂತೆ 6 ತಾಲ್ಲೂಕುಗಳಿಗೆ ಒಂದೊಂದು ಸ್ಮಾರ್ಟ್ ಕ್ಲಾಸ್ ಉಪಕರಣಗಳನ್ನು ಅಳವಡಿಸಿ ಪರಿಣಾಮಕಾರಿ ಹಾಗೂ ಆಧುನಿಕ ಮಾದರಿಯ ಬೋಧನಾ ಕಲಿಕಾ ವಿಧಾನವನ್ನು ಪರಿಚಯಿಸಲಾಗುತ್ತಿದೆ.
ಈಗಾಗಲೇ ಜಿಲ್ಲೆಯಲ್ಲಿ 6 ಸ್ಮಾರ್ಟ್ ಕ್ಲಾಸ್ಗಳಿದ್ದು, ಖನಿಜ ಪ್ರತಿಷ್ಠಾನದಿಂದ ಪ್ರತಿ ತಾಲ್ಲೂಕಿಗೆ ಇನ್ನು 15 ದಿನದಲ್ಲಿ ಪುಸ್ತಕಗಳನ್ನು ನೀಡಲಿದ್ದಾರೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಈ ಬಾರಿ ಕೋಲಾರ ಜಿಲ್ಲೆಯು ನಾಲ್ಕನೇ ಸ್ಥಾನಕ್ಕಿಂತ ಕೆಳಗಿಳಿಯದಂತೆ ಶಿಕ್ಷಣ ಇಲಾಖೆಯು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕೆಂದರು. ಹಿಂದುಳಿದ ಶಾಲೆ ಹಾಗೂ ವಿದ್ಯಾರ್ಥಿಗಳ ಬಗ್ಗೆ ಸಮೀಕ್ಷೆ ಮಾಡಿ ಸೂಕ್ತ ಕ್ರಮಕೈಗೊಂಡು ಅವರನ್ನು ಮುಖ್ಯವಾಹಿನಿಗೆ ತರಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರುಗಳು ಪ್ರಯತ್ನಿಸಬೇಕೆಂದರು. ಜಿಲ್ಲೆಯನ್ನು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ತರಲು ಮುಖ್ಯೋಪಾಧ್ಯಾಯರು ಪಾತ್ರ ಅತೀ ಮುಖ್ಯ ಎಂದರು.
ಜಿಲ್ಲೆಯಲ್ಲಿ 1800 ಸರ್ಕಾರಿ ಶಾಲೆಗಳಿಂದ ಡಿ.ಡಿ.ಪಿ.ಐ ಅವರ ಕೈಕೆಳಗೆ 100 ವರ್ಷದಾಟಿರುವ ಶಾಲೆಗಳಿಗೆ ಕಂದಾಯ ದಾಖಲೆಗಳನ್ನು ಇಲಾಖೆ ಮುನಿಸಿಪಾಲಿಟಿ ಹಾಗೂ ಗ್ರಾಮ ಪಂಚಾಯಿತಿಗಳಿಂದ ಇ-ಸ್ವತ್ತು ಮಾಡಿಸಲಾಗಿದೆ. ಕೋಲಾರ ನಗರದಲ್ಲಿ 31 ಶಾಲೆಗಳಲ್ಲಿ 30 ಶಾಲೆಗಳಿಗೆ ಖಾತೆ ಮಾಡಲಾಗಿದೆ. ಪ್ರತಿ ಒಂದು ಶಾಲೆಗಳಲ್ಲಿ ಕಡ್ಡಾಯವಾಗಿ ಶಾಲೆ ದಾಖಲಾತಿಯ ಪ್ರಮಾಣ ಪತ್ರವನ್ನು (photo frame) ಕಡ್ಡಾಯವಾಗಿ ಇರಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಪದ್ಮ ಬಸವಂತಪ್ಪ ಅವರು ಮಾತನಾಡಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮುಖ್ಯೋಪಾಧ್ಯಾಯರು ಬಾಲ್ಯ ವಿವಾಹದಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದರು.
ಜಿಲ್ಲೆಯಲ್ಲಿ 98 ಬಾಲ ತಾಯಂದಿರು ಇದ್ದಾರೆ. ಅಂದರೆ ಇದು ನಮ್ಮ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ. ಈಗಾಗಲೇ 65 ಪ್ರಕರಣಗಳು ದಾಖಲಾಗಿದ್ದು, ಪ್ರಕರಣದ ಹಿನ್ನೆಲೆ ಅರಿಯಲು ನಾವುಗಳು ಪ್ರಯತ್ನಿಸಬೇಕೆಂದರು ಹಾಗೂ ಅಂತಹ ವಿವಾಹಗಳಿಗೆ ನೀಡುವ ದಂಡನೆ ಬಗ್ಗೆ ಅರಿವು ಮೂಡಿಸಬೇಕೆಂದರು.
ಚಾಲಕ ಪರವಾನಿಗೆಯಿಲ್ಲದೆ ಮಕ್ಕಳು ವಾಹನ ಚಲಾಯಿಸುತ್ತಿದ್ದಾರೆ. ಇದಕ್ಕೆ ಪೋಷಕರು ಸಹ ಜವಾಬ್ದಾರರಾಗಿದ್ದಾರೆ. ಶಾಲೆಗಳಲ್ಲಿ ಪೋಷಕರ ಸಭೆಯನ್ನು ಕರೆದು ನನ್ನನ್ನು ಸಹ ಆಹ್ವಾನಿಸಿ ಅವರೊಂದಿಗೆ ಸಂವಾದ ನಡೆಸಿ ಪೋಷಕರಿಗೆ ವಾಸ್ತವದ ಬಗ್ಗೆ ಅರಿವುಂಟು ಮಾಡಲಾಗುವುದು ಎಂದರು. ಗಣಿತ, ವಿಜ್ಞಾನ ವಿಭಾಗದಲ್ಲಿ ಶಿಕ್ಷಕರಿಗೆ ತರಬೇತಿ ನೀಡಿ ಒತ್ತು ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ Stepup Studio ಮಾಡಲು ಆಸಕ್ತಿಯಿರುವವರು ಮುಂದೆ ಬಂದರೆ ನೀಟ್, ಕೆ ಸೆಟ್, ಜೆ.ಇ.ಇ ಗೆ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲು ಅನುಕೂಲವಾಗುವುದು. 139 ಗ್ರಾಮ ಪಂಚಾಯತಿಗಳಿದ್ದು, ಅಲ್ಲಿರುವ ಶಾಲೆಗಳವರು ಪುಸ್ತಕಗಳಿಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಉತ್ತಮ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದಂತಹ ಪುಸ್ತಕಗಳನ್ನು ಸರಬರಾಜು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಪದ್ಮ ಬಸವಂತಪ್ಪ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಅವರು ಮಾತನಾಡಿ ಸಮಾಜ ಶಿಕ್ಷಕರಿಗೆ ವಿಶೇಷ ಸ್ಥಾನ ನೀಡಿದೆ. ಮಕ್ಕಳು ಮಾದಕ ವಸ್ತು ಬಳಸುತ್ತಿದ್ದಾರೆ ನಿಗಾ ಇರಲಿ, ದಾರಿತಪ್ಪಿದ ಮಕ್ಕಳಿಗೆ ಕೌನ್ಸಿಲಿಂಗ್ ಅಗತ್ಯವಿದ್ದಲ್ಲಿ ನಾವು ನಿಮ್ಮ ಜತೆಗಿರುತ್ತೇವೆ, ಕೋಲಾರವನ್ನು ಮಾದಕ, ಅಪರಾಧ ಮುಕ್ತ ಜಿಲ್ಲೆಯಾಗಿಸಲು ಸಹಕರಿಸಿ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರ ಅವರು ಮಾತನಾಡಿ ಜಿಲ್ಲೆಯಲ್ಲಿ 33 ಪದವಿ ಪೂರ್ವ ಕಾಲೇಜುಗಳಿಗೆ ಕೆನರಾ ಬ್ಯಾಂಕ್ 2 ಲಕ್ಷ ರೂ ಮೌಲ್ಯದ ದೃಷ್ಟಿಕೋನ (orientation) ಪುಸ್ತಕಗಳನ್ನು ನೀಡಲಾಗಿದೆ. ಸಿ.ಎಸ್.ಆರ್ ನಿಧಿಯಿಂದ ಹೆಣ್ಣು ಮಕ್ಕಳಿಗೆ 10,000 ರೂ.ನಂತೆ ಒಟ್ಟು ರೂ.1,35,500 ಸಿ.ಎಸ್.ಆರ್ ನಿಧಿಯಿಂದ ಹೆಣ್ಣು ಮಕ್ಕಳಿಗೆ ನೀಡಿದ್ದಾರೆ. ಕೆನರಾ ಬ್ಯಾಂಕ್ ವತಿಯಿಂದ ಕೆ.ಜಿ.ಎಫ್ನಲ್ಲಿ 13 ಲಕ್ಷದ ಮೌಲ್ಯದ ಕಂಪ್ಯೂಟರ್ಗಳನ್ನು ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ ಎಸ್. ಹೊಸಮನಿ, ಡಿ.ಡಿ.ಪಿ.ಐ ಕೃಷ್ಣಮೂರ್ತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುರಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.