ಅರಹಳ್ಳಿಯಲ್ಲಿ 37 ಹೊಸ ಮತದಾರರ ನೋಂದಣಿ ಪರಿಶೀಲನೆ ದೇಶದ ಅಭಿವೃದ್ದಿಗಾಗಿ ಮತದಾನದ ಕರ್ತವ್ಯ ಮರೆಯದಿರಿ-ಸತ್ಯಭಾಮ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ದೇಶದ ಅಭಿವೃದ್ದಿಯ ದೃಷ್ಟಿಯಿಂದ ಮತದಾನ ಕರ್ತವ್ಯವೆಂದು ಭಾವಿಸಿ ಉತ್ತಮ ನಾಯಕನ ಆಯ್ಕೆಗೆ ನಿಮ್ಮ ಪ್ರತಿಯೊಂದು ಮತವೂ ಮೌಲ್ಯವುಳ್ಳದ್ದು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ತಾಲ್ಲೂಕಿನ ಅರಹಳ್ಳಿ ಒಂದೇ ಗ್ರಾಮದ ಮತಗಟ್ಟೆಯಲ್ಲಿ ಪ್ರಸಕ್ತ ಸಾಲಿನಲ್ಲಿ 37 ಮಂದಿ ಹೊಸ ಮತದಾರರು ನೋಂದಣಿಯಾಗಿರುವ ಕುರಿತು ಪರಿಶೀಲನೆ ನಡೆಸಲು ಭೇಟಿ ನೀಡಿದ್ದ ಅವರು ಯುವ ಮತದಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಡಿಸಿಯವರು ಬರುತ್ತಾರೆಂಬ ಹಿನ್ನಲೆಯಲ್ಲಿ ಮತಗಟ್ಟೆ ಅಧಿಕಾರಿ ಹಾಗೂ ಶಿಕ್ಷಕ ಎಂ.ವೆಂಕಟೇಶ್ 37 ಮಂದಿ ಹೊಸ ಮತದಾರರನ್ನು ಮತಗಟ್ಟೆಯೂ ಆಗಿರುವ ಶಾಲೆಗೆ ಆಹ್ವಾನಿಸಿದ್ದರು.

ಪ್ರಥಮ ಬಾರಿಗೆಮತ ಖುಷಿ ತಂತು
ಜಿಲ್ಲಾಧಿಕಾರಿಗಳು ಪ್ರಥಮ ಬಾರಿ ಮತಚಲಾಯಿಸಿದ್ದಕ್ಕಾಗಿ ನಿಮಗೆ ಆದ ಅನುಭವ ತಿಳಿಸಿ ಎಂದು ಕೇಳಿದಾಗ ಯುವಕರು ನಮಗೆ ಅತ್ಯಂತ ಖುಷಿಯಾಗಿದೆ, ನಮ್ಮ ಹಕ್ಕು ಚಲಾಯಿಸುವ ಅವಕಾಶ ಸಿಕ್ಕಿದ್ದು, ಸಂತಸ ತಂದಿದೆ ಎಂದು ಉತ್ತರಿಸಿದರು.
ಹಣ, ಆಮಿಷಗಳಿಗೆ ಬಲಿಯಾಗುತ್ತೀರಾ? ಎಂಬ ಪ್ರಶ್ನೆಗೆ, ಖಂಡಿತಾ ಇಲ್ಲ, ನಮ್ಮ ಮತವನ್ನು ಮಾರಿಕೊಳ್ಳುವುದಿಲ್ಲ, ನಮಗೆ ಪಕ್ಷ ಬೇಕಾಗಿಲ್ಲ, ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವ ಪ್ರಯತ್ನವಾಗಿ ಮತ ಚಲಾಯಿಸುತ್ತೇವೆ ಎಂದು ಯುವಕರು ತಿಳಿಸಿದರು.
ಜಿಲ್ಲಾಧಿಕಾರಿಗಳು ಯುವಕರನ್ನುದ್ದೇಶಿಸಿ ಮಾತನಾಡಿ, ಮತದಾನ ಪವಿತ್ರವಾದ ಕೆಲಸ, ಇದರಿಂದ ವಿಮುಖರಾಗಬಾರದು ಎಂದು ಕಿವಿಮಾತು ಹೇಳಿ, ಚುನಾವಣಾ ಆಯೋಗ ಶೇಕಡಾವಾರು ಮತದಾನ ಹೆಚ್ಚಬೇಕು ಎಂಬ ಆಶಯ ಹೊಂದಿದೆ, ಪ್ರತಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಬರಬೇಕು ಎಂದರು.

ಅದರಲ್ಲೂ ವಿದ್ಯಾವಂತರೇ ಮತದಾನದ ದಿನ ರಜೆ ಸಿಕ್ಕಿತೆಂದು ಪ್ರವಾಸ ತೆರಳುವ ಮನಸ್ಥಿತಿ ಒಳ್ಳೆಯ ಲಕ್ಷಣವಲ್ಲ, ಇದು ದೇಶದ ಅಭಿವೃದ್ದಿಗಾಗಿ ಓರ್ವ ನಾಯಕನ ಆಯ್ಕೆಗೆ ನಿಮಗೆ ಸಿಕ್ಕ ಅವಕಾಶದಿಂದ ವಂಚಿತವಾದಂತೆ ಎಂದು ತಿಳಿಸಿದರು.
ಒಂದೇ ಗ್ರಾಮದಲ್ಲಿ 37 ಮತದಾರರು ಸೇರ್ಪಡೆಯಾಗಿರುವುದು ಊಹಾಪೋಹಗಳಿಗೆ ಅವಕಾಶ ನೀಡಿದ್ದು, ಇದೀಗ ಮತದಾರರನ್ನು ನೋಡಿ, ನಿಮ್ಮೊಂದಿಗೆ ಮಾತನಾಡಿದ ನಂತರ ತಪ್ಪಾಗಿಲ್ಲ ಎಂದು ಗೊತ್ತಾಗಿದೆ, ನೀವು ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುವುದನ್ನು ಮರೆಯದಿರಿ ಎಂದು ಡಿಸಿಯವರು ತಿಳಿಸಿದರು.
ಮತಗಟ್ಟೆ ಅಧಿಕಾರಿ ಎಂ.ವೆಂಕಟೇಶ್ ಎಲ್ಲಾ 37 ಹೊಸ ಮತದಾರರನ್ನು ಆಹ್ವಾನಿಸಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ದಾಖಲೆ ತೋರಿಸಿದ ನಂತರ ಊಹಾಪೋಹಗಳಿಗೆ ತೆರೆ ಬಿತ್ತು.
ಈ ಸಂದರ್ಭದಲ್ಲಿ ಚುನಾವನಾ ತಹಸೀಲ್ದಾರ್ ನಾಗವೇಣಿ, ಗ್ರಾ.ಪಂ ನೂತನ ಸದಸ್ಯ ಜಗದೀಶ್, ಸಿಬ್ಬಂದಿ ಗೌತಮ್, ಗ್ರಾಮ ಲೆಕ್ಕಿಗ ಗೌತಮ್, ಮುಖ್ಯ ಶಿಕ್ಷಕ ನಾರಾಯಣಸ್ವಾಮಿ, ಶಿಕ್ಷಕರಾದ ಸಾವಿತ್ರಮ್ಮ, ಮುರಳಿ,ನಾಗರತ್ನಮ್ಮ ಮತ್ತಿತರರು ಹಾಜರಿದ್ದರು.

ಕೋಲಾರ ತಾಲ್ಲೂಕಿನ ಅರಹಳ್ಳಿ ಒಂದೇ ಗ್ರಾಮದ ಮತಗಟ್ಟೆಯಲ್ಲಿ ಪ್ರಸಕ್ತ ಸಾಲಿನ ಮತದಾರರ ಪಟ್ಟಿಗೆ ಸೇರ್ಪಡೆ ಹೊಂದಿದ ಹೊಸ ಮತದಾರರೊಂದಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ.