ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಜಿಲ್ಲೆಗೆ ಖಾಯಂ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ನೀಡುವ ಜೊತೆಗೆ ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಮಾವು ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ರೈತಸಂಘದಿಂದ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ತರಕಾರಿಯೊಂದಿಗೆ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಯಾವುದೇ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯಬೇಕಾದರೆ ಜಿಲ್ಲೆಯ ಮೂಡಣಬಾಗಿಲು ಕುರುಡುಮಲೆ ಗಣಪತಿ ದೇವರ ಆಶೀರ್ವಾದ ಬೇಕು. ಆದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಮಾತ್ರ ಸಿಗುತ್ತಿಲ್ಲ.
ಒಂದು ಕಡೆ ಅತಿವೃಷ್ಠಿ, ಅನಾವೃಷ್ಠಿ ಮತ್ತೊಂದು ಕಡೆ ಭೀಕರವಾದ ಬರಗಾಲಕ್ಕೆ ಜಿಲ್ಲೆ ತುತ್ತಾಗಿದೆ. ಮತ್ತೊಂದೆಡೆ ಜಿಲ್ಲಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಜನಸಾಮಾನ್ಯರು ಜನನ ಪ್ರಮಾಣಪತ್ರದಿಂದ ಮರಣ ಪ್ರಮಾಣ ಪತ್ರದವರೆಗೂ ಲಂಚ ಲಂಚ ಎಂಬ ಭೂತ ಬಡವರನ್ನು ಹಿಂಸೆ ಮಾಡುತ್ತಿದೆ. ಹದಗೆಟ್ಟಿರುವ ಜಿಲ್ಲಾಡಳಿತದ ವಿರುದ್ಧ ದೂರು ನೀಡಲು ಖಾಯಂ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದೆ ಅನಾಥವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಹಿಂದೆ ಇದ್ದಂತಹ ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಸಚಿವ ಸಂಪುಟದಿಂದ ಕೈಬಿಟ್ಟ ನಂತರ ಸರ್ಕಾರ ಗಣರಾಜ್ಯೋತ್ಸವಕ್ಕೆ ಧ್ವಜಾರೋಹಣ ಮಾಡಲು ಸಿ.ಪಿ.ಯೋಗೇಶ್ವರ್ ಅವರನ್ನು ನೇಮಕ ಮಾಡಿ ಆದೇಶ ಮಾಡಿದ ನಂತರ ಧ್ವಜಾರೋಹಣ ಮಾಡಿ ಜಿಲ್ಲೆಯಿಂದ ನಾಪತ್ತೆಯಾಗಿರುವವರು ಇದುವರೆಗೂ ಜಿಲ್ಲೆಯ ಕಡೆ ಮುಖ ಮಾಡಿಲ್ಲ.
ಜಿಲ್ಲೆಯ 6 ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲದ ಕಾರಣ ಹೊರ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ನೀಡಬೇಕಾದ ಅನಿವಾರ್ಯವಿದೆ. ಆದರೆ ಜಿಲ್ಲೆಯ ಗಂಧ ಗಾಳಿ ಗೊತ್ತಿಲ್ಲದ ಸರ್ಕಾರದ ಒತ್ತಡಕ್ಕೆ ಮಣಿದು ಜಿಲ್ಲೆಗೆ ಬರುವ ಉಸ್ತುವಾರಿ ಸಚಿವರು ನೆಪ ಮಾತ್ರಕ್ಕೆ ಬಂದ ಪುಟ್ಟ, ಹೋದ ಪುಟ್ಟ ಎಂಬಂತಾಗಿದೆ ಎಂದು ಜಿಲ್ಲೆಯ ಜನರು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಇದೇ ತಿಂಗಳು ಮಾರ್ಚ್ 8ರಂದು ಮಂಡನೆ ಮಾಡುತ್ತಿರುವ ರಾಜ್ಯ ಬಜೆಟ್‍ನಲ್ಲಿ ಬಯಲುಸೀಮೆಯ ಕೋಲಾರ ಜಿಲ್ಲೆಗೆ ವಿಧರ್ಭ ಪ್ಯಾಕೇಜ್ ನೀಡುವ ಜೊತೆಗೆ ಅತಿವೃಷ್ಠಿ ಅನಾವೃಷ್ಠಿ ಹಾಗೂ ಮಾವು ಸಂಸ್ಕರಣೆ ಮಾಡಲು ಸರ್ಕಾರ ಬಜೆಟ್‍ನಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಮಾವು ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ರೇಷ್ಮೆ ಬೆಳೆಗಾರರ ರಕ್ಷಣೆಗೆ ಕೆಎಸ್‍ಎಂಬಿ ಪುನಶ್ಚೇತನಗೊಳಿಸಬೇಕು.
ಡಾ.ಬಸವರಾಜನ್ ವರದಿ ಜಾರಿ ಮಾಡುವ ಜೊತೆಗೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ, ಶಿಕ್ಷಣ, ಆರೋಗ್ಯ ಅಭಿವೃದ್ಧಿ ದೃಷ್ಠಿಯಿಂದ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು. ದುಬಾರಿಯಾಗುತ್ತಿರುವ ಜನಸಾಮಾನ್ಯರ ರಕ್ಷಣೆಗೆ ದಿನ ನಿತ್ಯದ ಬಳಕೆ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಹಾಗೂ ಕೃಷಿ ಯಂತ್ರೋಪಕರಣಗಳ ಬೆಲೆ, ಸ್ಥಗಿತಗೊಂಡಿರುವ ಹನಿ ನೀರಾವರಿ ಯೋಜನೆಯನ್ನು ಮುಂದುವರೆಸಿ ರೈತರ ರಕ್ಷಣೆಗೆ ನಿಲ್ಲುವ ಜೊತೆಗೆ ಒಟ್ಟಾರೆಯಾಗಿ ಜಿಲ್ಲೆಯ ಅಭಿವೃದ್ಧಿಗೆ ವಿದರ್ಭ ಪ್ಯಾಕೇಜ್ ಬಜೆಟ್‍ನಲ್ಲಿ ಘೋಷಣೆ ಮಾಡಬೇಕೆಂದು ಬಯಲು ಸೀಮೆಯ ಜಿಲ್ಲೆಯ ಸಮಸ್ತ ನಾಗರೀಕರ ಪರವಾಗಿ ಮನವಿ ಮಾಡುತ್ತಿರುವುದಾಗಿ ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶೋಭಿತಾ, ತಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ನಾಗೇಶ್, ವಡಗೂರು ಮಂಜುನಾಥ್, ಮಾಲೂರು ತಾಲೂಕು ಅಧ್ಯಕ್ಷ ಮಾಸ್ತಿ ವೆಂಕಟೇಶ್, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ರಾಜ್ಯ ಸಂಚಾಲಕ ಅನಿಲ್, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಚಲಪತಿ, ವಕ್ಕಲೇರಿ ಹನುಮಯ್ಯ, ಅಶ್ವತ್ಥಪ್ಪ., ಸುಪ್ರಿಂಚಲ, ರಾಮಕೃಷ್ಣಪ್ಪ, ಗಣೇಶ್, ಸಾಗರ್, ಹೆಬ್ಬಣಿ ಆನಂದರೆಡ್ಡಿ, ಹರೀಶ್, ಯಲ್ಲಪ್ಪ, ಮಹೇಶ್, ಕೇಶವ, ವೇಣು ಮತ್ತಿತರರು ಉಪಸ್ಥಿತರಿದ್ದರು.