ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ಸೆಪ್ಟೆಂಬರ್ 24 : ಕೋಲಾರ ನಗರಸಭೆಯ ‘ಸಿ’ ಗ್ರೂಪ್ ಪೌರಕಾರ್ಮಿಕ ಸಿಬ್ಬಂದಿಗೆ ಮೂಲಭೂತ ಸವಲತ್ತುಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರನ್ನು ಸಾಮಾಜಿಕ ಕಾರ್ಯಕರ್ತ ಗೌರಿಪೇಟೆಯ ಕೆ.ಎನ್.ರವೀಂದ್ರನಾಥ್ರವರು ಒತ್ತಾಯಿಸಿದ್ದಾರೆ.
ಕೋಲಾರ ನಗರದ ಸ್ವಚ್ಚತೆಯನ್ನು ಕಾಪಾಡುವಲ್ಲಿ ಶ್ರಮಿಸುವ, ಕಸವಿಲೇವಾರಿ ಮಾಡುವ, ಒಳಚರಂಡಿ ಸ್ವಚ್ಚತೆ ಕೆಲಸವನ್ನು ನಿರ್ವಹಿಸುವ, ನೀರು ಸರಬರಾಜು ಮಾಡುವ ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಇವರುಗಳ ಬದುಕು ಒದ್ದೆಬಟ್ಟೆಯಾಗಿದ್ದು, ಅತಂತ್ರ ಬದುಕನ್ನು ನಡೆಸಬೇಕಾಗಿದೆ ಎಂದಿದ್ದಾರೆ.
ಪೌರಕಾರ್ಮಿಕರಿಗೆ ಕೆಲಸ ಮಾಡಲು ಸುರಕ್ಷಿತ ಸಲಕರಣೆಗಳಾದ ಬೂಟು, ಹ್ಯಾಂಡ್ ಗ್ಲವ್ಸ್ಗಳು, ಮುಖ ಕವಚ, ಸ್ಯಾನಿಟೈಜರ್ಗಳನ್ನು ನಿಗಧಿತ ಪ್ರಮಾಣದಲ್ಲಿ ವಿತರಿಸಬೇಕು. ಇವರು ಕೆಲಸ ನಿರ್ವಹಿಸುಲು ಹೋಗುವ ಪ್ರದೇಶಗಳಿಗೆ ನಗರಸಭೆಯ ಸ್ಥಳದಿಂದ ಪಿಕಪ್ ಮತ್ತು ಡ್ರಾಪ್ಗೆ ವಾಹನದ ವ್ಯವಸ್ಥೆ ಮಾಡಬೇಕು. ಇವರುಗಳಿಗೆ ಬೆಳಿಗ್ಗಿನ ಮತ್ತು ಮಧ್ಯಾಹ್ನದ ಉಪಹಾರ ಊಟದ ಜೊತೆಗೆ ಮೊಟ್ಟೆ, ಹಾಲಿನಂತೆ ಪೌಷ್ಠಿಕಾಂಶದ ಆಹಾರ ನೀಡಬೇಕು. ಕೆಲಸದಿಂದ ಹಿಂದಿರುಗಿದ ನಂತರ ಅಶುದ್ಧಗೊಂಡಿರುವ ಮೈಲಿಗೆಯನ್ನು ತೊಳೆದುಕೊಳ್ಳಲು/ಸ್ವಚ್ಚಗೊಳಿಸಿಕೊಳ್ಳಲು ನಗರಸಭೆಯಲ್ಲಿ ಪ್ರತ್ಯೇಕ ಸ್ನಾನದ ಕೊಠಡಿಗಳನ್ನು ನಿರ್ಮಿಸಬೇಕು ಎಂದಿದ್ದಾರೆ.
ಪ್ರತಿ ತಿಂಗಳಿಗೆ ಒಮ್ಮೆ ವೈದ್ಯರಿಂದ ಇವರುಗಳ ವೈದ್ಯಕೀಯ ತಪಾಸಣೆಯನ್ನು ಕೈಗೊಳ್ಳಲು ವ್ಯವಸ್ಥೆಯನ್ನು ನಗರಸಭೆ ಆವರಣದಲ್ಲಿ ಮಾಡಬೇಕು. ಪೌರಕಾರ್ಮಿಕರಿಗೆ ವಸತಿಗೃಹಗಳ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದ ಮಾಡಬೇಕು. ಪ್ರತಿ ಕಾರ್ಮಿಕರಿಗೆ ಆರೋಗ್ಯ ಭಾಗ್ಯ ಕಾರ್ಡ್ ಒದಗಿಸಿ ಒಳ್ಳೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅನುವು ಮಾಡಿಕೊಡಬೇಕು. ಪೌರ ಕಾರ್ಮಿಕರ ನೌಕರರ ಭವನವನ್ನು ನಿರ್ಮಾಣ / ಸಮುದಾಯ ಭವನವನ್ನು ನಿರ್ಮಿಸಬೇಕು. ಪೌರ ಕಾರ್ಮಿಕರನ್ನು ಜೇಷ್ಠತೆ ಆಧಾರದ ಮೇಲೆ ಖಾಯಂಗೊಳಿಸಬೇಕು. ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ನೀಡಬೇಕು. ಪೌರಕಾರ್ಮಿಕರ ಪ್ರತಿ ಕುಟುಂಬಕ್ಕೂ ಉಚಿತವಾಗಿ ರೇಷನ್ ನೀಡಬೇಕು ಅಥವಾ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.