ಕುಂದಾಪುರ: ಕಳೆದ ಹಲವು ವರ್ಷಗಳಿಂದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನ್ಯಾಯಾಲಯ ಮೆಟ್ಟಿಲೇರಿದ ಬೇಳೂರು ಗ್ರಾಮದ ಸರ್ವೇ ನಂಬ್ರ 211/10ರ ಕೃಷಿ ಭೂಮಿ ವಿವಾದ ಈಗ ಮುಖ್ಯಮಂತ್ರಿ, ಗೃಹಮಂತ್ರಿಗಳ ತನಕ ಹೋಗಿದೆ.
ನಿವೃತ್ತ ಮುಖ್ಯೋಪಾಧ್ಯಾಯ ಬೇಳೂರಿನ ಆನಂದ ಶೆಟ್ಟಿ, ಬೇಳೂರು ಗ್ರಾಮದ ಸರ್ವೇ ನಂಬ್ರ 211/10ರ 57 ಸೆಂಟ್ಸ್ ಜಾಗ ತನ್ನದೆಂದು ಶಿಕ್ಷಕ ಶಶಿಧರ ಶೆಟ್ಟಿ, ರಜನಿ ಎಸ್. ಶೆಟ್ಟಿ ದಂಪತಿ ಅಕ್ರಮವಾಗಿ ವಶಪಡಿಸಿಕೊಂಡು ಕೃಷಿ ಮಾಡುತ್ತಿರುವುದಲ್ಲದೇ ತಮಗೆ ಜೀವ ಬೆದರಿಕೆ ಉಂಟು ಮಾಡುತ್ತಿದ್ದಾರೆಂದು ಹಲವು ವರ್ಷಗಳಿಂದ ದೂರು ನೀಡುತ್ತಾ ಬಂದಿದ್ದು, ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ನ್ಯಾಯಾಲಯ ನನ್ನ ಪರವಾಗಿ ನೀಡಿದ ಆದೇಶಕ್ಕೂ ಜಗ್ಗದೇ ಆರೋಪಿಗಳು ಕಾನೂನು ಬಾಹಿರ ಕೃತ್ಯ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹಮಂತ್ರಿ ಡಾ| ಪರಮೇಶ್ವರ ಅವರಿಗೆ ದೂರು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳು ಉಡುಪಿ ಜಿಲ್ಲೆಗೆ ಬಂದಾಗ 6-9-2023ರಂದು ಆನಂದ ಶೆಟ್ಟಿಯವರು ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಕಛೇರಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಅನಂತರ ಆನಂದ ಶೆಟ್ಟಿಯವರು 17-10-2023ರಂದು ಕೋಟ ಠಾಣೆಯಲ್ಲೂ ದೂರು ದಾಖಲಿಸಿದ್ದರು. ಆಮೇಲೆ 20-10-2023ರಂದು ಗೃಹ ಸಚಿವರಿಗೂ ದೂರು ಸಲ್ಲಿಸಿ, 90ರ ಹರೆಯದ ನಾನು ಹೋರಾಟ ಮಾಡಿ ಮಾನಸಿಕವಾಗಿ ನೊಂದಿದ್ದು, ದೈಹಿಕವಾಗಿ ಕುಗ್ಗಿದ್ದೇನೆ. ದಯವಿಟ್ಟು ಶೀಘ್ರ ಕ್ರಮಕೈಗೊಳ್ಳಿ ಎಂದು ವಿನಂತಿಸಿದ್ದಾರೆ. ಹಳ್ಳಿಯ ಜಾಗದ ವಿವಾದವೊಂದು ವಿಧಾನಸೌಧದ ಮೆಟ್ಟಿಲೇರಿದ ಅಪರೂಪದ ಪ್ರಕರಣ ಇದಾಗಿದೆ.