ಕೋಲಾರ:- ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಅಥವಾ ಅವರ ಅಳಿಯ ಚಿಕ್ಕಪೆದ್ದನ್ನ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದರು.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಕೆ.ಎಚ್.ಮುನಿಯಪ್ಪ, ಪಕ್ಷ ನಿಷ್ಟರಾಗಿದ್ದು, ಜಿಲ್ಲೆಯಲ್ಲಿ ಅಪಾರ ಸಂಖ್ಯೆಯ ಬೆಂಬಲಿಗರನ್ನು ಹೊಂದಿದ್ದಾರೆ, ಕ್ಷೇತ್ರದ ಸಂಪೂರ್ಣ ಪರಿಚಯ, ಜನತೆಯ ಆಶೀರ್ವಾದವೂ ಅವರಿಗಿದೆ ಎಂದು ತಿಳಿಸಿದರು.
ಮೊದಲಿಗೆ ಎಐಸಿಸಿ ಅಧ್ಯಕ್ಷ ಖರ್ಗೆಯವರನ್ನು ಭೇಟಿ ಮಾಡಿದ ಜಿಲ್ಲೆಯ ಮುಖಂಡರು, ಕೋಲಾರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಜಿಲ್ಲೆಯಲ್ಲಿ ಪಕ್ಷಕ್ಕೆ ಭದ್ರ ಬುನಾದಿಯಿದೆ, ಕೆ.ಎಚ್.ಮುನಿಯಪ್ಪ ಅಥವಾ ಅವರ ಕುಟುಂಬದವರು ಅಭ್ಯರ್ಥಿಯಾದರೆ ಗೆಲುವು ಸುಲಭ ಎಂದು ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಸ್ಪಂದಿಸಿದ ಖರ್ಗೆಯವರು ಕೆ.ಎಚ್.ಮುನಿಯಪ್ಪ ಪಕ್ಷದ ಹಿರಿಯ ನಾಯಕರಿದ್ದಾರೆ, ಎಡಗೈ ಸಮುದಾಯಕ್ಕೆ ಚಿತ್ರದುರ್ಗ, ಕೋಲಾರ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇದ್ದು, ಈ ಕುರಿತು ಚರ್ಚಿಸಿ ಟಿಕೆಟ್ ಘೋಷಿಸಲಾಗುವುದು ಎಂದು ತಿಳಿಸಿದರು ಎಂದು ಡಿಸಿಸಿ ಅಧ್ಯಕ್ಷ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಕೋಲಾರ ಕ್ಷೇತ್ರದಲ್ಲಿ ಪಕ್ಷದ ನಿಷ್ಟಾವಂತರಿಗೆ ಮಾತ್ರವೇ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮನವಿಮಾಡಿ, ಕಳೆದ ಚುನಾವಣೆಯಲ್ಲೀ ಪಕ್ಷದ ಸೋಲಿಗೆ ಕಾರಣ ಏನು ಎಂಬುದು ಎಲ್ಲರಿಗೂ ಗೊತ್ತಿದೆ, ಕೆ.ಎಚ್.ಮುನಿಯಪ್ಪ ಅವರಿಗೆ ಕ್ಷೇತ್ರದ ಜನರ ಆರ್ಶೀವಾದ ಇರುವುದರಿಂದ ಟಿಕೆಟ್ ಅವರಿಗೆ ಅಥವಾ ಅವರ ಕುಟುಂಬ ಸದಸ್ಯರಾದ ಚಿಕ್ಕಪೆದ್ದನ್ನ ಅವರಿಗೆ ನೀಡಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಕಾಂಗ್ರೆಸ್ ಜಿಲ್ಲಾ ಖಜಾಂಚಿ ರಾಮಪ್ರಸಾದ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಾಮಲಿಂಗಾರೆಡ್ಡಿ, ಪ್ರಸಾದ್ಬಾಬು,ಮಧು, ವಿಜಯನಾರಸಿಂಹ ಮತ್ತಿತರರಿದ್ದರು.