

ಶ್ರೀನಿವಾಸಪುರ: ಪಟ್ಟಣದ ತಾಲೂಕು ವಕೀಲರ ಸಂಘದ ವತಿಯಿಂದ, ಹಿರಿಯ ವಕೀಲ ಹಾಗೂ ಕರ್ನಾಟಕ ರಾಜ್ಯ ವಕೀಲರ ಸಂಘದ ಸದಸ್ಯರಾದ ವೈ.ಆರ್. ಸದಾಶಿವಾರೆಡ್ಡಿ ಅವರ ಮೇಲೆ ಅಪರಿಚಿತರಿಂದ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಸೋಮವಾರ ತಹಶೀಲ್ದಾರ್ ಜಿ.ಎನ್. ಸುದೀಂದ್ರರವರ ಮೂಲಕ ಮನವಿ ಪತ್ರವನ್ನು ನೀಡಲಾಯಿತು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ವಿ. ಜಯರಾಮೇಗೌಡ ಮಾತನಾಡಿ, “ನಮ್ಮ ತಾಲ್ಲೂಕಿನವರು ಆದ ವೈ.ಆರ್. ಸದಾಶಿವಾರೆಡ್ಡಿ ಅವರ ಮೇಲೆ ಎ.16 ರಂದು ಬೆಳಿಗ್ಗೆ 8:30ಕ್ಕೆ ಬೆಂಗಳೂರಿನ ಕಚೇರಿಯಲ್ಲಿ ಹಲ್ಲೆ ನಡೆಸಲಾಗಿದೆ.
ಅಪರಿಚಿತ ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕು,” ಎಂದು ಆಗ್ರಹಿಸಿದರು.
ವಕೀಲರ ರಕ್ಷಣೆಗಾಗಿ ವಕೀಲರ ರಕ್ಷಣಾ ಕಾನೂನನ್ನು ಕೂಡಲೇ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲ ಸಂಘದ ಕಾರ್ಯದರ್ಶಿ ಎ.ಎನ್. ಶಂಕರಪ್ಪ ನಾಯಕ್, ವಕೀಲರಾದ ಶ್ರೀನಿವಾಸ್ ಗೌಡ, ಶ್ರೀನಿವಾಸ ಶೆಟ್ಟಿ, ಶಿವಶಂಕರ್, ವಿನಯ್ ಕುಮಾರ್, ಲೋಕೇಶ್, ನಾರಾಯಣಸ್ವಾಮಿ, ಸೌಭಾಗ್ಯ ಹಾಗೂ ಇತರರು ಉಪಸ್ಥಿತರಿದ್ದರು.