

ಕೋಲಾರ:- ಜಾಗದ ಸಮಸ್ಯೆಯಿಂದ ಬಳಲುತ್ತಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಯ ಕಾಯಕಲ್ಪಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿಯೂ ಜಿಲ್ಲಾಧಿಕಾರಿ ಅಕ್ರಂಪಾಷಾ ಭರವಸೆ ನೀಡಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳು, ವಿವಿಧ ಮಂಡಿ ಮಾಲೀಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
1979ರಲ್ಲಿ ಆರಂಭವಾಗಿರುವ ಕೋಲಾರ ಮಾರುಕಟ್ಟೆಯು ಅಂದಿನಿಂದಲೂ ಅಷ್ಟೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಸ್ಯೆಗಳು ಹೆಚ್ಚಾಗಿವೆ. ಹೀಗಾಗಿ ಸೌಕರ್ಯಗಳನ್ನು ಕಲ್ಪಿಸಿ ಆಧುನಿಕ ಮಾರುಕಟ್ಟೆಯಾಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ಮತ್ತು ಹೆಚ್ಚುವರಿ ಜಾಗದ ಬೇಡಿಕೆ ಈಡೇರಿಕೆಗೆ ಕ್ರಮವಹಿಸುವುದಾಗಿಯೂ ತಿಳಿಸಿದರು.
ಎಪಿಎಂಸಿಯಲ್ಲಿರುವ ಮೂಲಭೂತ ಸೌಕರ್ಯಗಳು, ರೈತರು, ಮಂಡಿ ಮಾಲೀಕರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಅರಿತುಕೊಂಡಿದ್ದೇನೆ. ಮೂಲಭೂತ ಸೌಕರ್ಯ, ಕುಡಿಯುವ ನೀರು, ರಸ್ತೆ ಸಮಸ್ಯೆ, ಸ್ವಚ್ಛತೆಯ ಸಮಸ್ಯೆ ಹೆಚ್ಚಾಗಿದೆ. ಪ್ರಮುಖವಾಗಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಹೆಚ್ಚಿನ ಸ್ಥಳಾವಕಾಶ ಬೇಕಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಭೆ ನಡೆಸಿ, ಸಂಚಾರ ದಟ್ಟಣೆ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಪ್ರಮುಖವಾಗಿ ಟೊಮೇಟೊ ಮಾರುಕಟ್ಟೆಗೆ ಮಡೇರಹಳ್ಳಿ ಸಮೀಪ 36 ಎಕರೆ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಟೇಕಲ್ ಭಾಗದಲ್ಲಿನ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ, ಕೆಲಸವಿಲ್ಲದೆ ಸುಮಾರು 2 ಸಾವಿರಕ್ಕೂ ಹೆಚ್ಚಿನ ಕಲ್ಲುಕುಟುಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ನಾನೂ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿ, ಪುನಃ ಚರ್ಚಿಸಲಾಗುವುದು. ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.
ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ನಗರ ಪ್ರದೇಶಗಳಲ್ಲಿ ಸಮಸ್ಯೆಯಿಲ್ಲದಿರುವುದು ಹಾಗೂ ಗ್ರಾಮೀಣ ಭಾಗದ 2-3 ಕಡೆಗಳಲ್ಲಿ ಸಮಸ್ಯೆಯಿರುವುದು ಕಂಡುಬಂದಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಒ ಕ್ರಮವಹಿಸಿದ್ದಾರೆ. ಸದ್ಯ ನಗರ ಪ್ರದೇಶದಲ್ಲಿ ಕೇವಲ 3 ಟ್ಯಾಂಕರ್ ಮಾತ್ರವೇ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಗತ್ಯವಿದ್ದರೆ ಮತ್ತಷ್ಟು ಹೆಚ್ಚಿಸಲಾಗುವುದು ಎಂದರು.
ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಮಾತನಾಡಿ, ಸದ್ಯದ ಮಾರುಕಟ್ಟೆ ವಿಸ್ತೀರ್ಣವು 18.31 ಎಕರೆಯಿದ್ದು, ಮಡೇರಹಳ್ಳಿ ಸಮೀಪ ಅರಣ್ಯ ಇಲಾಖೆಯ 36 ಎಕರೆಯನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಡತವು ಕೇಂದ್ರ ಸರಕಾರದ ಹಂತದಲ್ಲಿದ್ದು, ಅದನ್ನು ವಿಲೇವಾರಿ ಮಾಡಿಕೊಟ್ಟರೆ ಅನುಕೂಲವಾಗಲಿದೆ ಎಂದರು.
ಎಪಿಎಂಸಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 75ರ ಸರ್ವೀಸ್ ರಸ್ತೆಗೆ ಡಾಂಬರು ಹಾಕಿಸಿಕೊಡಬೇಕು. ಕಸ ವಿಲೇವಾರಿಗೆ ಕನಿಷ್ಠ 5 ಎಕರೆ ಜಾಗ ಮಂಜೂರು ಮಾಡಿಕೊಡುವ ಜತೆಗೆ ಸಿಬ್ಬಂದಿ ಕೊರತೆಯನ್ನು ನಿವಾರಿಸಿಕೊಡುವಂತೆ ಮನವಿ ಮಾಡಿದರು.
ಕೆ.ಎನ್.ಎನ್. ಮಂಡಿ ಮಾಲೀಕ ಕೆ.ಎನ್.ಪ್ರಕಾಶ್ ಮಾತನಾಡಿ, ಸ್ವಚ್ಛತೆ ಸಮಸ್ಯೆ ಹೆಚ್ಚಾಗಿದ್ದು, 10 ಎಕರೆ ಜಾಗ ನೀಡಿದರೆ ಅನುಕೂಲವಾಗಲಿದೆ. ನೀರಿನ ವ್ಯವಸ್ಥೆ ಕಲ್ಪಿಸಬೇಕು. ತರಕಾರಿ ಮಾರಾಟಗಾರರಿಕೆ ವ್ಯವಸ್ಥಿತವಾಗಿ ಅಂಗಡಿಗಳನ್ನು ಮಾಡಿಕೊಡದೆ ತೊಂದರೆಯಾಗುತ್ತಿದ್ದು ಫೆಡರೇಶನ್ ಜಾಗವನ್ನು ಎಪಿಎಂಸಿ ಸುಪರ್ದಿಗೆ ಪಡೆದು, ಶೆಡ್ ನಿರ್ಮಾಣ ಮಾಡಿಕೊಡಬೇಕು ಎಂದರು.
ಹೈವೇ ಪ್ರಾಧಿಕಾರದವರು ನಮ್ಮ ರಸ್ತೆಯನ್ನು ಹಾಳು ಮಾಡಿದ್ದು, ಡಾಂಬರೀಕರಣ ಮಾಡಿಸಿಕೊಡಬೇಕು. ಸಿಬ್ಬಂದಿ ಕೊರತೆ ನೀಗಿಸಬೇಕು, ಮಾರುಕಟ್ಟೆಯಲ್ಲಿ ರೈತ ಭವನ ನಿರ್ಮಿಸಿಕೊಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಡಿಸಿ ಗಮನಕ್ಕೆ ತಂದರು. ಇದಕ್ಕೆ ಡಿಸಿ ಅಕ್ರಂ ಪಾಷಾ ಸಮಸ್ಯೆಗಳನ್ನು ಬಗೆಹರಿಸಿ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದರು.
ಸಭೆಯಲ್ಲಿ ಎಪಿಎಂಸಿ ಸಹಾಯಕ ನಿರ್ದೇಶಕ ರವಿಕುಮಾರ್, ವಿವಿಧ ಮಂಡಿಗಳ ಮಾಲೀಕರಾದ ಕೆ.ವಿ.ಸಿ.ಗೋವಿಂದಪ್ಪ, ಕೆ.ಎನ್.ಎಂ. ಶ್ರೀನಿವಾಸ್, ಎಸ್.ವಿ.ಟಿ.ಸುರೇಶ್, ಎಂ.ಎಸ್.ಆರ್.ಶಂಕರ್, ಎಸ್.ಎಂ.ಎಸ್.ಸಂತೋಷ್, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಮುನಿರಾಜು, ಕಚೇರಿಯ ಮೂರ್ತಿ, ಅರುಣಾ ಮತ್ತಿತರರಿದ್ದರು.