ಎಪಿಎಂಸಿ ಮಾರುಕಟ್ಟೆ ವರ್ತಕರು ಸೋಮವಾರ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಎಪಿಎಂಸಿ ಮಾರುಕಟ್ಟೆ ಬಂದ್‌ಗೆ ಬೆಂಬಲ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಎಪಿಎಂಸಿ ಮಾರುಕಟ್ಟೆ ವರ್ತಕರು ಸೋಮವಾರ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಎಪಿಎಂಸಿ ಮಾರುಕಟ್ಟೆ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.
  ಬೆಳಿಗ್ಗೆ ಮಾರುಕಟ್ಟೆಗೆ ಆಗಮಿಸಿದ ವರ್ತಕರು, ಮಾರುಕಟ್ಟೆ ಪ್ರವೇಶ ದ್ವಾರದಲ್ಲಿ ಬೆಂಕಿ ಹಾಕಿ ಲಾರಿಗಳು ಮಾರುಕಟ್ಟೆ ಪ್ರವೇಶಿಸುವುದನ್ನು ತಡೆದರು. ಅನಂತರ ಕೇಂದ್ರ  ಸರ್ಕಾರದ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಸೂದೆ ವಿರುದ್ಧ ಘೋಷಣೆ ಕೂಗಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.    ಈ ಸಂದರ್ಭದಲ್ಲಿ ಪ್ರತಿಭಟನ ನಿರತ ವರ್ತಕರನ್ನು ಉದ್ದೇಶಿಸಿ ಟೊಮೆಟೊ ವರ್ತಕರ ಸಂಘದ ಅಧ್ಯಕ್ಷ ಎಚ್‌.ರವೀಂದ್ರರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಒಂದು ಒಪ್ಪಿತ ವ್ಯವಸ್ಥೆಯನ್ನು ಹಾಳುಗೆಡುವುತ್ತಿದೆ. ಮಾರುಕಟ್ಟೆ ಒಳಗೆ ಹಾಗೂ ಹೊರಗೆ ಶೇ.1ರಷ್ಟು ಸೆಸ್‌ ವಿಧಿಸುವುದರ ಮೂಲಕ ವ್ಯಾಪಾರಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿದರು.    ವರ್ತಕರಾದ ವೆಂಕಟರಾಮರೆಡ್ಡಿ, ದಿವಾಕರ್‌, ಸರ್ದಾರ್‌ ಪಾಷ, ವರದರಾಜು, ಶ್ರೀನಿವಾಸರೆಡ್ಡಿ, ಚಂದ್ರ, ಬಾಬು, ಬೈರೆಡ್ಡಿ, ಶಿವಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.