

ಕುಂದಾಪುರ; ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ತಾಲೂಕು ಘಟಕದ 2023 -24 ಸಾಲಿನ ವಾರ್ಷಿಕ ಮಹಾಸಭೆಯು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಶ್ರೀ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಉಪಸಭಾಪತಿ ಡಾ. ಉಮೇಶ್ ಪುತ್ರನ್ ಆಹ್ವಾನಿತ ಸದಸ್ಯರನ್ನು ಸ್ವಾಗತಿಸಿದರು. ಅಧ್ಯಕ್ಷ ಶ್ರೀ ಜಯಕರ್ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆ ನಡೆದು ಬಂದ ದಾರಿ, ಸಂಸ್ಥೆ ನಡೆಸುತ್ತಿರುವ ರಕ್ತ ನಿಧಿ ಹಾಗೂ ಜನೌಷಧಿ ಕೇಂದ್ರದ ಚಟುವಟಿಕೆ ಮತ್ತು ಸಂಸ್ಥೆಯ ಇತರೇ ಮಾನವೀಯ ಜನೋಪಯೋಗಿ ಸೇವಾ ಕಾರ್ಯಕ್ರಮಗಳನ್ನು ತಿಳಿಸಿದರು. ಕಾರ್ಯದರ್ಶಿ ಶ್ರಿ ಸೀತಾರಾಮ ಶೆಟ್ಟಿಯವರು 2023-24ರ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಶ್ರೀ ಶಿವರಾಮ ಶೆಟ್ಟಿ ಸಂಸ್ಥೆಯ 2023-24ರ ಲೆಕ್ಕ ಪರಿಶೋಧನೆಯ ವರದಿ ಮತ್ತು 2024-25ರ ಬಜೆಟ್ ಮಂಡಿಸಿದರು. ವೀಕ್ಷಕರಾಗಿ ಆಗಮಿಸಿದ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶ್ರೀ ಗಣನಾಥ್ ಶೆಟ್ಟಿ ಎಕ್ಕಾರ್ ತಾಲೂಕು ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದರು ಮತ್ತು ಮುಂದೆ ಕೈಗೊಳ್ಳುವ “ರೆಡ್ ಕ್ರಾಸ್ ಹಿರಿಯ ನಾಗರಿಕರ ಮನೆ” ಯೋಜನೆಗೆ ಶುಭ ಕೋರಿದರು.