ಕೋಲಾರ; ಜು.18: ಟೊಮೇಟೊ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ರಕ್ಷಣೆಗೆ ಪ್ರತಿ ಕೆಜಿ ಟೊಮೇಟೊಗೆ 10 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿ, ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಬೇಕೆಂದು ರೈತಸಂಘದಿಂದ ಟೊಮೇಟೊ ಸಮೇತ ಎಪಿಎಂಸಿ ಮಾರುಕಟ್ಟೆಯಿಂದ ಮೆಕ್ಕೆ ವೃತ್ತದವರೆಗೆ ಟ್ರಾಕ್ಟರ್ ರ್ಯಾಲಿ ನಡೆಸಿ, ಉಪ ವಿಭಾಗಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಹಸಿವೆಂಬ ಮಹಾ ಮಾರಿಗೆ ಕೃಷಿ ಎಂಬ ಔಷಧಿಗೆ ಹೆಚ್ಚಿನ ಆದ್ಯತೆ ನೀಡಿ ದೇಶದ ಕೋಟ್ಯಾಂತರ ಜನರ ಹಸಿವನ್ನು ನೀಗಿಸದೇ ಹೋದರೆ ತುತ್ತು ಅನ್ನಕ್ಕಾಗಿ ಅನ್ನದಾತನೇ ಕಾನೂನು ಕೈಗೆತ್ತಿಕೊಳ್ಳುವ ಮುಖಾಂತರ ದೇಶದಲ್ಲಿ ಆಹಾರ ಕ್ರಾಂತಿ ನಡೆಯುವ ಕಾಲ ದೂರವಿಲ್ಲವೆಂದು ಸರ್ಕಾರಗಳಿಗೆ ರೈತಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಎಚ್ಚರಿಕೆ ನೀಡಿದರು.
ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮತ್ತು ಕೆಎನ್ಎನ್ ಪ್ರಕಾಶ್ ಮಾತನಾಡಿ, ಟೊಮೇಟೊ ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಿ, ಪ್ರತಿದಿನ ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಇಲ್ಲದ ಟೊಮೇಟೊ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ನೀಡಬೇಕು. ಇಲ್ಲವಾದರೆ ಕೋಲಾರ ಜಿಲ್ಲೆಯ ಟೊಮೇಟೊವನ್ನೇ ಸಂಪೂರ್ಣವಾಗಿ ನಿಷೇಧ ಮಾಡುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಕೃಷಿಯನ್ನೇ ಜೀವಾಳವೆಂದು ನಂಬಿರುವ ರೈತನ ಬದುಕಿನಲ್ಲಿ ಸಾಂಕ್ರಾಮಿಕ ರೋಗಗಳು ಪ್ರಕೃತಿ ವಿಕೋಪ ಚೆಲ್ಲಾಟವಾಡುವ ಜೊತೆಗೆ ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ರೋಗಗಳಿಗೆ ತುತ್ತಾಗುವ ಜೊತೆಗೆ ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತಕ್ಕೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದ ಹಾಗೆ ರೈತನ ಬದುಕು ಹಳ್ಳಿಗಳಲ್ಲಿ ಖಾಸಗಿ ಸಾಲ ಮಾಡಿ ಬೆಳೆದ ಬೆಳೆಗೆ ಬೆಲೆ ಇಲ್ಲದೆ ರಸ್ತೆಗೆ ಸುರಿಯುತ್ತಿದ್ದರೂ ಕನಿಷ್ಠಪಕ್ಷ ಸೌಜನ್ಯಕ್ಕಾದರೂ ಜನಪ್ರತಿನಿಧಿಗಳು ಟೊಮೇಟೊ ಬೆಳೆಗಾರರ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿಲ್ಲವೆಂದು ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರ ಹಿಡಿಯುವ ಸರ್ಕಾರಗಳು ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಮೂರೂ ಪಕ್ಷಗಳು ವಿಫಲವಾಗಿವೆ. ಕೋವಿಡ್-19 ಎರಡು ವರ್ಷಗಳ ದರ್ಬಾರಿಗೆ ರೈತರ ಬದುಕು ಬೀದಿಗೆ ಬಿದ್ದು ಮತ್ತೆ ಖಾಸಗಿ ಸಾಲ ಮಾಡಿ ಬೆಳೆದಿರುವ ಜಿಲ್ಲೆಯ ಸಾವಿರಾರು ಹೆಕ್ಟೇರ್ ಟೊಮೇಟೊ ಉತ್ತಮ ಫಸಲು ಮಾರುಕಟ್ಟೆಗೆ ಬರುವ ಸಮಯದಲ್ಲಿ ಸಾವಿರಾರು ಬಾಕ್ಸ್ಗಳು ಹರಾಜು ಇಲ್ಲದೆ 20 ರಿಂದ 50ರೂಗೆ ಮಾರಾಟವಾಗುತ್ತಿರುವುದರಿಂದ ಹಾಕಿದ ಬಂಡವಾಳ ಕೈಗೆ ಸಿಗದೆ ಸರ್ಕಾರ ನೀಡುವ ಬೆಂಬಲ ಬೆಲೆಗಾಗಿ ರೈತರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸರ್ಕಾರ ಕೂಡಲೇ ಸ್ಪಂದಿಸಿ ಪ್ರತಿ ಕೆಜಿಗೆ 10ರೂಪಾಯಿ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯ ಮಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ದುಬಾರಿಯಾಗಿರುವ ರಸಗೊಬ್ಬರ, ಕೀಟನಾಶಕ ಕೃಷಿ ಕೂಲಿಕಾರ್ಮಿಕರ ವೆಚ್ಚ ಸೇರಿಸಿ 1 ಎಕರೆ ಟೊಮೇಟೊ ಬೆಳೆಯಬೇಕಾದರೆ ಕನಿಷ್ಠ 2 ಲಕ್ಷ ಬಂಡವಾಳ ಹಾಕಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ 1 ಬಾಕ್ಸ್ಗೆ 300 ರೂ ಬೆಲೆ ಇದ್ದು, ಯಾವುದೇ ರೋಗವಿಲ್ಲದಿದ್ದರೆ ಹಾಕಿದ ಬಂಡವಾಳ ಕೈಗೆ ಸಿಗುತ್ತದೆ. ಇತ್ತೀಚೆಗೆ ಏಕಾಏಕಿ ಬೆಲೆ ಕುಸಿತ ಹಾಗೂ ಬೆಳೆಗೆ ಬಾಧಿಸುತ್ತಿರುವ ನುಸಿ, ಚುಕ್ಕೆ, ರೋಸ್, ಜಾಂಡೀಸ್ನಿಂದ ಮಾರುಕಟ್ಟೆಯಲ್ಲಿ ಟೊಮೇಟೊ ಹರಾಜು ಇಲ್ಲದೆ ರಸ್ತೆಗೆ ಚೆಲ್ಲಿರುವ ದೃಶ್ಯಗಳು ಜಿಲ್ಲಾಡಳಿತದ ಗಮನಕ್ಕೆ ಇದ್ದರೂ ಸಮಸ್ಯೆ ಗಂಬೀರವಾಗಿ ಪರಿಗಣಿಸದೇ ಇರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು.
ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಿ:
ಏಷ್ಯಾದಲ್ಲೇ 2ನೇ ಅತಿದೊಡ್ಡ ಮಾರುಕಟ್ಟೆ ಜಾಗದ ಸಮಸ್ಯೆಯೂ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಟೊಮೇಟೊ ಖರೀದಿ ಮಾಡುವ ವ್ಯಾಪಾರಸ್ಥರು ಲೋಡ್ ಮಾಡಲು ಮಳೆ ಅಡ್ಡಿ ಹಾಗೂ ಟ್ರಾಫಿಕ್ ಸಮಸ್ಯೆಯಾದಾಗ 1 ಬಾಕ್ಸ್ ನ ಮೇಲೆ 100 ರೂಪಾಯಿ ಬೆಲೆ ಕಡಿತವಾಗುತ್ತದೆ. ಈ ಸಮಸ್ಯೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಇದ್ದರೂ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಟೊಮೇಟೊ ಕ್ಯಾಪ್ಸಿಕಂಗೂ ಬೆಳೆ ವಿಮೆ ಜಾರಿಯಾಗಲಿ:
ವಿಮಾ ಕಂಪನಿಗಳು ಮಳೆಯಾಶ್ರಿತ ರಾಗಿ, ಜೋಳ, ತೊಗರಿ, ನೆಲಗಡಲೆ, ಬೆಳೆಗಳಿಗೆ ವಿಮೆ ಕಟ್ಟಿಸಿಕೊಂಡು ಲಕ್ಷಾಂತರ ರೂಪಾಯಿ ಬಂಡವಾಳ ಹಾಕುವ ಟೊಮೇಟೊ ಕ್ಯಾಪ್ಸಿಕಂ ಮತ್ತಿತರರ ವಾಣಿಜ್ಯ ಬೆಳೆಗಳಿಗೆ ವಿಮೆಯನ್ನು ಕಟ್ಟಿಸಿಕೊಳ್ಳದೆ ಸರ್ಕಾರದ ದಿಕ್ಕು ತಪ್ಪಿಸುತ್ತಿದ್ದಾರೆ. ಸಂಬಂಧಪಟ್ಟ ವಿಮಾ ಕಂಪನಿಗಳು, ರೈತರು ಅಧಿಕಾರಿಗಳ ಸಭೆ ಕರೆದು ವಾಣಿಜ್ಯ ಬೆಳೆಗಳಿಗೂ ವಿಮಾ ಪಾಲಿಸಿ ಕಡ್ಡಾಯ ಮಾಡುವ ಆದೇಶ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ವಿಭಾಗಾಧಿಕಾರಿUಳಾದ ಆನಂದ್ ಪ್ರಕಾಶ್ ಮಿನಾ ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆ ಕರೆದು ವರದಿ ತರಿಸಿಕೊಂಡು ಸರ್ಕಾರಕ್ಕೆ ಕಳುಹಿಸಿ ಬೆಂಬಲ ಬೆಲೆ ಜೊತೆಗೆ ಮಾರುಕಟ್ಟೆ ಜಾಗ ಹಾಗೂ ನಕಲಿ ಬಿತ್ತನೆ ಬೀಜ , ರಸಗೊಬ್ಬರಗಳ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಯುವ ರೈತ ಮುಖಂಡ ನಂಗಲಿ ಕಿಶೋರ್, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಈಕಂಬಳ್ಳಿ ಮಂಜುನಾಥ್, ತೆರ್ನಹಳ್ಳಿ ಆಂಜಿನಪ್ಪ, ಮಾಸ್ತಿ ಯಲ್ಲಣ್ಣ, ಹರೀಶ್, ಚಂದ್ರಪ್ಪ, ಫಾರೂಖ್ ಪಾಷ, ಬಂಗಾರಿ ಮಂಜು, ರಾಜೇಶ್, ಮರಗಲ್ ಮುನಿಯಪ್ಪ, ಸಂದೀಪ್ರೆಡ್ಡಿ, ಸಂದೀಪ್ ಗೌಡ, ಅಜಯ್, ಮಣಿ, ರಂಜಿತ್, ಅಭಿಷೇಕ್, ಪಾರಂಡಹಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ನಾರಾಯಣಗೌಡ, ವೆಂಕಟೇಶಪ್ಪ, ಸುಪ್ರೀಂ ಚಲ ಉಪಸ್ಥಿತರಿದ್ದರು.