ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ; ಸ್ಥಳೀಯ ವಿಧಾನ ಪರಿಷತ್ ಚುನಾವಣೆಗೆ ನಡೆದಿದ್ದ ಟಿಕೇಟ್ ಪೈಪೋಟಿ ಮುಗಿದಿದ್ದರೂ ಕಾಂಗ್ರೇಸ್‍ನಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಅಸಮಧಾನ ಹೊಗೆಯಾಡುತ್ತಿದೆ. ಕೋಲಾರ ಜಿಲ್ಲಾ ಮಾಜಿ ಕಾಂಗ್ರೇಸ್ ಅಧ್ಯಕ್ಷ ಅನಿಲ್ ಕುಮಾರಿಗೆ ಕಾಂಗ್ರೇಸ್ ಟಿಕೇಟ್ ಘೋಷಣೆಯಾಗಿದೆ.ಮಾಜಿ ಕೇಂದ್ರ ರೈಲ್ವೆ ಸಚಿವ ಕೆ.ಹೆಚ್.ಮುನಿಯಪ್ಪರ ವಿರೋಧ ನಡುವೆಯೂ ಅನಿಲ್ ಕುಮಾರ್ ಟಿಕೇಟ್ ಪಡೆದುಕೊಳ್ಳುವಲ್ಲಿ ಯಶಸ್ವಿಗೊಂಡಿದ್ದಾರೆ.ಕಾಂಗ್ರೇಸ್‍ನಲ್ಲಿ ಬುಗಿಲೆದ್ದಿರುವ ಅಸಮಧಾನ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ವರಧಾನವಾದರೂ ಅಚ್ಚರಿ ಪಡೆಯುವಂತಿಲ್ಲ.
ಕಳೆದ ಬಾರಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅನಿಲ್ ಕುಮಾರ್ ಕಾಂಗ್ರೇಸ್ ಟಿಕೇಟ್ ಪಡೆದುಕೊಂಡಿದ್ದರು.ಆ ಸಮಯದಲ್ಲಿ ಕೆ.ಹೆಚ್.ಮುನಿಯಪ್ಪರ ಪಕ್ಕಾ ಬೆಂಬಲಿಗರಾಗಿ ಗುರ್ತಿಸಿಕೊಂಡಿದ್ದ ಅವರನ್ನು ಕಾಂಗ್ರೇಸ್ಸಿಗರೇ ಸೋಲಿಸಿದ್ದರು.ಅವರ ವಿರುದ್ದ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಮನೋಹರ್ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದರು.ಅನಿಲ್‍ಕುಮಾರ್ ಸೋಲಿಗೆ ನಾವೇ ನಾಯಕರು ಎಂದು ಕಾಂಗ್ರೇಸ್ ಹೈಕಮ್ಯಾಂಡ್ ಜೊತೆಯಲ್ಲಿ ಗುರ್ತಿಸಿಕೊಂಡಿರುವವರೇ ಸೋಲಿಗೆ ಕಾರಣರಾಗಿದ್ದ ವಿಷಯ ಎಲ್ಲರಿಗೂ ತಿಳಿದಿತ್ತು.ಈಗ ಅದೇ ನಾಯಕರು ಅನಿಲ್ ಕುಮಾರ್‍ಗೆ ಟಿಕೇಟ್ ಕೊಡಿಸಿ ಗೆಲ್ಲಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಕೆ.ಹೆಚ್. ಬೆಂಬಲಿಗರ ಕಣ್ಣಗಳನ್ನು ಕೆಂಪಗೆ ಮಾಡಿದೆ.
ಈ ಬಾರಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸೋಲೇ ಕಾಣದ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ರವರಿಗೆ ಟಿಕೇಟ್ ತಪ್ಪಿಸಲು ಕೋಲಾರ ಜಿಲ್ಲೆಯ ಕಾಂಗ್ರೇಸ್ ಶಾಸಕರು ನಡೆಸಿದ್ದ ಪ್ರಯತ್ನದಲ್ಲಿ ಅನಿಲ್ ಕುಮಾರ್ ಸಹ ಗುರ್ತಿಸಿಕೊಂಡಿದ್ದರು.ಎಷ್ಟೇ ತಿಪ್ಪರಲಾಗ ಹಾಕಿದರೂ ಟಿಕೇಟ್ ತಪ್ಪಿಸಲು ಸಾಧ್ಯವಾಗಲಿಲ್ಲ.ಆದರೆ ಚುನಾವಣೆಯಲ್ಲಿ ಕೆ.ಹೆಚ್.ಮುನಿಯಪ್ಪ ಅವರನ್ನು ಸೋಲಿಸುವ ಭರಾಟೆಯಲ್ಲಿ ಬಿಜೆಪಿಗೆ ಅನುಕೂಲವಾತಾವರಣ ಉಂಟಾಗಿದ್ದರಿಂದ ಲೋಕಸಭೆಗೆ ಎಸ್.ಮುನಿಸ್ವಾಮಿ ಪ್ರವೇಶ ಮಾಡಲು ಅನುಕೂಲವಾಯಿತು.ಕಾಂಗ್ರೇಸ್ ಸೋಲಿಗೆ ಕಾರಣಕರ್ತರಾದವರಿಗೆ ಎಂಎಲ್‍ಸಿ ಟಿಕೇಟ್ ನೀಡಿರುವುದು ಯಾವ ನ್ಯಾಯ ಎಂಬುದು ಕೆ.ಹೆಚ್.ಬೆಂಬಲಿಗರ ವಾದವೂ ಆಗಿದೆ.
ಇದೀಗ ಮತ್ತೇ ಕಾಂಗ್ರೇಸ್‍ನಲ್ಲಿ ಬಣ ರಾಜಕೀಯ ಪ್ರಾರಂಭವಾಗಿದೆ.ಜಿಲ್ಲೆಯಲ್ಲಿ ಕೆ.ಹೆಚ್.ಮುನಿಯಪ್ಪರದ್ದೇ ಆದ ಹವಾ ಇಂದಿಗೂ ಇದೆ.ಕೆ.ಹೆಚ್. ಅವರನ್ನ ಸೋಲಿಸಲು ಗುರ್ತಿಸಿಕೊಂಡಿದ್ದವರ ಜೊತೆಯಲ್ಲಿ ಅನಿಲ್ ಕುಮಾರ್ ಸಹ ಒಬ್ಬರು ಎಂಬ ವಿಷಯ ಜಗಜ್ಜಾಹೀರಾವಾಗಿದೆ.ಅನಿಲ್ ಕುಮಾರ್‍ಗೆ ಕಾಂಗ್ರೇಸ್ ಟಿಕೇಟ್ ಘೋಷಣೆ ಮಾಡಿರುವುದು ಸಹಜವಾಗಿ ಕೆ.ಹೆಚ್.ರವರ ಬಣಕ್ಕೆ ಅಸಮಧಾನ ತಂದಿದೆ.ಕಾಂಗ್ರೇಸ್ ಪಕ್ಷದಲ್ಲೇ ಇದ್ದು ಕೊಂಡು ಕೆ.ಹೆಚ್.ಮುನಿಯಪ್ಪರ ವಿರುದ್ದ ದುಡಿದಿರುವವರಿಗೆ ಸೂಕ್ತ ಪಾಠ ಕಲಿಸಲು ಹಾಗು ಸೋಲಿಸಲು ಈಗಿನಿಂದಲೇ ಅನಿಲ್ ಕುಮಾರ್ ವಿರುದ್ದ ಪ್ಲಾನ್ ಹಾಕಿಕೊಂಡು ಪ್ರತಿ ತಾಲ್ಲೂಕಿನಲ್ಲಿ ಕೆಲಸ ಆರಂಭಗೊಂಡಿದೆ.
ತನ್ನದೇ ಆದ ಚಾಪನ್ನು ಬೆಳೆಸಿಕೊಂಡು ರಾಜಕೀಯಕ್ಕೆ ಪ್ರವೇಶ ಮಾಡಿ ಎರಡು ಬಾರಿ ಶಾಸಕರಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಲಾರ ಕ್ಷೇತ್ರದ ಮಾಜಿ ಶಾಸಕ ವರ್ತೂರ್ ಪ್ರಕಾಶ್ ರವರು ಸಹ ಅನಿಲ್ ಕುಮಾರ್ ವಿರುದ್ದ ರಾಜಕೀಯ ಸೇಡಿಗೆ ಕಾಯುತ್ತಿದ್ದವರು.ವರ್ತೂರ್ ಪ್ರಕಾಶ್ ರವರ ಸೋಲಿಗೂ ಕಾರಣಕರ್ತರಾಗಿದ್ದ ಅನಿಲ್ ಕುಮಾರ್ ವಿರುದ್ದ ವರ್ತೂರ್ ಬೆಂಬಲಿಗರಲ್ಲೂ ತೀವ್ರ ಅಸಮಧಾನ ಇದೆ.ವರ್ತೂರ್ ಪ್ರಕಾಶ್ ಮಾಜಿ ಶಾಸಕರಾದರೂ ಕೋಲಾರ ಕ್ಷೇತ್ರದಲ್ಲಿ ಅವರ ಬೆಂಬಲಿಗರ ಮಧ್ಯೆ ಇರುವ ರಾಜಕೀಯ ಸಂಬಂಧ ದಿಂದ ದೂರವಾಗದೆ ಇನ್ನಷ್ಟು ಉತ್ತಮ ಸಂಪರ್ಕ ಇಟ್ಟುಕೊಂಡು ಬಂದಿದ್ದಾರೆ.ವರ್ತೂರ್ ಅವರದ್ದೇ ಆದ ವರ್ಚಸ್ಸು ಸಹ ಇದೆ.ಅವರ ಬಣದಲ್ಲಿ ಸುಮಾರು 400 ಕ್ಕೂ ಹೆಚ್ಚು ಮಂದಿ ನಗರಸಭೆ, ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರು ಇದ್ದಾರೆ ಎಂಬುದು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವಾಗಿದೆ.ವರ್ತೂರ್ ಪ್ರಕಾಶ್ ಕೋಲಾರಕ್ಕೆ ಮಾತ್ರ ಸೀಮಿತ ರಾಜಕಾರಣಿಯಲ್ಲ.ಜಿಲ್ಲೆಯಾಧ್ಯಂತ ತನ್ನದೇ ಆದ ಬೆಂಬಲಿಗರ ಪಡೆಯಿದೆ ಎಂಬುದು ಮುಖ್ಯವಾಗಿ ಗಮನಿಸಬೇಕಾಗಿದೆ.
ಮತ್ತೊಂದು ವಿಷಯ ಎಂದರೆ ಕಳೆದ 7 ವರ್ಷಗಳಿಂದ ಕೋಲಾರ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿ ಪಕ್ಷದ ಸಂಘಟನೆಗೆ ತನು ಮನ ಧನ ಅರ್ಪಿಸಿ ದುಡಿದ ಕೆ.ಚಂದ್ರಾರೆಡ್ಡಿ ರವರಿಗೆ ಕುತಂತ್ರದಿಂದ ಎಂಎಲ್‍ಸಿ ಟಿಕೇಟ್ ತಪ್ಪಿಸಿರುವುದು ಅವರ ಬೆಂಬಲಿಗರಲ್ಲಿ ತೀವ್ರ ಅಸಮಧಾನ ಎದ್ದೇಳಿದೆ.ಬಂಗಾರಪೇಟೆ ಮತ್ತು ಕೆಜಿಎಫ್ ಕ್ಷೇತ್ರಗಳಲ್ಲಿ ಚಂದ್ರಾರೆಡ್ಡಿ ರವರ ಗಾಳಿ ಹೆಚ್ಚಿದೆ.ಕಳೆದ ಬಾರಿ ನಡೆದ ಪುರಸಭೆ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚಂದ್ರಾರೆಡ್ಡಿ ಅವರು ನೀಡಿದ್ದ ಸಾಥ್‍ನಿಂದ ಹೆಚ್ಚಾಗಿ ಕಾಂಗ್ರೇಸ್ ಬೆಂಬಲಿಗರು ಗೆದ್ದಿದ್ದಾರೆ.ಚಂದ್ರಾರೆಡ್ಡಿ ರವರಿಗೆ ಟಿಕೇಟ್ ಕೈತಪ್ಪಿರುವುದರಿಂದ ಎದ್ದೇಳಿರುವ ಅಸಮಧಾನ ಕಾಂಗ್ರೇಸ್‍ಗೆ ಮೈನಸ್ ಆಗುವುದರಲ್ಲಿ ಸಂಶಯವಿಲ್ಲ.
ಕಾಂಗ್ರೇಸ್ ಟಿಕೇಟ್ ಪೆದುಕೊಂಡು ಎರಡನೇ ಬಾರಿಗೆ ಅಗ್ನಿ ಪರೀಕ್ಷೆಗೆ ಇಳಿದಿರುವ ಅನಿಲ್ ಕುಮಾರ್ ರಿಗೆ ಅಲ್ಪಸಂಖ್ಯಾತರ ಮತಗಳ ಬಗ್ಗೆ ಚಿಂತನೆಯನ್ನುಂಟು ಮಾಡಿಸುವಂತೆ ಮಾಡಿದೆ.ಕೋಲಾರ ಕ್ಷೇತ್ರಕ್ಕೆ ಕಾಂಗ್ರೇಸ್ ನಿಂದ ಈ ಹಿಂದೆ ಹಾಲಿ ಎಂಎಲ್‍ಸಿ ನಜೀರ್ ಅಹಮದ್ ಸ್ಪರ್ಧೆ ಮಾಡಿದ್ದರು. ಆ ಸಮಯದಲ್ಲಿ ಅನಿಲ್ ಕುಮಾರ್ ಜಿಲ್ಲಾಧ್ಯಕ್ಷರಾಗಿದ್ದವರು.ಜೊತೆಗೆ ಕೋಲಾರ ಕ್ಷೇತ್ರದವರೂ ಹೌದು.ಆದರೆ ಕಾಂಗ್ರೇಸ್ ಅಭ್ಯರ್ಥಿ ಪರವಾಗಿ ಪ್ರಾಮಾಣಿಕವಾಗಿ ದುಡಿಯದ ಕಾರಣ ನಜೀರ್ ಅಹಮದ್ ಸೋಲಿಗೆ ಕಾರಣರಾದರು ಎಂಬ ಆರೋಪ ಇಂದಿಗೂ ಎದುರಿಸಿಕೊಂಡು ಬರುತ್ತಿದ್ದಾರೆ. ಚುನಾವಣೆ ಮುಗಿದ ನಂತರ ಕೋಲಾರ ಕಾಂಗ್ರೇಸ್ ಭವನದಲ್ಲಿ ನಡೆದ ಸಭೆಯಲ್ಲಿ ಅನಿಲ್ ಕುಮಾರ್ ವಿರುದ್ದ ಮುಸ್ಲೀಂ ಮುಖಂಡರು ತಿರುಗಿಬಿದ್ದ ಘಟನೆ ಇಂದಿಗೂ ಮಾಸಿ ಹೋಗಿಲ್ಲ.ಕಳೆದ ಬಾರಿ ಜಮೀರ್ ಪಾಷ ರವರೂ ಸಹ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.ಟೌನ್ ಬಿಟ್ಟರೆ ಗ್ರಾಮೀಣ ಭಾಗದಲ್ಲಿ ಕಾಂಗ್ರೇಸ್‍ಗೆ ಬಂದಿಲ್ಲ.ಈ ಎಲ್ಲಾ ನೆನೆಪುಗಳು ಅನಿಲ್ ಕುಮಾರ್ ಚುನಾವಣೆಗೆ ನಿಂತಿರುವುದರಿಂದ ಮತ್ತೆ ರಾಜಕೀಯವಾಗಿ ಬೆಳಕಿಗೆ ಬಂದಿದೆ.ಚರ್ಚೆಗೂ ವೇದಿಕೆಯಾಗುತ್ತಿದೆ.
ಇಂತಹ ಬೆಳೆವಣಿಗೆಗಳ ಹಿನ್ನಲೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ವಿರುದ್ದ ಅಸಮಧಾನ ಬುಗಿಲೆದ್ದಿದೆ.ಈ ಅಸಮಧಾನ ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳಿಗೆ ವರಧಾನವಾದರೂ ಅಚ್ಚರಿ ಪಡುವಂತಿಲ್ಲ.ಒಟ್ಟಿನಲ್ಲಿ ಅನಿಲ್ ಕುಮಾರಿಗೆ ಗೆಲುವು ಅಷ್ಟು ಸುಲಭವಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.