ರೈತರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು : ಸಚಿವ ಮುನಿರತ್ನ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರೈತರ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.
ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪುರಸಭೆಯ ನೂತನ ಪುರಸಭಾ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ತೋಟಗಾರಿಕಾ ಇಲಾಖೆಯಿಂದ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ತೋಟಗಾರಿಕಾ ಉತ್ಪನ್ನಗಳನ್ನು ರಸ್ತೆಗಳ ಮೇಲೆ ಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿರುವುದ ಖೇದಕರ ಸಂಗತಿಯಾಗಿದೆ ಎಂದು ಹೇಳಿದರು.
ಜಿಲ್ಲೆಯ ರೈತರ ಅನುಕೂಲಕ್ಕಾಗಿ ಹಣ್ಣು ಸಂಸ್ಕರಣ ಘಟಕ, ಶೈತ್ಯಾಲಯ ಹಾಗೂ ಸರಕು ಸಾಗಣೆ ವ್ಯವಸ್ತೆ ಮಾಡಬೇಕಾದ ಅಗತ್ಯವಿದೆ. ವ್ಯಕ್ತಿ ಶಾಶ್ವತವಲ್ಲ. ಮಾಡುವ ಕೆಲಸ ಶಾಶ್ವತ. ಜನರಿಗೆ ಅನುಕೂಲವಾಗುವ ಶಾಶ್ವತ ಕೆಲಸಗಳನ್ನು ಮಾಡಲು ಆದ್ಯತೆ ನೀಡಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಈ ವಿಷಯದಲ್ಲಿ ಜಿಲ್ಲೆ ನಾಡಿನ ಹೆಮ್ಮೆಯಾಗಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಮಾತನಾಡಿ, ಪುರಸಭಾ ಸದಸ್ಯರು ಪಕ್ಷಪಾತ ಮಾಡದೆ, ಸಾಂಘಿಕ ಪ್ರಯತ್ನದ ಮೂಲಕ ಪಟ್ಟಣದ ಅಭಿವೃದ್ಧಿ ಮಾಡಬೇಕು. ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸುವುದರ ಜತೆಗೆ ಪರಿಸರ ಮಾಲಿನ್ಯ ತಡೆಗೆ ಗಿಡ, ಮರ ಬೆಳೆಸಬೇಕು. ಪಟ್ಟಣದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲೂ ಕಾಣಲು ಸಾಧ್ಯವಿಲ್ಲದಂಥ ವಿಶಾಲವಾದ ಪುರಸಭಾ ಕಾರ್ಯಾಲಯವನ್ನು ನಿರ್ಮಿಸಲಾಗಿದೆ. ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ಸೇರಿದಂತೆ ಇಲ್ಲಿನ ಎಲ್ಲ ಸರ್ಕಾರಿ ಕಟ್ಟಡಗಳನ್ನು ಮಾದರಿಯಾಗಿ ನಿರ್ಮಿಸಲಾಗಿದೆ. ದೂರದೃಷ್ಟಿ ಇಟ್ಟುಕೊಂಡು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಕ್ರೀಡಾಂಗಣದ ಅಭಿವೃದ್ಧಿಗೆ ಸರ್ಕಾರದಿಂದ ರೂ.5 ಕೋಟಿ ಮಂಜೂರಾಗಿದೆ. ಈ ಹಣದಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕ್ರಿಡೆಗಳಿಗೆ ಅಗತ್ಯವಾದ ಕಟ್ಟಡ ಹಾಗೂ ನಿರ್ಮಾನಗಳನ್ನು ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ಮಾಂಸದ ಮಾರುಕಟ್ಟೆಯನ್ನು ಪ್ರತ್ಯೇಕವಾಗಿ ನಿರ್ಮಿಸಲಾಗುವುದು. ಪಟ್ಟಣದ ಬಡವರಿಗೆ ಮನೆ, ವಿವಿಧ ರೀತಿಯ ವೇತನ ಹಾಗೂ ನೀರು ಒದಗಿಸುವಲ್ಲಿ ರಾಜಕೀಯ ಮಾಡಿದರೆ ಸಹಿಸಲಾಗದು. ಅಗತ್ಯ ಇರುವ ಎಲ್ಲರಿಗು ಮನೆ ನಿರ್ಮಿಸಿಕೊಡಲಾಗುವುದು. ಸಫಾಯಿ ಕರ್ಮಚಾರಿಗಳಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು, ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕೋಲಾರ ನಗರಸಭಾಧ್ಯಕ್ಷೆ ಶ್ವೇತಾ ಶಬರೀಶ್, ಮುಖಂಡರಾದ ದಿಂಬಾಲ ಅಶೋಕ್, ಎನ್.ಹನುಮೇಶ್, ಸಂಜಯ್ ರೆಡ್ಡಿ ಇದ್ದರು.