ತೀವ್ರ ದೂರದ್ರಷ್ಟಿ ದೋಷದಿಂದ ಬಳಲುತಿದ್ದು ಶಿಕ್ಷಕಿಯಾದ ರೋಚಕ ಕತೆ

ನಮಸ್ಕಾರ ಬಂಧುಗಳೇ,
ನಾನು ಶಿಕ್ಷಕಿಯಾಗಬೇಕೆಂದು ನಮ್ಮ ಅಮ್ಮ ಆಸೆಪಟ್ಟಿದ್ರು. ಹಾಗಾಗಿ ಓದು-ಬರಹ ಕಲಿಯಲು ಕಷ್ಟ ಎನಿಸಿದರೂ ಸಹ ಅಮ್ಮನ ಒಂದೇ ಒಂದು ಆಸೆ ಈಡೇರಿಸುವ ಜವಾಬ್ದಾರಿ ನನ್ನ ಮೇಲಿತ್ತು. ಮುಕ್ಕಾಲು ಭಾಗ ಅಂಧತ್ವವನ್ನು ಹೊತ್ತು ಹುಟ್ಟಿದ ನನಗೆ ಸಾಮಾನ್ಯ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಶಾಲೆಗೆ ನನ್ನನ್ನು ದಾಖಲಿಸಿದರು. ನನ್ನ ಕಲಿಕೆಯೇ ಅಲ್ಲಿ ಆಗುತ್ತಿರಲಿಲ್ಲ. ಕಾರಣ ಕಪ್ಪುಹಲಗೆಯ ಅಕ್ಷರಗಳು ನನಗೆ ಕಾಣುತ್ತಿರಲಿಲ್ಲ. ಅಕ್ಕ ಪಕ್ಕದ ವಿದ್ಯಾರ್ಥಿಗಳು ಸಹಾಯ ಮಾಡುತ್ತಿರಲಿಲ್ಲ. ಬದಲಾಗಿ ಆಡಿಕೊಳ್ಳುತ್ತಿದ್ದರು, ಛೇಡಿಸುತ್ತಿದ್ದರು. ಶಿಕ್ಷಕರು ನಮ್ಮ ತಂದೆ ತಾಯಿಗಳಿಗೆ ಸಲಹೆ ಕೊಟ್ಟರು:-“ದಯವಿಟ್ಟು ನಿಮ್ಮ ಮಗುವನ್ನು ಅಂಧ ಮಕ್ಕಳ ಶಾಲೆಗೆ ಸೇರಿಸಿ. ನಿಮ್ಮ ಮಗಳ ಭವಿಷ್ಯ ಉತ್ತಮವಾಗುತ್ತದೆ” .
ನಮ್ಮ ತಂದೆ ತಾಯಿ ಅಂದು ತೆಗೆದುಕೊಂಡ ನಿರ್ಧಾರ ನನ್ನ ಜೀವನದ ದಿಕ್ಕೇ ಬದಲಾಯಿಸಿತು. ಅವರು ಹೀಗೆ ಉತ್ತರಿಸಿದರು:-“ನೋಡಿ ಸರ್, ನಮ್ಮ ಮಗಳು ಹೇಗಾದರೂ ಇರಲಿ, ನಮ್ಮ ಕಣ್ಣ ಮುಂದೆ ಬೆಳೆಯ ಬೇಕು. ಅವಳನ್ನು ನೋಡಿ ನಾವು ಖುಷಿಪಡಬೇಕು. ಅವಳಿಂದ ನಮಗೆ ಯಾವ ನಿರೀಕ್ಷೆಯೂ ಮಾಡಲ್ಲ. ಅವಳು ನಮಗೆ ಸಾಕಬೇಕೆಂದು ನಾವು ಬಯಸುವುದಿಲ್ಲ. ನಾವು ಬದುಕಿರುವವರೆಗೂ ಕೊನೆಯವರೆಗೂ ನಾವು ಅವಳನ್ನು ನೋಡಿಕೊಳ್ಳುತ್ತೇವೆ. ಕಷ್ಟನೋ ಸುಖನೋ ನಮ್ಮ ಮಗು ನಮ್ಮ ಜೊತೆಯೇ ಇರಲಿ” ಎಂದು ಉತ್ತರಿಸಿ ಮನೆಯ ಕಡೆ ಹೆಜ್ಜೆ ಹಾಕಿದರು. ಅಕ್ಕ ಪಕ್ಕದ ಮನೆಯವರ ಚುಚ್ಚು ಮಾತುಗಳಿಗೂ ಆಹಾರವಾದರು. “ಅಯ್ಯೋ ಪಾಪ, ಈ ಮಗು ನಾ ಅವರ ತಂದೆ ತಾಯಿ ಸಾಯೋವರೆಗೂ ಸಾಕಬೇಕಲ್ಲ!” ಎಂದು ಜನರೆಲ್ಲ ಆಡಿಕೊಂಡು ನಗುತ್ತಿದ್ದರು.
ಇದನ್ನೆಲ್ಲ ಮೌನವಾಗಿ ಗಮನಿಸುತ್ತಿದ್ದ ನನಗೂ ನಾನೇಕೆ ನನ್ನ ಅಪ್ಪ ಅಮ್ಮನಿಗೆ ಹೊರೆಯಾಗಿರಬೇಕು ನಾನೂ ಸಹ ಓದಬೇಕು ಏನಾದರೂ ಮಾಡಬೇಕು ಎಂಬ ಆಲೋಚನೆ ಉಂಟಾಯಿತು. ತರಗತಿಯಲ್ಲಿ ಶಿಕ್ಷಕರು ಸರತಿಯ ಸಾಲಿನಲ್ಲಿ ಎಲ್ಲರನ್ನೂ ಓದಿಸುತ್ತಿದ್ದರು.ನನ್ನ ಸರದಿ ಬಂದಾಗ ನಿನ್ನ ಕೈಲಾಗಲ್ಲಮ್ಮ ಕಷ್ಟ ಆಗುತ್ತೆ ಕುಳಿತುಕೋ ಎಂದು ಕೂರಿಸಿಬಿಡುತ್ತಿದ್ದರು. ಅದಕ್ಕೆ ಕಾರಣ ಶಿಕ್ಷಕರಿಗೆ ನನ್ನ ಮೇಲಿರುವ ಕಾಳಜಿಯೋ ಅನುಕಂಪವೋ ತಿಳಿಯದು. ನಂತರದ ದಿನಗಳಲ್ಲಿ ಸ್ವತಃ ನಾನೇ ಹಿರಿಯ ವಿದ್ಯಾರ್ಥಿಗಳ ಬಳಿ ಹೇಳಿಸಿಕೊಂಡು ಕಲಿಯತೊಡಗಿದೆ. ಕಾರಣ ಅಪ್ಪ ಅಮ್ಮ ಅಷ್ಟೇನೂ ಓದಿಲ್ಲ. ಅಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರರು(ಈಗ ನಿವೃತ್ತರು)
ಅಮ್ಮ ಗೃಹಿಣಿ, ನಾನೇ ಮೊದಲ ಮಗು ಆಗಿದ್ರಿಂದ ಹೇಳಿಕೊಡುವವರಾರೂ ಇರಲಿಲ್ಲ. ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಕಲಿತ ನಾನು ಸರದಿಯ ಸಾಲಿನಲ್ಲಿ ನನ್ನ ಸರದಿ ಬಂದಾಗ ನಾನೇ ಎದ್ದು ನಿಂತೆ ಎಂದಿನಂತೆ ನನ್ನ ಶಿಕ್ಷಕರು ಕೂರಲು ಹೇಳಿದರು . ಆಗ ನಾನು ಹೇಳಿದೆ”ಸರ್. ನಾನೂ ಓದುತ್ತೇನೆ, ತಪ್ಪಿದ್ದರೆ ತಿಳಿಸಿ ಸರಿ ಇದ್ದರೆ ಓದಲು ಅವಕಾಶ ಕೊಡಿ” ಎಂದೆ. ಅಂದೇ ನನಗೆನಿಸಿದ್ದು,”ಅನುಕಂಪ ಬೇಡ,ಅವಕಾಶ ಕೊಡಿ” ಎಂದು. ಗುರುಗಳು ಓದಲು ತಿಳಿಸಿದರು. ಕನ್ನಡ ಪಾಠ ಓದಿದೆ. ನಂತರ ಇತರೆ ವಿಷಯಗಳನ್ನು ಓದಲು ಹೇಳಿದರು ಅವುಗಳನ್ನೂ ಓದಿದೆ. ಆಗ ಶಿಕ್ಷಕರೆಲ್ಲ ಒಟ್ಟಿಗೆ ಒಂದೆಡೆ ಸೇರಿ ಇವಳೂ ಸಹ ಓದಬಲ್ಲಳು. ಪ್ರೋತ್ಸಾಹದ ಅಗತ್ಯವಿದೆ ಎಂದರಿತ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರು ೬ ನೇ ತರಗತಿಯಿಂದ ಪ್ರೋತ್ಸಾಹಿಸಲು ಪ್ರಾರಂಭಿಸಿದರು. ಆಟಕ್ಕೆಂದು ಹೋದರೆ ಸಹಪಾಠಿಗಳಿಂದ ಹೀಯಾಳಿಕೆಗೊಳಗಾಗಬೇಕಿತ್ತು. ಕುರುಡಿ ಎಂದು ಆಡಿಕೊಳ್ಳುತ್ತಿದ್ದರು. ಭಯದಿಂದಲೇ ಶಾಲೆಯ ಆಟದ ಮೈದಾನದಲ್ಲಿರಬೇಕಿತ್ತು. ಶಾಲೆ ಬಿಟ್ಟ ನಂತರ ಮನೆ ಕಡೆ ಹೋಗ್ತಾ ಇದ್ರೆ ಕಲ್ಲಲ್ಲೆಲ್ಲ ಹೊಡೆಯೋರು. ೭ನೇ ತರಗತಿಯಲ್ಲಿ ಅನುತ್ತೀರ್ಣವಾಗಲು ಕಾರಣ ಗಣಿತದ ಲೆಕ್ಕಗಳು ಕಪ್ಪು ಹಲಗೆಯ ಮೇಲೆ ಕಾಣದಿರುವುದು. ನಂತರ ಕಷ್ಟಪಟ್ಟು ಅಭ್ಯಾಸ ಮಾಡಿ ಪರೀಕ್ಷೆ ೭ನೇ ತರಗತಿ ಪಾಸಾದೆ. ಪ್ರೌಢ ಶಾಲೆಯಲ್ಲಿ ಆಟದ ಅವಧಿ ಬಂದಾಗ ಶಿಕ್ಷಕರ ಬಳಿ ಹೋಗಿ ಗಣಿತದ ಲೆಕ್ಕಗಳು,ವಿಜ್ಙಾನದ ಚಿತ್ರಗಳು, ಸಮಾಜ ವಿಜ್ಙಾನದ ಭೂಪಟಗಳನ್ನು ಅಭ್ಯಾಸ ಮಾಡುತ್ತಿದ್ದೆ. ಪ್ರೌಢಶಾಲೆಯಲ್ಲಿ ನಾನು ಮೊದಲ ಬೆಂಚಿನ ಮೊದಲ ವಿದ್ಯಾರ್ಥಿನಿ. ಹಾಗಿದ್ದರೂ ಸಹ ಕಪ್ಪು ಹಲಗೆಯ ಅಕ್ಷರಗಳು ಕಾಣುತ್ತಿರಲಿಲ್ಲ. ನಮ್ಮ ಶಿಕ್ಷಕರು ಈ ವಿಚಾರದಲ್ಲಿ ಬಹಳ ಸಹಕಾರ ಕೊಟ್ಟರು. ಅವರು ಹೇಳಿಕೊಂಡೇ ಪಾಠಗಳ ನೋಟ್ಸ್ ಅನ್ನು ಕಪ್ಪು ಹಲಗೆಯ ಮೇಲೆ ಬರೆಯುತ್ತಿದ್ದರು. ನಾನೂ ಸಹ ಅದನ್ನು ಆಲಿಸುವುದರ ಮೂಲಕ ವೇಗವಾಗಿ ಬರೆದುಕೊಳ್ಳುತ್ತಿದ್ದೆ. ಶಾಲೆಯಲ್ಲಿ ನಡೆಯುವ ಯಾವುದೇ ಸಂಗತಿಗಳನ್ನು ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳುತ್ತಿರಲಿಲ್ಲ. ಎಲ್ಲಿ ನನಗೆ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿಬಿಡುವರೋ ಎಂಬ ಭಯ ಕಾಡುತ್ತಿತ್ತು. ಆಟಕ್ಕೆ ಹೋಗದೆ ಕೇವಲ ಪಾಠಗಳ ಅಭ್ಯಾಸವನ್ನೇ ಮಾಡುತ್ತಿದ್ದೆ. ಜನಪದ ಗೀತೆ, ಭಾವಗೀತೆ, ಪ್ರಬಂಧ ರಚನೆ, ಏಕಪಾತ್ರಾಭಿನಯ ಹೀಗೆ ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದೆ. ನನ್ನ ಶಿಕ್ಷಕರೂ ಸಹ ಪ್ರೋತ್ಸಾಹಿಸುತ್ತಿದ್ದರು. ನನ್ನ ಪೋಷಕರು ಶಾಲೆ ದೂರ ಇದ್ದರೆ ಓಡಾಟ ಕಷ್ಟ ಎಂದು ಮನೆಯ ಹತ್ತಿರವೇ ಇದ್ದ ಅನುದಾನಿತ ಶಾಲೆಗಳಲ್ಲಿ ಓದಿಸಿದರು. ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣಳಾದೆ. ಕಾಲೇಜು ಶಿಕ್ಷಣಕ್ಕಾಗಿ ಸರ್ಕಾರಿ ಬಾಲಕಿಯರ ಪ ಪೂ ಕಾಲೇಜಿಗೆ ಸೇರಿಸಿದರು. ವಿಜ್ಙಾನ ವಿಭಾಗದಲ್ಲಿ ಅಧ್ಯಯನ ಮಾಡಬೇಕೆಂದು ನನಗೆ ಆಸೆ ಇತ್ತು. ಆದರೆ ಅಲ್ಲಿನ ಆಡಳಿತಾಧಿಕಾರಿಗಳು ಕೊಡಲು ನಿರಾಕರಿಸಿದರು. ಅವರು ಕೊಡುವ ಕಾರಣ ಹೀಗಿದೆ:”ನೋಡಮ್ಮ, ವಿಜ್ಙಾನ ವಿಭಾಗಕ್ಕೆ ಸೇರಿಸಿಕೊಳ್ಳೋದಕ್ಕೆ ನಮಗೇನೂ ತಕರಾರಿಲ್ಲ ನಿನಗೆ ಅರ್ಹತೆಯೂ ಇದೆ. ಆದರೆ ಮಾನವೀಯತೆ ದೃಷ್ಟಿಯಿಂದ ನಾವು ನಿನಗೆ ಕೊಡುವುದಿಲ್ಲ. ದೈಹಿಕವಾಗಿ ಸದೃಢರಾಗಿರುವವರೇ ಕಣ್ಣಿನಲ್ಲಿ ಆಸಿಡ್ ಎಲ್ಲ ಚೆಲ್ಲಿಕೊಂಡ ಉದಾಹರಣೆಗಳಿವೆ. ದಯವಿಟ್ಟು ಕ್ಷಮಿಸು. ನೀನು ಕಲಾವಿಭಾಗ ಆರಿಸಿಕೊಂಡು ಅಧ್ಯಯನ ಮಾಡುವುದೇ ಸರಿ” ಎಂದು ಹೇಳಿದರು. ಬೇರೆ ಬೇರೆ ಖಾಸಗಿ ಶಾಲೆಗಳಿಗೂ ಹೋಗಿ ಕೇಳಿದೆ. ಅಲ್ಲಿಯೂ ನನಗೆ ವಿಜ್ಙಾನ ವಿಭಾಗಕ್ಕೆ ಸೇರಲು ಅವಕಾಶ ಕೊಡಲಿಲ್ಲ. ಕಡೆಗೆ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿ ಕಲಾ ವಿಭಾಗದಲ್ಲಿಯೇ ಅಭ್ಯಾಸ ಮಾಡಿದೆ. ಕಾಲೇಜು ಸ್ವಲ್ಪ ದೂರ ಹಾಗಾಗಿ ಮನೆಯ ಹತ್ತಿರವೇ ಇದ್ದ ನನ್ನ ಸಹಪಾಠಿಗಳ ಜೊತೆಯಲ್ಲಿಯೇ ಕಾಲೇಜಿಗೆ ಹೋಗುತ್ತಿದ್ದೆ. ಎಲ್ಲವೂ ಥಿಯರಿಯೇ ಇದ್ದಿದ್ದರಿಂದ ನನಗಲ್ಲಿ ಸಮಸ್ಯೆಯಾಗಲಿಲ್ಲ. ಆದರೆ ಇಂಗ್ಲಿಷ್ ವ್ಯಾಕರಣ ಹೇಳಿಸಿಕೊಳ್ಳಲು ನಮ್ಮ ಸಹಪಾಠಿಗಳ ಜೊತೆ ಇಂಗ್ಲಿಷ್ ಉಪನ್ಯಾಸಕರ ಮನೆಗೆ ಹೋಗಿ ಹೇಳಿಸಿಕೊಳ್ಳುತ್ತಿದ್ದೆವು. ಪ್ರೌಢಶಾಲಾ ಹಂತದಲ್ಲೂ ಶಿಕ್ಷಕರ ಮನೆಗೆ ಹೋಗಿ ಹೇಳಿಸಿಕೊಂಡ ಉದಾಹರಣೆಗಳಿವೆ. ಪಿಯುಸಿಯಲ್ಲಿ ನಿರಾತಂಕವಾಗಿ ಓದಿ ದ್ವಿತೀಯ ಪಿ.ಯು.ಸಿ.ಯನ್ನು ಉತ್ತಮ ಅಂಕಗಳೊಂದಿಗೆ ಉತ್ತೀರ್ಣವಾದ ನಂತರ ಮುಂದೇನು ಎಂಬ ಚಿಂತೆ ಉಂಟಾಯಿತು. ಆಗ ಅಲ್ಲಿದ್ದ ಒಬ್ಬರು ಉಪನ್ಯಾಸಕರು ಐಚ್ಚಕ ಕನ್ನಡ, ಇತಿಹಾಸ ಹಾಗೂ ಸಮಾಜಶಾಸ್ತ್ರ ವಿಷಯಗಳನ್ನಾರಿಸಿಕೊಂಡು ಬಿ ಎ ಅಭ್ಯಾಸ ಮಾಡಲು ಸಲಹೆ ಕೊಟ್ಟರು ಅದರಂತೆ ಪದವಿ ಕಾಲೇಜಿಗೆ ಸೇರಿದೆ ಅಲ್ಲಿ ನನಗೆ ಮೊದಲು ಪರಿಚಯವಾದವರು ಕನ್ನಡದ ಪ್ರೊಫೆಸರ್. ಎಂಟನೆಯ ತರಗತಿಯಿಂದಲೇ ಕವನ ಬರೆಯುವ ಹವ್ಯಾಸ ಇದ್ದ ನನಗೆ ನನ್ನ ಬರವಣಿಗೆಗೆ ಮತ್ತಷ್ಟು ಪ್ರೋತ್ಸಾಹ ಅಲ್ಲಿ ನನಗೆ ದೊರೆಯಿತು. ಪದವಿ ತರಗತಿಯನ್ನೂ ಸಹ ಪೂರ್ಣಗೊಳಿಸಿದ ನಂತರ ಬಿ ಎಡ್ ಗೆ ದಾಖಲಾತಿ ಪಡೆಯಲು ಪ್ರವೇಶ ಪರೀಕ್ಷೆ ಬರೆದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯೂ ಆಯಿತು ವಿವೇಕಾನಂದ ಬಿ ಎಡ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಸೀಟು ದೊರೆಯಿತು. ಇಷ್ಟೇ ಕೋನ ಮಿತಿಯಲ್ಲಿ ಪುಸ್ತಕ ಹಿಡಿಯಬೇಕು ಓದುಗಾರಿಕೆ ಕೌಶಲದಲ್ಲಿ ಎಂಬುದು ನಿಯಮ. ನನಗೆ ಅದು ಸಾಧ್ಯವಾಗುವುದಿಲ್ಲ ಕಣ್ಣಿಗೆ ತುಂಬಾ ಸಮೀಪ ಹಿಡಿದುಕೊಂಡರಷ್ಟೇ ಕಾಣುವುದು. ಸ್ವಲ್ಪ ಅಂತರವಿದ್ದರೂ ಕಾಣುವುದಿಲ್ಲ. ಕನ್ನಡ ಮೆಥೇಡ್ ಬೋಧಿಸುವ ಶಿಕ್ಷಕರ ಬಳಿ ನನ್ನ ಅಳಲನ್ನು ತೋಡಿಕೊಂಡೆ. ನಿನಗೆ ಆಸಕ್ತಿ ಇದ್ಯಲ್ಲ ಅದು ಮೆಚ್ಚುವಂಥದ್ದ ನಿನ್ನಂತಹ ಕೆಲವು ಪ್ರಕರಣಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಧೈರ್ಯವಾಗಿ ನಿನ್ನ ಅಧ್ಯಯನ ಮುಂದುವರೆಸು ಎಂದು ಹೇಳಿದರು. ನಾನು ಓದಿದ ಪ್ರೌಢಶಾಲೆಗೆ ನನಗೆ ಬೋಧನಾಭ್ಯಾಸಕ್ಕೆ ನಿಯೋಜಿಸಿದರು. ವಿಶಿಷ್ಟವಾದ ಕಲಿಕೋಪಕರಣಗಳನ್ನು ಬಳಸಿ ಪಾಠ ಮಾಡುವ ನನ್ನ ಕಾಯಕ ಹವ್ಯಾಸ ಅಲ್ಲಿಂದಲೇ ಪ್ರಾರಂಭವಾಯಿತು ಪರಿಸರ ಪಾಠಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ದಿನಪತ್ರಿಕೆಯಲ್ಲಿನ ಪರಿಸರಸಂಬಂಧಿ ಭಾವಚಿತ್ರಗಳನ್ನು ಕತ್ತರಿಸಿ ಡ್ರಾಯಿಂಗ್ ಚಾರ್ಟ್ ಗೆ ಅಂಟಿಸಿ ಮಾಹಿತಿಗಳನ್ನು ಕೆಳಗೆ ಬರೆದುಕೊಂಡು ಹೋಗಿದ್ದೆ. ಉಪನ್ಯಾಸಕರು ಅದನ್ನು ಮೆಚ್ಚಿಕೊಂಡೇ ಅವರೇ ಸನ್ನಿವೇಶಗಳನ್ನು ವಿವರಿಸಿದರು. ಬಿ ಎಡ್ ವ್ಯಾಸಂಗ ಮುಗಿದ ನಂತರ ಯಾವ ಖಾಸಗಿ ಶಾಲೆಯವರೂ ನನಗೆ ಬೋಧನೆಗೆ ಅವಕಾಶ ಕೊಟ್ಟಿಲ್ಲ. ಟ್ಯುಟೋರಿಯಲ್ ನಲ್ಲಿ ಕೆಲಸ ಮಾಡುತ್ತಿದ್ದೆ ಅಷ್ಟೆ. ನನ್ನ ಪರಿಸ್ಥಿತಿ ನೋಡಿ ಇವಳಿಂದೇನಾಗುತ್ತೆ ಎಂದು ಯಾವ ಖಾಸಗಿ ಶಾಲೆಯವರೂ ಸಹ ನನಗೆ ಬೋಧನೆಗೆ ಅವಕಾಶ ಕೊಡಲು ಸಿದ್ದವಿರಲಿಲ್ಲ .ಹೀಗಿರುವಾಗ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರೆ ಕೊಟ್ಟಿತು. ನಾನು ಸತತವಾಗಿ ಅಭ್ಯಾಸ ಮಾಡುತ್ತಿದ್ದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯೂ ಆದೆ. ನಾನು ಬರೆದ ಎಲ್ಲ ಪರೀಕ್ಷೆಗಳು ಸಾಮಾನ್ಯ ವಿದ್ಯಾರ್ಥಿಯಾಗಿಯೇ ಬರೆದದ್ದು. ನನ್ನ ಶಿಕ್ಷಕರ ಒತ್ತಾಯಕ್ಕೆ ಮಣಿದು ಅಂಗವಿಕಲರ ಪ್ರಮಾಣಪತ್ರವನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಲಗತ್ತಿಸಿದ್ದೆ‌. ಆಯ್ಕೆಯಾದ ನಂತರ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿರುವ ಆದರ್ಶ ವಿದ್ಯಾಲಯ ಆರ್ ಎಂ ಎಸ್ ಎ ಶಾಲೆಗೆ ಕನ್ನಡ ಭಾಷಾ ಶಿಕ್ಷಕಿಯಾಗಿ ವರಧಿ ಮಾಡಿಕೊಂಡೆ. ಪ್ರಾರಂಭದಲ್ಲಿ ನನಗೆ ಇಲ್ಲಿಯೂ ಕಷ್ಟವಾಯಿತು. ಇಲ್ಲೂ ಸಹ ಎಲ್ಲರ ಹೀಯಾಳಿಕೆ ಹೀಗಳಿಕೆಗೆ ಗುರಿಯಾಗಬೇಕಾಯಿತು. ವಿದ್ಯಾರ್ಥಿಗಳಾದಿಯಾಗಿ ಎಲ್ಲರ ಅಪಹಾಸ್ಯ ಬೈಗುಳಗಳಿಗೆ ಗುರಿಯಾಗಬೇಕಾಯಿತು. ನಾನು ಪಾಠ ಓದಲು ಪ್ರಾರಂಭಿಸಿದರೆ ಎಲ್ರೂ ನಗಾಡುವುದು ಕಿರುಚುವುದು ನಿತ್ಯದ ಚಟುವಟಿಕೆಯಾಗಿತ್ತು. ನನ್ನ ಕೆಲಸ ನನಗೆ ಎಷ್ಟೇ ಕಷ್ಟವಾದರೂ ನಾನೇ ಅದನ್ನು ಪೂರ್ಣಗೊಳಿಸಬೇಕಿತ್ತು. ಪಾಠ ಬೋಧನೆಯ ಜೊತೆಗೆ ತರಗತಿ ಶಿಕ್ಷಕಿ ಎನ್ನುವ ಜವಾಬ್ದಾರಿಯೂ ಹೆಗಲೇರಿತ್ತು. ಪಾಠ ಮಾಡುವುದೇ ದುಸ್ತರವಾಗಿದ್ದಾಗ ಹೆಚ್ಚುವರಿ ಕೆಲಸಗಳ ಭಾರ ಸಾಕಷ್ಟು ಒತ್ತಡ ಉಂಟು ಮಾಡುತ್ತಿತ್ತು. ಇಲ್ಲಿ ಕನ್ನಡ ಕಲಿಸುವುದು ಸವಾಲಿನ ಕೆಲಸ. ಕಾರಣ ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ತೆಲುಗು, ತಮಿಳು ಮಾತೃಭಾಷಿಕರು. ಆಂಗ್ಲ ಮಾಧ್ಯಮ ಶಾಲೆ. ಪಾಠ ಓದುವಾಗ ವಿದ್ಯಾರ್ಥಿಗಳ ನಗು. ಇದರಿಂದ ತಪ್ಪಿಸಿಕೊಳ್ಳಲು ಪಾಠಗಳೆಲ್ಲ ಕಂಠಪಾಠ ಮಾಡಿಕೊಂಡೆ. ಎಲ್ಲಿ ನಿಲಿಸಿದರೆ ಪುಟ ಮುಕ್ತಾಯವಾಗುತ್ತದೆ ಎಂಬುದನ್ನೂ ಸಹ ನೆನಪಿಟ್ಟುಕೊಳ್ಳಬೇಕಿತ್ತು. ಈ ಮಾರ್ಗ ಕಂಡುಕೊಂಡ ಮೇಲೆ ವಿದ್ಯಾರ್ಥಿಗಳ ಅಪಹಾಸ್ಯ ನಿಂತು ಹೋಯಿತು. ನಂತರದಲ್ಲಿ ವ್ಯಾಕರಣ ಬೋಧನೆಗೆ ಕಪ್ಪುಹಲಗೆಯ ಮೇಲೆ ಬರೆಯಲೇಬೇಕಿತ್ತು ಹಾಗಾಗಿ ನಾನು ಪ್ರತಿಯೊಂದು ವ್ಯಾಕರಣಾಂಶಗಳಿಗೂ ಮಾದರಿಗಳನ್ನು ತಯಾರಿಸಿಕೊಂಡೆ ಅದರ ಮೂಲಕ ಬೋಧನೆ ಮಾಡಲು ಪ್ರಾರಂಭಿಸಿದೆ. ಬೋಧನಾ ವಿಧಾನ ಉತ್ತಮ ಫಲಿತಾಂಶ ಉಂಟು ಮಾಡಿದರೆ ಅದನ್ನು ಮುಂದುವರೆಸುತ್ತಿದ್ದೆ ಇಲ್ಲವಾದಲ್ಲಿಬೇರೆ ವಿಧಾನ ಪ್ರಾಯೋಗಿಕವಾಗಿ ಪ್ರಾರಂಭಿಸುತ್ತಿದ್ದೆ. ಹೇಗೆ ನಾನು ಸಂದರ್ಶನ ಮಾದರಿ ವಿಧಾನ. ನಾಟಕ ಅಭಿನಯ ವಿಧಾನ ,ಮಾದರಿಯೊಂದಿಗೆ ಬೋಧನೆ, ಉಪನ್ಯಾಸ ವಿಧಾನ ,ಚರ್ಚಾ ವಿಧಾನ ಹೀಗೆಬೇರೆ ಬೇರೆ ವಿಧಾನಗಳ ಮೂಲಕ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುತ್ತೇನೆ. ಕಳೆದ ನಾಲ್ಕೂ ಎಸ್ ಎಸ್ ಎಲ್ ಸಿ ಬ್ಯಾಚ್ ಗಳಲ್ಲಿ ಎರಡು ಬ್ಯಾಚ್ ಕನ್ನಡದಲ್ಲಿ ಶೇಕಡ ೧೦೦ ಫಲಿತಾಂಶ ಬಂದಿರುತ್ತದೆ. ಉಳಿದೆರಡು ಬ್ಯಾಚ್ ೯೮.೫. ಶೇ ಫಲಿತಾಂಶ ಬಂದಿರುತ್ತದೆ. ಕಳೆದ ಬಾರಿ ೧೦೦ಕ್ಕೆ೧೦೦ ಮೂರು ವಿದ್ಯಾರ್ಥಿನಿಯರು ಪಡೆದಿರುತ್ತಾರೆ. ಅವರಿಗೆ ನನ್ನ ಸ್ವಂತ ಖಾತೆಯಿಂದ ೧೦೦೦ ರೂ ನಗದು ಹಾಗು ಪದಕವನ್ನಿತ್ತು ಮುಖ್ಯಶಿಕ್ಷಕರ ಮೂಲಕ ಗೌರವಿಸಲಾಯಿತು. ಮಕ್ಕಳಿಗೆ ಬೇರೆ ಬೇರೆ ಪುಸ್ತಕಗಳನ್ನು ಓದಿಸಿ ಬರೆಸುವ ಆಲೋಚನೆ ಇದೆ .. ಇದರಿಂದ ಓದುವ ಹವ್ಯಾಸ ಬೆಳೆಸಬಹುದು.
ನಮ್ಮ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಕಲ್ಪಿಸುವ ಉದ್ದೇಶ ದಿಂದ ಮುಂದಿನ ತಿಂಗಳಿಂದ ಗೋಡೆ ಪತ್ರಿಕೆ ಹೊರ ತರುವುದ್ದೇಶವಿತ್ತು. ಅವುಗಳನ್ನು ಸಾಕಾರಗೊಳಿಸಬೇಕೆನ್ನುವಷ್ಟರಲ್ಲಿ ನನ್ನ ತವರು ಜಿಲ್ಲೆಯಾದ ಹಾಸನ ಜಿಲ್ಲೆಗೆ ವರ್ಗವಾಯಿತು. ೧೯ ಅಕ್ಟೋಬರ್ ೨೦೧೯ರಲ್ಲಿ ನಾನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣ ಬೆಳಗೊಳ ಹೋಬಳಿಗೆ ಸೇರಿದ ಜುಟ್ಟನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ವರಧಿ‌ಮಾಡಿಕೊಂಡೆ. ಇನ್ನೇನು ಮಕ್ಕಳೊಂದಿಗೆ ಬೆರೆಯಬೇಕು ಹೊಂದಿಕೊಳ್ಳಬೇಕು ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕೆನ್ನುವ ಯೋಜನೆಗಳನ್ನು ರೂಪಿಸುವಾಗಲೇ ಕೊರೋನ ಎಂಬ ಪೆಡಂಭೂತ ಅಡ್ಡಿಯಾಯಿತು. ದೇಶದಾದ್ಯಂತ ಲಾಕ್ ಡೌನ್. ಆ ಎರಡು ವರ್ಷಗಳು ಏನೂ ಮಾಡಲಾಗದ ಅಸಹಾಯಕತೆ. ಆನ್ ಲೈನ್ ತರಗತಿಗಳನ್ನು ಮಾಡೋಣ ಎಂದರೆ ಬೆರಳೆಣಿಕೆಯಷ್ಟು‌ ಮಂದಿ ಮಾತ್ರ ಸ್ಮಾರ್ಟ್ ಫೋನ್ ಹೊಂದಿದ್ದರು. ಮೊದಲೇ ಅಲ್ಲಿನ ಶಾಲೆಗೆ ಪ್ರಯಾಣಿಸುವುದೇ ನನಗೆ ಸವಾಲಿನ ಕೆಲಸ. ಅರಸೀಕೆರೆಯಿಂದ ಚನ್ನರಾಯಪಟ್ಟಣ, ಚನ್ನರಾಯಪಟ್ಟಣದಿಂದ ಹಿರೀಸಾವೆ, ಹಿರೀಸಾವೆಯಿಂದ ಜುಟ್ಟನಹಳ್ಳಿ ಹೀಗೆ ಮೂರು ವಾಹನಗಳನ್ನು ಬಳಸಿ ಅರಸೀಕೆರೆಯಿಂದ ನೂರು‌ ಕಿ ಮೀ ದೂರದಲಿರುವ ಶಾಲೆಗೆ ಹೋಗಿ ಅಧ್ಯಯನ ಅಧ್ಯಾಪನದಲಿ ತೊಡಗಿಸಿಕೊಳ್ಳಬೇಕಿತ್ತು. ನಾವು ಶಾಲೆ ತಲುಪಿ ಅಲ್ಲಿಂದ ಮಕ್ಕಳಿರುವ ಹಳ್ಳಿಗಳಿಗೇ ಹೋಗಿ ಬೋಧನೆ ಮಾಡತೊಡಗಿದೆವು. ಅಲ್ಲಿಗೆ ಲಾಕ್ ಡೌನಿದ್ದದ್ರಿಂದ ವಾಹನ ವ್ಯವಸ್ಥೆ ಇರಲಿಲ್ಲ. ದಿನಕೆ ಐನೂರರಿಂದ ಆರು ನೂರು ರೂಪಾಯಿಗಳು ಆಟೊ ಬಾಡಿಗೆ ಕೊಡಬೇಕಿತ್ತು. ಈಗಲೂ ಹಾಗೆಯೇ. ಬೆಳಗಿನ ಜಾವ ಆರು ಗಂಟೆ ಬಸ್ಸಿಗೆ ಹೊರಟರೆ ಮನೆ ತಲುಪುವುದು ಸಂಜೆ ಏಳೂವರೆ ಎಂಟು ಗಂಟೆಯೂ ಆಗಿ ಬಿಡುತ್ತದೆ. ಶಾಲೆಯಲ್ಲಿ ಬಿಡುವಿಲ್ಲದ ತರಗತಿಗಳು. ಹಾಗಾಗಿ ಶಾಲೆಯ ಇತರೆ ಕೆಲಸಗಳನ್ನೆಲ್ಲ ಮನೆಗೇ ಹೊತ್ತು ತಂದು ಮಾಡಿ ಕೊಳ್ಳುವೆ. ಶಾಲೆಯಲ್ಲಿ ನನಗೆ ಸಂಪೂರ್ಣ ಸಹಕಾರವಿದೆ ಆದರೂ‌ ಪ್ರಯಾಣವೇ ನನ್ನ ಪಾಲಿಗೆ ಸವಾಲಿನ ಸಂಗತಿ. ಪ್ರತಿ ದಿನ ಇನ್ನೂರು ಕಿ ಮೀ ಪ್ರಯಾಣದ ಕಾರಣ ಆರು ಗಂಟೆಗಳು ಪ್ರಯಾಣದಲ್ಲಿಯೇ ಕಳೆದು ಹೋಗುತ್ತದೆ. ಶಾಲೆಯಿಂದ ಅರಸೀಕೆರೆಗೆ ಬಂದ ನಂತರ ಸಂಗೀತ ಹಾಗೂ ವೀಣೆ ತರಗತಿಗೆ ಹೋಗಿ ಮನೆಗೆ ಬರುವುದು ರಾತ್ರಿ ಎಂಟು ಗಂಟೆ. ಮನೆಗೆ ಬಂದ ನಂತರ ಶುಭ್ರವಾಗಿ ಊಟ ಮುಗಿಸಿ ಸಂಗೀತ ಅಭ್ಯಾಸ, ವೀಣೆ ಅಭ್ಯಾಸ, ಮಾರನೆಯ ದಿನ ತೆಗೆದುಕೊಳ್ಳುವ ತರಗತಿಗಳ ಸಿದ್ದತೆ , ಕವನ, ಲೇಖನ ಬರೆವಣಿಗೆ ನಂತರ ಸರಿಯಾಗಿ ಹನ್ನೆರಡು ಗಂಟೆಗೆ ಡೈರಿ ಬರೆದು ಮಲಗಿದರೆ ಪುನಃ ಏಳುವುದು ಬೆಳಗಿನ ಜಾವ ಮೂರು ಗಂಟೆಗೆ. ಹೀಗೆ ಬೆಳಗಿನ ಜಾವ ಮೂರು ಗಂಟೆಗೆ ಎದ್ದರೆ ಮಲಗುವುದು ರಾತ್ರಿ ಹನ್ನೆರಡು ಗಂಟೆಗೆ. ನನಗೆ ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಹ ಸಾಲದಾಗಿದೆ. ಒತ್ತಡದ ನಡುವೆ ಒಂದಿಷ್ಟು ಉಲ್ಲಾಸ ಉತ್ಸಾಹ ತಂದು ಕೊಡುವುದು ನನಗೆ ಸಂಗೀತ ಹಾಗೂ ಸಾಹಿತ್ಯ. ಹಾಗಾಗಿ ಸಪ್ತಸ್ವರ ನಾದ ಮಂದಿರದ ನನ್ನ‌ಪೂಜ್ಯ ಗುರುಗಳಾದ ವಿದೂಷಿ ಶ್ರೀ ಮತಿ ವೀಣಾ ಮೇಡಮ್ ಬಳಿ ಕಳೆದ ಮೂರು ವರ್ಷಗಳಿಂದ ಕರ್ನಾಟಕ ಶಾಸ್ತೀಯ ಸಂಗೀತ, ಸುಗಮ ಸಂಗೀತ ಹಾಗೂ ವೀಣೆಯನ್ನು ಅಭ್ಯಸಿಸುತಿರುವೆ. ಸಾಹಿತ್ಯ ಸೃಷ್ಟಿಯೂ ಜೊತೆ ಜೊತೆಗೆ ಸಾಗುತ್ತಲಿದೆ. ಹೀಗೆ ವೃತ್ತಿಪ್ರವೃತ್ತಿ ಎಂದು ಹಲ್ವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರೂ ನನಗೆ ಅತಿ ಹೆಚ್ಚು ಖುಷಿ ಕೊಡುವ ಕ್ಷಣಗಳೆಂದರೆ ಅದು ನನ್ನ ವಿದ್ಯಾರ್ಥಿಗಳೊಂದಿಗೆ ಕಳೆಯುವ ಕ್ಷಣಗಳು. ಕಲಿತು ಕಲಿಸುವ ತತ್ವವನ್ನು ನನ್ನೊಳಗೆ ಅಳವಡಿಸಿಕೊಂಡಿರುವುದರಿಂದ ನಿರಂತರ ಕಲಿಕಾರ್ಥಿಯಾಗಿದ್ದೇನೆ.
ವೈದ್ಯೆಯಾಗಬೇಕೆಂಬ ಕನಸು ನನಸಾಗಲಿಲ್ಲವಾದರೂ ಇಂದು ನನ್ನ ವಿದ್ಯಾರ್ಥಿಗಳು ಸಾಕಷ್ಟು ಜನ ವೈದ್ಯಕೀಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು‌ ನನ್ನ ಸಂಪರ್ಕದಲ್ಲಿರುವುದು ಹೆಮ್ಮೆಯ ಸಂಗತಿ.
ಹರ ಕೊಲ್ಲಲ್ ಗುರು ಕಾಯ್ವರೆಂಬ ನಾಣ್ಣುಡಿಯಂತೆ ನನ್ನ ಪಾಲಿಗೆ ನನ್ನನ್ನು ಅನವರತ ಪ್ರೋತ್ಸಾಹಿಸುವ ಪ್ರೇರೇಪಿಸುವ ಪ್ರತಿಯೊಬ್ಬರೂ ಕೂಡ ಗುರು ಸಮಾನರೇ

ಇವು ಕೇವಲ ವಿದ್ಯಾರ್ಥಿ ಜೀವನ ಹಾಗೂ ಶಿಕ್ಷಕಿಯಾಗಿ ನನ್ನ ಅನುಭವ

ಬೋಧನೆಗೆ ಯಾವ ಖಾಸಗೀ ಶಾಲೆಯೂ ಅವಕಾಶ ಕೊಡದಿದ್ದ ಸಂದರ್ಭದಲ್ಲಿ ಸರ್ಕಾರ ನನಗೆ ಇಂಥ ಸುವರ್ಣಾವಕಾಶ ಕೊಟ್ಟಿದೆ. ಶಿಕ್ಷಕಿ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ. ಅಮ್ಮನ ಕನಸು ಸಾಕಾರಗೊಳಿಸಿದ ಖುಷಿ ಇದೆ ನನಗೆ.
ಧನ್ಯವಾದಗಳು ಮಾನ್ಯರೇ,ಗೌರವಾನ್ವಿತರೇ, ಬಂಧುಗಳೇ.

ಕು.ಹರ್ಷಿಯಾ ಭಾನು, ಕನ್ನಡ ಭಾಷಾ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ
ಜುಟ್ಟನಹಳ್ಳಿ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ
ಪಿನ್: ೫೭೩೧೨೪

For more details please contact madam Mob no. 70196 37706