ಕೋಲಾರ:- ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಸಂಕೇತವಾಗಿರುವ ತ್ರಿವರ್ಣ ಧ್ವಜದ ಮಹತ್ವವನ್ನು ಪ್ರತಿಯೊಬ್ಬ ಭಾರತೀಯರು ಅರಿತು, ಹೆಮ್ಮೆಯಿಂದ ಗೌರವ ನೀಡಬೇಕೆಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.
ನಗರದ ಕಾರಂಜಿಕಟ್ಟೆ ಧರ್ಮರಾಯಸ್ವಾಮಿ ದೇವಾಲಯ ಸಮುದಾಯ ಭವನ ಸಭಾಂಗಣದಲ್ಲಿ ಶುಕ್ರವಾರ ಎಇಎಸ್ ಪಬ್ಲಿಕ್ ಶಾಲೆ ಮತ್ತು ಸುಭಾಷ್ ಶಾಲೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಧ್ವಜ ಅಂಗೀಕಾರ ಅಮೃತಮಹೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದ ಬಹಳಷ್ಟು ಜನರಿಗೆ ರಾಷ್ಟ್ರಧ್ವಜ ಸಂಹಿತೆಯ ಕುರಿತು ಅರಿವೇ ಇಲ್ಲವೆಂದು ವಿಷಾದಿಸಿದ ಅವರು, ಭಾರತ ಸೇವಾದಳ ಪ್ರತಿ ಶಾಲೆಯಲ್ಲಿಯೂ ರಾಷ್ಟ್ರಧ್ವಜ ಮಾಹಿತಿ ಶಿಬಿರಗಳ ಆಯೋಜಿಸುವ ಮೂಲಕ ಅರಿವು ಮೂಡಿಸುತ್ತಿದೆಯೆಂದು ಹೇಳಿದರು.
ರಾಷ್ಟ್ರಧ್ವಜವನ್ನು ಹೇಗೆ ಯಾವಾಗ ಹಾರಿಸಬೇಕು, ಹೇಗೆ ಯಾವಾಗ ಇಳಿಸಬೇಕು, ಹೇಗೆ ಮಡಚಿಡಬೇಕು, ಹರಿದು ಗಲೀಜಾದರೆ ಏನು ಮಾಡಬೇಕು, ರಾಷ್ಟ್ರಗೀತೆ ಹೇಗೆ ಹಾಡಬೇಕು, ರಾಷ್ಟ್ರಧ್ವಜಕ್ಕೆ ಹೇಗೆ ಧ್ವಜವಂದನೆ ಮಾಡಬೇಕು ಇತ್ಯಾದಿ ವಿಚಾರಗಳನ್ನು ವಿದ್ಯಾರ್ಥಿಗಳು ಸೇವಾದಳ ಶಿಬಿರಗಳ ಮೂಲಕ ಅರಿತುಕೊಳ್ಳಬಹುದು, ರಾಷ್ಟ್ರಧ್ವಜ ಅಂಗೀಕಾರ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಿದ -Àಲ್ಗುಣ ಮತ್ತು ನಿವೃತ್ತ ಪೋಲೀಸ್ ಅಧಿಕಾರಿ ರವಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.
ರೆಡ್ ಕ್ರಾಸ್ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣಗೌಡ ಮಾತನಾಡಿ, ರಾಷ್ಟ್ರಭಕ್ತಿ, ರಾಷ್ಟ್ರಧ್ವಜ, ರಾಷ್ಟ್ರಗೀತೆಯ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯುವುದರ ಜೊತೆಗೆ ವಿದ್ಯಾರ್ಥಿ ಸಮೂಹ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು, ಅದರಲ್ಲೂ ಯುವಕ ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಿ ಅಪತ್ಕಾಲಅಪಘಾತದಿಂದ ನರಳುತ್ತಿದ್ದವರಿಗೆ ಜೀವದಾನ ಮಾಡಬೇಕೆಂದರು.
ಅಧ್ಯಕ್ಷತೆವಹಿಸಿದ್ದ ನಿವೃತ್ತ ಅಬಕಾರಿ ಡಿವೈಎಸ್ಪಿ ಎಲ್.ಎ.ಮಂಜುನಾಥ್ ಮಾತನಾಡಿ, ನಕಲಿ ರಾಷ್ಟ್ರಭಕ್ತರ ನಡುವೆ ನೈಜ ರಾಷ್ಟ್ರಭಕ್ತಿಯನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು, ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಟ್ಟುಕೊಳ್ಳಲು ಸಹಕರಿಸಬೇಕೆಂದರು.
ಕಾರ್ಯಕ್ರಮದ ರೂವಾರಿ ನಿವೃತ್ತ ಪೋಲೀಸ್ ಅಧಿಕಾರಿ ರವಿ ಮತ್ತು ಫಲ್ಗುಣ ಮಾತನಾಡಿ, ಆಂಧ್ರಪ್ರದೇಶದ ಪಿಂಗಳಿ ವೆಂಕಣ್ಣ ತ್ರಿವರ್ಣ ಧ್ವಜವನ್ನು ರೂಪಿಸಿದ್ದು, 1947, ಜುಲೈ 22 ರಂದು ದೇಶವು ಅಂಗೀಕರಿಸಿತು. ಇದರ ನೆನಪಿಗಾಗಿ ವಿದ್ಯಾರ್ಥಿ ಸಮೂಹಕ್ಕೆ ರಾಷ್ಟ್ರ ಧ್ವಜದ ಮಾಹಿತಿ ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾಗಿ ವಿವರಿಸಿ, ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆಯನ್ನು ಇನ್ನು ಮುಂದೆ ಸರಕಾರವೇ ಎಲ್ಲೆಡೆ ಆಚರಿಸಬೇಕೆಂದು ಆಗ್ರಹಿಸಿದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಿವೃತ್ತ ಯೋಧ ನಾರಾಯಣಪ್ಪ ಮಾತನಾಡಿ, ವಿದ್ಯಾರ್ಥಿ ಯುವ ಸಮೂಹವು ದೇಶ ಕಾಪಾಡುವ ಯೋಧರಾಗಲು ಮಾನಸಿಕವಾಗಿ ದೈಹಿಕವಾಗಿ ಸನ್ನದ್ಧರಾಗಬೇಕೆಂದು ಸಲಹೆ ನೀಡಿದರು.
ಬಿಸಿಎಂ ಜಿಲ್ಲಾಧಿಕಾರಿ ಸೋನಿಯಾ ಮಾತನಾಡಿ, ತ್ರಿವರ್ಣ ಧ್ವಜದ ತ್ಯಾಗ, ಶಾಂತಿ ಮತ್ತು ಸಮೃದ್ಧತೆ ಹಾಗೂ ಅಶೋಕ ಚಕ್ರದ ಪ್ರಗತಿಯ ಸಂದೇಶವನ್ನು ಪ್ರತಿ ವಿದ್ಯಾರ್ಥಿಯೂ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಉನ್ನತಕ್ಕೇರಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಾರತ ದೇಶವನ್ನು ವಾಲಿಬಾಲ್ ತಂಡದಲ್ಲಿ ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದ ತಂಡದಲ್ಲಿದ್ದ ಕೋಲಾರ ಜಿಲ್ಲೆಯ ಮಧುಕುಮಾರ್ ಹಾಗೂ ಬೆರಳಚ್ಚು ಪರೀಕ್ಷೆಯಲ್ಲಿ ಅತ್ಯುತ್ತಮ ಸ್ಥಾನ ಗಳಿಸಿ ಶ್ರುತಿಯನ್ನು ಸನ್ಮಾನಿಸಲಾಯಿತು.
ರಾಷ್ಟ್ರಧ್ವಜ ಕುರಿತಂತೆ ವಿದ್ಯಾರ್ಥಿಗಳು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದರು. ಜಾನಪದ ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ..ಗೀತೆಯನ್ನು ಗಾಯನ ಮಾಡಿದರು. ವಿದ್ಯಾರ್ಥಿನಿಯರ ತಂಡದಿಂದ ನೃತ್ಯ ಕಾರ್ಯಕ್ರಮವಿತ್ತು. ವಿವಿಧ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ವೇದಿಕೆಯಲ್ಲಿ ತಿಗಳ ಸಮುದಾಯದ ಮುಖಂಡರಾದ ವೆಂಕಟೇಶ್, ಮುನಿಯಪ್ಪ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ತ್ಯಾಗರಾಜು, ಸುಭಾಷ್ ಶಾಲೆಯ ಮುಖ್ಯ ಶಿಕ್ಷಕ ವೇಣುಗೋಪಾಲ್, ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರಧ್ವಜ ಅಂಗೀಕಾರ ಅಮೃತಮಹೋತ್ಸವ ದಿನಾಚರಣೆ ಅಂಗವಾಗಿ ಎಇಎಸ್ ಪಬ್ಲಿಕ್ ಶಾಲೆಯ ಮಕ್ಕಳು ಬೃಹತ್ ತ್ರಿವರ್ಣ ಧ್ವಜವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ್ದು ಗಮನ ಸೆಳೆಯಿತು.
ಎಇಎಸ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಸಂಧ್ಯ, ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ವಂದಿಸಿದರು.