ಶ್ರೀನಿವಾಸಪುರ : ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಬೇಕು . ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಚರಣೆ ಅರ್ಥಪೂರ್ಣವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು .
ಪಟ್ಟಣದ ಎಂಜಿ ರಸ್ತೆಯಲ್ಲಿ ತಾಲ್ಲೂಕು ಕಂದಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು , ಆ .೧೩ , ೧೪ , ೧೫ ರಂದು ನಾಗರಿಕರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಹೇಳಿದರು .
ಸಮಾಜದ ಎಲ್ಲ ವರ್ಗದ ಜನರಿಗೂ ಅನುಕೂಲವಾಗುವಂತೆ ತ್ರಿವರ್ಣ ಧ್ವಜ ಮಾರಾಟ ದರ ರೂ .೨೨ ಕ್ಕೆ ನಿಗದಿಪಡಿಸಲಾಗಿದೆ . ಪ್ರತಿ ಮನೆಯ ಮೇಲೂ ಸ್ವಾತಂತ್ರ್ಯ ಸಂಭದ ಸಂಕೇತವಾಗಿ ತಪ್ಪದೆ ಧ್ವಜಾರೋಹಣ ಮಾಡುವುದರ ಮೂಲಕ ರಾಷ್ಟ್ರ ಪ್ರೇಮ ಮೆರೆಯಬೇಕು ಎಂದು ಹೇಳಿದರು .
ಶಿರಸ್ತೇದಾರ್ ಮನೋಹರ ಮಾನೆ , ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ , ಗ್ರಾಮ ಲೆಕ್ಕಾಧಿಕಾರಿ ಭೀಮರಾವ್ , ನಾಗರಾಜ್ ಮತ್ತಿತರರು ಇದ್ದರು .