ರೈತರ ಅಲೆದಾಟಕ್ಕೆ ಬ್ರೇಕ್-ಪಹಣಿ ತಿದ್ದುಪಡಿ, ಬಾಕಿ ಪ್ರಕರಣ ವಿಲೇವಾರಿಗೆ ಜಿಲ್ಲಾಧಿಕಾರಿಗಳ ಕಟ್ಟಪ್ಪಣೆ-ಎಡಿಸಿ,ಸರ್ವೇ ಉಪನಿರ್ದೇಶಕರು,ಎಸಿಗೆ ಉಸ್ತುವಾರಿ

ಕೋಲಾರ:- ಸರ್ಕಾರಿ ಕಚೇರಿಗಳಿಗೆ ರೈತರು ಅಲೆಯುವುದನ್ನು ತಪ್ಪಿಸಲು ಸಂಕಲ್ಪ ತೊಟ್ಟಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ಇದೀಗ ಪಹಣಿ ತಿದ್ದುಪಡಿ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ಕೆಲಸಗಳ ಶೀಘ್ರ ವಿಲೇವಾರಿಗೆ ಅಪರ ಡಿಸಿ,ಸರ್ವೇ ಇಲಾಖೆ ಉಪನಿರ್ದೇಶಕರು, ವಿಭಾಗಾಧಿಕಾರಿಗಳಿಗೆ ಉಸ್ತುವಾರಿ ವಹಿಸಿ ಕಡತ ವಿಲೇವಾರಿಯನ್ನು ಅಭಿಯಾನದ ರೀತಿ ನಡೆಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಂದಾಯ, ಸರ್ವೇ ಇಲಾಖೆಯಲ್ಲಿ ಪಹಣಿ ತಿದ್ದುಪಡಿ, ಪೈಕಿ ಆರ್‍ಟಿಸಿ ತಿದ್ದುಪಡಿಗಳಿಗಾಗಿ ರೈತರು ಅಲೆಯುವಂತಾಗಿದ್ದು, ಇದನ್ನು ಮನಗಂಡಿರುವ ಜಿಲ್ಲಾಧಿಕಾರಿಗಳು ಪ್ರಗತಿ ಪರಿಶೀಲನೆ ನಡೆಸಿ, ಬಾಕಿ ಕಡತಗಳ ವಿಲೇವಾರಿಗೆ ಕಟ್ಟಪ್ಪಣೆ ಮಾಡಿದ್ದಾರೆ ಮತ್ತು ಆಯಾ ದಿನ ವಿಲೇವಾರಿಯಾದ ಪ್ರಕರಣಗಳ ಕುರಿತು ಅದೇ ದಿನ ಪ್ರಗತಿಪರಿಶೀಲನೆ ನಡೆಸುತ್ತಿದ್ದಾರೆ.
ಎಲ್ಲಾ ಅಧಿಕಾರಿಗಳು, ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಾಕಿ ಕಡತಗಳ ವಿಲೇವಾರಿಗೆ ಡಿಸಿಯವರು ಕೈಹಾಕಿರುವುದರಿಂದ ಎಲ್ಲಾ ಅಧಿಕಾರಿಗಳು,ನೌಕರರು ಖುಷಿಯಿಂದಲೇ ಡಿಸಿಯವರಿಗೆ ಸ್ಪಂದಿಸಿ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ.
ಅಮೃತ ಸರೋವರ ಯೋಜನೆಯಡಿ ಕೆರೆಗಳ ಅಳತೆ, ಗಡಿ ಗುರುತಿಸುವಿಕೆ, ಮುಜರಾಯಿ ದೇವಾಲಯಗಳ ಜಾಗ,ಆಸ್ತಿಯ ಅಳತೆಗೆ ಕ್ರಮವಹಿಸುವ ಮೂಲಕ ಸರ್ಕಾರಿ ಆಸ್ತಿಗಳನ್ನು ಉಳಿಸುವ ಕಾರ್ಯಕ್ಕೂ ಕೈಹಾಕಿದ್ದು, ಯಾವುದೇ ಪ್ರಚಾರದ ಅಬ್ಬರವಿಲ್ಲದೇ ಈ ಕೆಲಸಗಳಿಗೆ ಚಾಲನೆ ನೀಡಿದ್ದಾರೆ.
ಕಂದಾಯ,ಸರ್ವೇ ಇಲಾಖೆಗಳಿಗೆ ಸಂಬಂಧಿಸಿದಂತೆ ಸೂಚಿಸಿರುವ ಬಾಕಿ ಕಡತಗಳ ವಿಲೇವಾರಿ ಗಮನಿಸಲು ಅಪರ ಜಿಲ್ಲಾಧಿಕಾರಿ ಶಂಕರ್ ವಾಣಿಕ್ಯಾಳ್, ವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ಸರ್ವೇ ಇಲಾಖೆ ಉಪನಿರ್ದೇಶಕಿ ಭಾಗ್ಯಮ್ಮ ಅವರಿಗೆ ಉಸ್ತುವಾರಿ ವಹಿಸಿದ್ದು, ಪ್ರತಿದಿನದ ಕಡತಗಳ ವಿಲೇವಾರಿ ಮಾಹಿತಿ ಪಡೆಯುವ ಮೂಲಕ ಆಡಳಿತದಲ್ಲಿ ಸಂಚಲನ ಮೂಡಿಸಿದ್ದಾರೆ.
ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು ಹೋಬಳಿಗಳ ಸಿಬ್ಬಂದಿಯನ್ನು ಕರೆಸಿಕೊಂಡು ಪಹಣಿ ತಿದ್ದುಪಡಿ ಸೇರಿದಂತೆ ಬಾಕಿ ಕಡತಗಳ ವಿಲೇವಾರಿಗೆ ತುರ್ತು ಕ್ರಮವಹಿಸಲು ಸೂಚಿಸಿದ್ದು,ಈ ಹಿಂದೆ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯದಲ್ಲಿ ಸ್ವೀಕರಿಸಲಾದ ಅರ್ಜಿಗಳ ವಿಲೇವಾರಿಗೂ ಕ್ರಮವಹಿಸಿದ್ದಾರೆ.
ಭೂಮಿ ವಿಭಾಗದಲ್ಲಿ ಬಾಕಿ ಪ್ರಕರಣಗಳೂ, 53,57ರ ಅರ್ಜಿ ವಿಲೇವಾರಿ, ಸಕಾಲ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳು, ಎಸಿ ಹಾಗೂ ತಾಹಸೀಲ್ದಾರ್ ಕೋರ್ಟ್‍ಗಳ ಪ್ರಕರಣಗಳು, ರಾಷ್ಟ್ರೀಯ ಹೆದ್ದಾರಿಯ ಪೋಡಿ ಪ್ರಕರಣಗಳ ಪ್ರಗತಿ ಪರಿಶೀಲಿಸಿರುವ ಡಿಸಿಯವರು ಕಡತಗಳ ತ್ವರಿತ ವಿಲೇವಾರಿಗೆ ಕ್ರಮವಹಿಸಿದ್ದು, ಈ ಸಂಬಂಧ ಕಂದಾಯ ಇಲಾಖೆ ಆಡಳಿತಕ್ಕೆ ಚುರುಕು ನೀಡಿದ್ದಾರೆ.
ಸ್ಮಶಾನ ಭೂಮಿ ಮಂಜೂರಾತಿ, ಸರ್ಕಾರಿ ಜಾಗದ ಕರೆ,ಗೋಮಾಳ,ಸ್ಮಶಾನ ಒತ್ತುವರಿ ತೆರವುಗೊಳಿಸುವುದು ಮನೆ ಸಮೀಕ್ಷೆ ಈ ಎಲ್ಲಾ ಪ್ರಕರಣಗಳ ವಿಲೇವಾರಿಗೆ ತಹಸೀಲ್ದಾರ್‍ಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅದೇ ರೀತಿ ತಹಸೀಲ್ದಾರರು ತಮ್ಮ ಅಧೀನ ಕಚೇರಿಗಳ ಪ್ರಗತಿ ಪರಿಶೀಲನೆ ನಡೆಸಿ ಕಡತಗಳು ಬಾಕಿ ಇರದಂತೆ ಕ್ರಮವಹಿಸಲು ಸೂಚಿಸಿರುವ ಅವರು, ಜನಪರವಾಗಿ ಜನರ ಸೇವೆ ಮಾಡುವ ಬದ್ದತೆಯಿಂದ ಕೆಲಸ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಈ ಸಂಬಂಧ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಜನಪರ ಕೆಲಸಕ್ಕೆ ಕೈಹಾಕಿರುವ ಜಿಲ್ಲಾಧಿಕಾರಿಗಳ ನಡೆ ನಮಗೆ ಪ್ರೇರಣೆಯಾಗಿದ್ದು, ಎಲ್ಲಾ ಅಧಿಕಾರಿಗಳು,ಸರ್ಕಾರಿ ನೌಕರರು ಅವರ ಮಾರ್ಗದರ್ಶನದಲ್ಲಿ ಜನರ ಸಮಸ್ಯೆಗಳ ನಿವಾರಣೆಗೆ ಖುಷಿಯಿಂದ ಕೈಜೋಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಮುಕ್ತಿ ನೀಡುವ ಮೂಲಕ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಿ ರೈತರು,ಸಾರ್ವಜನಿಕರ ಅಲೆದಾಟ ತಪ್ಪಿಸಲು ಜಿಲ್ಲಾಧಿಕಾರಿಗಳು ಕೈಗೊಂಡಿರುವ ಈ ಕಡತ ವಿಲೇವಾರಿ ಅಭಿಯಾನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.