ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ದೇಶದಲ್ಲಿನ ಅಸಮಾನತೆ,ಶೋಷಣೆ ತೊಡೆದು ಹಾಕುವಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಪ್ರಮುಖ ಅಸ್ತ್ರವಾಗಿದೆ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಅಭಿಪ್ರಾಯಪಟ್ಟರು.
ಗುರುವಾರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಬಡತನದಲ್ಲಿ ಬಂದರೂ ಸಾಧನೆಯ ಶಿಖರವೇರಿದ ಅವರ ಆದರ್ಶವನ್ನು ಪಾಲಿಸುವಂತೆ ಮಕ್ಕಳಿಗೆ ಕರೆ ನೀಡಿದರು.
ಅಂಬೇಡ್ಕರ್ ಓರ್ವ ವ್ಯಕ್ತಿಯಾಗಿರಲಿಲ್ಲ, ಈ ಸಮಾಜದಲ್ಲಿ ಬದಲಾವಣೆ ಬಯಸಿದ್ದ ಮಹಾನ್ ಶಕ್ತಿಯಾಗಿದ್ದರು ಎಂದ ಅವರು, ಅವರ ಆದರ್ಶದಂತೆ ಮಕ್ಕಳು ಮುನ್ನಡೆಯಬೇಕು, ಅವರ ಶಿಕ್ಷಣ,ಸಮಾನತೆ,ಸ್ವಾತಂತ್ರ್ಯದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ಮಾತನಾಡಿ, ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ, ಅವರ ಹಾದಿಯಲ್ಲಿ ಸಾಗೋಣ, ಸಮಾನತೆಯ ಸಮಾಜ ನಿರ್ಮಿಸೋಣ ಎಂದರು.
ದೇಶಕ್ಕೆ ಅವರು ನೀಡಿದ ಸಂವಿಧಾನ ದೇಶದಲ್ಲಿ ಅಸಮಾನತೆ ಹೋಗಲಾಡಿಸಿ ಸಮಾನತೆಯ ಬದುಕನ್ನು ತರುವುದಾಗಿದೆ ಎಂದು ತಿಳಿಸಿದರು.
ನಮ್ಮ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ, ಈ ದೇಶದ ಜನರ ಬದುಕಿಗೆ ಹತ್ತಿರವಾಗಿದೆ ಎಂದು ತಿಳಿಸಿ, ಇಂತಹ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಂವಿಧಾನ ನೀಡಿ, ನಮ್ಮ ಹಕ್ಕುಗಳ ಜತೆ ಕರ್ತವ್ಯಗಳನ್ನು ನೆನಪಿಸಿ ಹೋಗಿದ್ದಾರೆ ಎಂದರು.
ಶಿಕ್ಷಕ ಸಚ್ಚಿದಾನಂದಮೂರ್ತಿ ಹಾಗೂ ವಿ.ವೆಂಕಟರೆಡ್ಡಿ ಮಾತನಾಡಿ, ಅಂಬೇಡ್ಕರ್ ಅವರು ಈ ದೇಶ ಕಂಡ ಮಹಾನ್ ಚೇತನ, ಅವರಿಂದಾಗಿ ಇಂದು ಶೋಷಣೆ,ಅಸಮಾನತೆ ಕೊನೆಗೊಳ್ಳುತ್ತಿದೆ ಎಂದು ತಿಳಿಸಿ, ಸಂವಿಧಾನದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಟ್ಟರ.
ಈ ಸಂದರ್ಭದಲ್ಲಿ ಎಸ್‍ಡಿಎಂಸಿ ಸದಸ್ಯ ರಾಮಚಂದ್ರಪ್ಪ, ಶಿಕ್ಷಕರಾದ ಸಿದ್ದೇಶ್ವರಿ,ಎಂ.ಆರ್.ಗೋಪಾಲಕೃಷ್ಣ, ಭವಾನಿ,ಲೀಲಾ, ಫರೀದಾ, ಸುಗುಣಾ, ಶ್ರೀನಿವಾಸಲು,ಡಿ.ಚಂದ್ರಶೇಖರ್ ಮತ್ತಿತರರಿದ್ದರು.