ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಸಮಾನತೆ,ಸಾಮರಸ್ಯದ ಸಂದೇಶ ಸಾರಿದ ಭಾರತ ರತ್ನ ಅಂಬೇಡ್ಕರ್, ಮಹಾವೀರರಂತಹ ಮಹನೀಯರ ಜಯಂತಿಗೆ ರಜೆ ಬೇಡ, ಅಂದು ಅವರ ಆದರ್ಶ ಪಾಲಿಸುವ ಮೂಲಕ ಸಮಾಜದಲ್ಲಿನ ಶೋಷಿತರ ಪರ ಹೆಚ್ಚೆಚ್ಚು ಕೆಲಸ ಮಾಡುವಂತಾಗಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಗಾಯಿತ್ರಿ ಪ್ರಾರ್ಥನಾ ಮಂದಿರದಲ್ಲಿ ಮನ್ವಂತರ ಜನಸೇವಾ ಟ್ರಸ್ಟ್‍ವತಿಯಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್ ಹಾಗೂ ಮಹಾವೀರಜಯಂತಿ ಕಾರ್ಯಕ್ರಮವನ್ನು ಪ್ರತಿಭಾವಂತ ವಿದ್ಯಾರ್ಥಿನಿಯನ್ನು ಸನ್ಮಾನಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಂಬೇಡ್ಕರ್ ಹೆಸರು ಹೇಳುವ ಮುನ್ನಾ ಅವರ ಆದರ್ಶ,ತತ್ವಗಳನ್ನು ಪಾಲಿಸುವ ಸಂಕಲ್ಪ ಮಾಡಬೇಕು, ಅವರ ಹೆಸರೇಳಿಕೊಂಡು ನಾವು ತಪ್ಪು ಹಾದಿ ತುಳಿದರೆ ಅದು ಆ ಮಹನೀಯರಿಗೆ ಮಾಡಿದ ಅಪಮಾನವಾಗುತ್ತದೆ ಎಂದು ಎಚ್ಚರಿಸಿದರು.
ಅಂಬೇಡ್ಕರ್ ಶೋಷಿತರ ಧ್ವನಿ ಮಾತ್ರವಲ್ಲ, ಇಡೀ ವಿಶ್ವಕ್ಕೆ ಸಮಾನತೆಯ ಸಂದೇಶ ನೀಡಿದ ಮಹಾನ್ ಚೇತನ, ಅವರ ತತ್ವಾದರ್ಶಗಳು ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಅಗತ್ಯವಿದೆ, ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅವರು ನೀಡಿರುವ ಸಂವಿಧಾನಕ್ಕೆ ಸಾಟಿಯೇ ಇಲ್ಲ ಎಂದರು.
ಅಂಬೇಡ್ಕರ್‍ರನ್ನು ಪ್ರತಿಯೊಬ್ಬರೂ ಸ್ಮರಿಸಬೇಕೆಂಬ ಉದ್ದೇಶದಿಂದಲೇ ಸರ್ವರನ್ನು ಕೂಡಿಸಿ ಮನ್ವಂತರ ಜನಸೇವಾ ಟ್ರಸ್ಟ್‍ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆಯೆಂದರು.
ಮಾಜಿ ಶಾಸಕ ಕೆ.ಶ್ರೀನಿವಾಸಯ್ಯ ಮಾತನಾಡಿ, ಅಂಬೇಡ್ಕರ್ ಕುರಿತು ಹೆಚ್ಚು ಮಾತನಾಡುವ ಅಗತ್ಯವಿಲ್ಲ, ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕಷ್ಟೇ ಎಂದು ಹೇಳಿದರು.
ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದಲೇ ದೇಶವು ಸುಭದ್ರವಾಗಿದೆಯೆಂದು ಹೇಳಿದ ಅವರು, ಅವರ ಆಶಯಗಳನ್ನು ಪರಿಪೂರ್ಣವಾಗಿ ಈಡೇರಿಸಿದಾಗ ಮಾತ್ರವೇ ದೇಶವು ವಿಶ್ವದಲ್ಲಿಯೇ ಮಂಚೂಣಿಯಲ್ಲಿ ನಿಲ್ಲುತ್ತದೆ ಎಂದರು.
ಅಂಬೇಡ್ಕರ್ ಕೇವಲ ದಲಿತ ಉದ್ಧಾರಕರಲ್ಲ ಸಮಸ್ತ ದೇಶದ ಜನರ ಉದ್ಧಾರಕರಾಗಿದ್ದಾರೆ, ಅವರನ್ನು ಜಾತಿಗೆ ಸೀಮಿತಪಡಿಸುವುದು ಅವರಿಗೆ ಮಾಡುವ ಅಪಮಾನವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಹರಟಿ ನಾರಾಯಣಪ್ಪ ಮಾತನಾಡಿ, ಅಂಬೇಡ್ಕರ್ ವಿಚಾರಧಾರೆಗಳು ಸಮಾಜವನ್ನು ಹೇಗೆ ಕೂಡಿಸುತ್ತದೆ ಎಷ್ಟು ಪ್ರಯೋಜನಕಾರಿ, ಹೇಗೆ ನಿರ್ಲಕ್ಷಿಸುತ್ತಿದ್ದೇವೆ ಎಂಬುದರ ಕುರಿತು ಉಪನ್ಯಾಸ ನೀಡಿದರು.
ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಅಂಬೇಡ್ಕರ್ ಆಶಯದಂತೆ ಪ್ರತಿಯೊಬ್ಬರೂ ಅಸ್ಪೃಶ್ಯತೆಯನ್ನು ನಿವಾರಿಸಲು ಕಂಕಣಬದ್ಧರಾಗಬೇಕು, ಇದಕ್ಕಾಗಿ ಪ್ರಚಾರ ಬಯಸದೆ ಶ್ರಮಿಸಬೇಕೆಂದರು.
ದಲಿತ ಮುಖಂಡ ವಕ್ಕಲೇರಿ ರಾಜಪ್ಪ ಮಾತನಾಡಿ, ಮನುಷ್ಯರು ಎಲ್ಲಾ ಸಮಾನರು ಎಂಬ ಆಶಯವನ್ನು ಪ್ರತಿಯೊಬ್ಬ ಮಹನೀಯರು ನೀಡಿದ್ದಾರೆ, ಆದರೆ, ನಾವೆಷ್ಟು ಬದಲಾಗಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆಯೆಂದರು.
ಜೈನ್ ಸಮುದಾಯದ ಮುಖಂಡ ಜಯಂತಿಲಾಲ್ ಮಾತನಾಡಿ, ಅಂಬೇಡ್ಕರ್ ಹಾಗೂ ಮಹಾವೀರರ ಜಯಂತಿ ಒಂದೇ ಬಂದಿರುವುದು ಅರ್ಥಪೂರ್ಣವಾಗಿದೆ, ಇಬ್ಬರೂ ಮಹನೀಯರು ಸಮಾನತೆಯನ್ನು ಪ್ರತಿಪಾದಿಸಿದವರೇ ಆಗಿದ್ದಾರೆಂದರು.
ಮನ್ವಂತರ ಜನಸೇವಾ ಟ್ರಸ್ಟ್ ಕಾರ್ಯದರ್ಶಿ ಅನಂತರಾಮ್ ಮಾತನಾಡಿ, ಗಾಯತ್ರಿ ಪ್ರಾರ್ಥನ ಮಂದಿರದಲ್ಲಿ ಸರ್ವಜನಾಂಗದವರನ್ನು ಸೇರಿಸಿ ಅಂಬೇಡ್ಕರ್ ಹಾಗೂ ಮಹಾವೀರ ಜಯಂತಿಯನ್ನು ಅರ್ಥಪೂರ್ಣವಾಗಿ ಮಾಡಲಾಗುತ್ತಿದೆಯೆಂದರು.
ರೈತಸಂಘದ ಮಹಿಲಾ ಅಧ್ಯಕ್ಷ ನಳಿನಿಗೌಡ, ಮಹಿಳೆಯರು ಸಮಾನ ಹಕ್ಕುಗಳನ್ನು ಪಡೆಯಲು ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಮನ್ವಂತರ ಜನಸೇವಾ ಟ್ರಸ್ಟ್‍ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮತ್ತು ವಿವಿಧ ಸಮುದಾಯಗಳ ಮುಖಂಡರು ಹಾಜರಿದ್ದರು.