ಭಾರತದ ಅಗಾಧ ಸಾಧನೆಗೆ ಅಂಬೇಡ್ಕರ್‌ ಕಾರಣ – ಸಿಎಂಆರ್ ಶ್ರೀನಾಥ್

ಕೋಲಾರ : – ಭಾರತದ ಅಗಾಧ ಸಾಧನೆಗೆ ಅಂಬೇಡ್ಕರ್‌ ನೀಡಿದ ಸಂವಿಧಾನವೇ ಕಾರಣವಾಗಿದೆಯೆಂದು ಭಾರತ ಸೇವಾದಳ ಜಿಲ್ಲಾ ಗೌರವಾಧ್ಯಕ್ಷ ಸಿ.ಎಂ.ಆರ್ . ಶ್ರೀನಾಥ್ ಅಭಿಪ್ರಾಯಪಟ್ಟರು . ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಅಂಬೇಡ್ಕರ್‌ರ ೬೬ ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡುತ್ತಿದ್ದರು . ಸಂವಿಧಾನ ಭಾರತಕ್ಕೆ ಸೀಮಿತವಾಗಿದರೂ , ವಿಶ್ವದ ಹತ್ತು ಹಲವು ರಾಷ್ಟ್ರಗಳ ಅನುಸರಣೆ ಮತ್ತು ಅಳವಡಿಕೆಗೆ ಕಾರಣವಾಗಿದೆಯೆಂದು ವಿವರಿಸಿದರು . ಸಂವಿಧಾನದ ಮಹತ್ವ ಪ್ರತಿಯೊಬ್ಬರ ಬದುಕಿನ ಪ್ರತಿ ಆಚರಣೆಯಲ್ಲೂ ಪ್ರತಿಫಲಿಸುವಂತಾದರೆ ದೇಶದ ಪ್ರಗತಿ ಸಾಧ್ಯವೆಂದು ಹೇಳಿದ ಅವರು , ಸೇವಾದಳವು ಮಹನೀಯರ ಬದುಕಿನ ಸಾಧನೆಗಳ ಸ್ಮರಣೆ ಕಾರ್ಯಕ್ರಮಗಳ ಅತ್ಯುತ್ತಮವಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು .

ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ , ಅಂಬೇಡ್ಕರ್‌ ಗತಿಸಿ ೬೬ ವರ್ಷಗಳ ನಂತರವೂ ಅವರನ್ನು ದೇಶ ಮಾತ್ರವಲ್ಲದೆ ವಿಶ್ವವ್ಯಾಪಿ ಸ್ಮರಿಸಿಕೊಳ್ಳಲಾಗುತ್ತಿದೆ . ಜೀವಮಾನವಿಡಿ ದೇವರ ಅಸ್ತಿತ್ವನ್ನೇ ನಂಬದ ಅಂಬೇಡ್ಕರ್‌ ಕೋಟ್ಯಾಂತರ ಜನರ ಬದುಕಿಗೆ ದೇವರಾಗಿರುವುದು ಅವರ ಬದುಕಿನ ಶ್ರೇಷ್ಟತೆಯ ಸಂಕೇತವಾಗಿದೆಯೆಂದರು . ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ , ವಿಶ್ವ ಜ್ಞಾನಿ ಅಂಬೇಡ್ಕರ್‌ರ ಆದರ್ಶವನ್ನು ಪ್ರತಿಯೊಬ್ಬರು ಪಾಲಿಸಿ , ಪುಸ್ತಕ ಪ್ರೇಮಿಗಳಾಗಿ , ಸಮಾಜದ ತಪ್ಪುಗಳ ಸರಿಪಡಿಸಿದಾಗ ಮಾತ್ರವೇ ಅವರ ಪರಿನಿರ್ವಾಹಣ ಸ್ಮರಣೆಗೆ ಅರ್ಥ ಎಂದರು . ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್‌.ಸುಧಾಕರ್‌ ಮಾತನಾಡಿ , ಭಾರತ ಭವ್ಯತೆಗಾಗಿ ಅಂಬೇಡ್ಕರ್‌ ಹಾದಿಯಲ್ಲಿ ಸಾಗೋಣ ಎಂದರು . ಕಾರ್ಯಕ್ರಮದಲ್ಲಿ ಸೇವಾದಳ ಪದಾಧಿಕಾರಿಗಳಾದ ಕೆ.ಜಯದೇವ್ , ಫಲ್ಗುಣ ಬಣಕನಹಳ್ಳಿ ನಟರಾಜ್ , ನಿವೃತ್ತ ಡಿವೈಎಸ್ಪಿ ವೆಂಕಟಸ್ವಾಮಿ , ಜಗನ್ನಾಥ್ , ವಿ.ಪಿ.ಸೋಮಶೇಖರ್ , ಸುರೇಶ್ ಮತ್ತಿತರರು ಹಾಜರಿದ್ದರು . ಸೇವಾದಳ ಸಂಘಟಕ ಎಂ.ಬಿ.ದಾನೇಶ್‌ ಕಾರ್ಯಕ್ರಮ ನಿರೂಪಿಸಿದರು . ಸರ್ವಧರ್ಮ ಪ್ರಾರ್ಥನೆ , ರಾಷ್ಟ್ರಗೀತೆ ಗಾಯನ ನೆರವೇರಿತು .