ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಪ್ರತಿಯೊಬ್ಬರೂ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣಸಂಸ್ಥೆಯ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ಪಟ್ಟಣದ ವೆಂಕಟೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಸಭಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರು ರಚಿಸಿರುವ ‘ಯುಗದ ಜ್ಯೋತಿ ಅಂಬೇಡ್ಕರ್’ ಎಂಬ ಗೀತೆಯ ವೀಡಿಯೋವನ್ನು ಟಿ.ವಿ.ಪರದೆಯ ಮೇಲೆ ಬಿಡುಗಡೆ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳು ಡಾ. ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಪಾಲಿಸಬೇಕು. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಸಮಾಜ ಮುಖಿ ಧೋರಣೆ ಹೊಂದಬೇಕು. ಆಗ ಮಾತ್ರ ಬದುಕು ಹಸನಾಗಬಲ್ಲದು. ಆದ್ಧರಿಂಲೇ ಈ ಆದರ್ಶ ಬಿತ್ತುವ ಅಂಬೇಡ್ಕರ್ ಕುರಿತು ರಚಿಸಲಾಗಿರುವ ಹಾಡಿನ ವೀಡಿಯೋ ನಿರ್ಮಿಸಲಾಗಿದೆ ಎಂದು ಹೇಳಿದರು.
ರಾಜ್ಯ ದಲಿತ ಬುದ್ಧ ಸೇನೆ ಅಧ್ಯಕ್ಷ ವರ್ತನಹಳ್ಳಿ ವೆಂಕಟೇಶ್ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಮಹಾ ಮಾನವತಾ ವಾದಿಯಾಗಿದ್ದು, ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ಕಷ್ಟದ ಬದುಕು ಹಾಗೂ ಅದರಿಂದ ಹೊರಬಂದ ರೀತಿ, ಬಹಳಷ್ಟು ಜನರಿಗೆ ಮಾದರಿಯಾಗಿದೆ. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಅಂಬೇಡ್ಕರ್ ಮಾರ್ಗದಲ್ಲಿ ನಡೆಯಬೇಕು. ಅವರ ಜೀವನ ದರ್ಶನ ಪಡೆದು, ದೇಶದ ಹಿತ ಕಾಯಬೇಕು. ಅದಕ್ಕೆ ಪೂರಕವಾಗಿ ಅಂಬೇಡ್ಕರ್ ಅವರ ಬದುಕು, ಬರಹ ಹಾಗೂ ಸಾಧನೆ ಕುರಿತಾದ ಸಾಹಿತ್ಯ ಓದಬೇಕು ಎಂದು ಸಲಹೆ ಮಾಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎನ್.ಕುಬೇರಗೌಡ ಮಾತನಾಡಿ, ತಿದ್ದುಪಡಿ ಮೂಲಕ ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸುವುದು ಹೆಚ್ಚು ಅಪಾಯಕಾರಿ. ರಾಜಕಾರಣಿಗಳಿಂದ ಅಂಥ ಪ್ರಯತ್ನ ನಡೆಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ಎಲ್ಲ ಚರ್ಚೆಗಳೂ ಸಂವಿಧಾನವನ್ನು ಗಟ್ಟಿಗೊಳಿಸುವಂತಿರಬೇಕು ಎಂದು ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ಸಮಾಜದ ಎಲ್ಲ ಜನರ ಹಿತದೃಷ್ಟಿಯಿಂದ ರಚಿಸಿದ ಸಂವಿಧಾನ ಒಂದು ಮಾದರಿ ಸಂವಿಧಾನವಾಗಿದೆ. ಅಂಬೇಡ್ಕರ್ ಅವರ ಬಗ್ಗೆ ಈಗಾಗಲೇ ಸಾಕಷ್ಟು ಸಾಹಿತ್ಯ ಸೃಷ್ಟಿಯಾಗಿದೆ. ಯುಗದ ಜ್ಯೋತಿ ಅಂಬೇಡ್ಕರ್ ಗೀತೆ ರಚನೆ ಹಾಗೂ ಮೃದು ಮಧುರ ಗಾಯನದ ಮೂಲಕ ಜನರ ಗಮನ ಸೆಳೆಯುತ್ತದೆ ಎಂದು ಹೇಳಿದರು.
ಕವಿ ಆರ್.ಚೌಡರೆಡ್ಡಿ ಪನಸಮಾಕನಹಳ್ಳಿ, ಗಾಯಕ ತುಷಾರ್ ನಾಗ್, ಸಂಕಲನಕಾರ ನಿಶಾಂತ್ರೆಡ್ಡಿ, ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ವಿ.ಮುನಿಯಪ್ಪ, ಮುಖಂಡರಾದ ಕೂತ್ಸಂದ್ರ ರೆಡ್ಡಪ್ಪ, ನಾಗದೇನಹಳ್ಳಿ ಶ್ರೀನಿವಾಸ್, ನಾಗರಾಜ್, ರಘುನಾಥರೆಡ್ಡಿ, ಎನ್.ಎಸ್.ಮೂರ್ತಿ, ಲಕ್ಷ್ಮಣಬಾಬು ಇದ್ದರು.