ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಆಯಾ ಶಾಲೆಯ ಹಳೆ ವಿದ್ಯಾರ್ಥಿಗಳು ಕೈ ಜೋಡಿಸಬೇಕು : ಸಿ.ಆರ್.ಅಶೋಕ್

ಶ್ರೀನಿವಾಸಪುರ: ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಆಯಾ ಶಾಲೆಯ ಹಳೆ ವಿದ್ಯಾರ್ಥಿಗಳು ಕೈ ಜೋಡಿಸಬೇಕು. ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ವಿಷಯಕ್ಕೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಹೇಳಿದರು.
ಮಾರೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿ, ಸರ್ಕಾರಿ ಶಾಲಾ ಶಿಕ್ಷಕ ಎಸ್.ಆರ್.ಧರ್ಮೇಶ್, ಪ್ರತಿ ತಿಂಗಳೂ ತಮ್ಮ ಸಂಬಳದಲ್ಲಿ ರೂ.10 ಸಾವಿರ ತೆಗೆದಿಟ್ಟು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಗತ್ಯಗಳಿಗೆ ಬಳಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರ ಪಡೆದುಕೊಳ್ಳಬೇಕು. ಗುರು ಹಿರಿಯರನ್ನು ಗೌರವಿಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಬೇಕು. ಪ್ರಚಾರಕ್ಕಾಗಿ ಹಾತೊರೆಯದೆ, ದಾನಿ ಧರ್ಮೇಶ್ ಅವರಂತೆ ಎಲೆ ಮರೆ ಕಾಯಿಯಂತೆ ಸೇವೆ ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ಸುಲೋಚನ ಮಾತನಾಡಿ, ಶಿಕ್ಷಣ ಬದಲಾವಣೆಯ ಸಾಧನ. ಯಾವುದಾದರೂ ಹುದ್ದೆ ಪಡೆಯುವ ಉದ್ದೇಶದಿಂದ ಮಾತ್ರ ಓದಬಾರದು. ಜ್ಞಾನಾರ್ಜನೆ ಶಿಕ್ಷಣದ ಗುರಿಯಾಗಬೇಕು. ಪೋಷಕರು ಮಕ್ಕಳ ಕೈಗೆ ಮೊಬೈಲ್‍ಗೆ ಬದಲಾಗಿ ಪುಸ್ತಕ ಕೊಡಬೇಕು. ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಧರ್ಮೇಶ್ ತಾವು ದುಡಿದು ಗಳಿಸಿದ ಹಣದಿಂದ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಇಷ್ಟದ ಬಟ್ಟೆ ಕೊಡಿಸಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಕೊಡುಗೆ ಸರ್ಕಾರದ ಸೌಲಭ್ಯಕ್ಕೆ ಪೂರಕವಾಗಿದೆ. ವಿದ್ಯಾರ್ಥಿಗಳು ದಾನಿಗಳ ಕೊಡುಗೆ ಬಳಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕರಾದ ಗಿರೀಶ್ ಬಾಬು, ಪುರುಷೋತ್ತಮರೆಡ್ಡಿ, ಮುಖ್ಯ ಶಿಕ್ಷಕ ಮುನಿಶಾಮಿ, ಹಳೆ ವಿದ್ಯಾರ್ಥಿನಿ ಶುಭ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಇಷ್ಟದ ಬಟ್ಟೆ ವಿತರಿಸಲಾಯಿತು. ಅತಿಥಿಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಮುಖ್ಯ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್, ಶಿಕ್ಷಕರಾದ ಸೊಣ್ಣಪ್ಪ, ಜಯಮ್ಮ, ನಾಗಿರೆಡ್ಡಿ, ವೆಂಕಟಲಕ್ಷ್ಮಮ್ಮ, ರಾಮಕೃಷ್ಣಪ್ಪ, ರಾಮರೆಡ್ಡಿ, ನಾಗರಾಜಪ್ಪ, ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಅಂತರ ರಾಷ್ಟ್ರೀಯ ಕ್ರಿಡಾಪಟು ನಿಶಾಂತ್ ಕುಮಾರ್ ಇದ್ದರು.

.