


ವರದಿ ಮತ್ತು ಚಿತ್ರಗಳು: ಡೊಮಿನಿಕ್ ಬ್ರಗಾಂಜಾ
ಕುಂದಾಪುರ, ಜ:22: ಕುಂದಾಪುರ ವಲಯ ಮಟ್ಟದಲ್ಲಿ ದೇವಪೀಠ ಸೇವಕರ (10 ನೇ ತರಗತಿಯ ಒಳಗಿನ ಮಕ್ಕಳು) ಸಮಾವೇಶವು ತ್ರಾಸಿ ಡೋನ್ ಬೊಸ್ಕೊ ಶಾಲೆಯ ಸಭಾಭವನದಲ್ಲಿ ಜ.22 ರಂದು ಭಾನುವಾರ ಜರಗಿತು. ಇದರ ಅಧ್ಯಕ್ಷತೆಯನ್ನು ದೇವಪೀಠ ಸೇವಕರ ಸಂಯೋಜಕರಾದ ವಂ|ಧರ್ಮಗುರು ಫ್ರಾನ್ಸಿಸ್ ಕರ್ನೆಲಿಯೊ ಅಧ್ಯಕ್ಷತೆ ವಹಿಸಿದ್ದು “ಯೇಸು ಕ್ರಿಸ್ತರು ನಿಮ್ಮನ್ನು ಸೇವೆಗಾಗಿ ಕರೆದಿದ್ದಾರೆ.ಇದು ನಿಮಗೆ ದೊರಕಿದ ಭಾಗ್ಯವಾಗಿದೆ. ಹೇಗೆ ಉರಿಯುವ ಜ್ವಾಲೆಯ ಹತ್ತಿರ ಸರಿದಾಗ ಬೆಚ್ಚನೇಯ ಅನುಭವವಾಗುತಿದೇಯೊ, ಹಾಗೆ ನೀವು ಬಲಿಪೂಜೆಯ ವೇದಿಕೆಯಲ್ಲಿ ಸೇವೆ ನೀಡುತ್ತಿರುವಾಗ ಯೇಸು ಕ್ರಿಸ್ತರ ಬೆಳಕಿನ ಸ್ಪರ್ಶಾನುಭವ ನಿಮಗೆ ದೊರಕುತ್ತದೆ. ಆ ಯೇಸು ಕ್ರಿಸ್ತರ ಪ್ರೀತಿ ನಿಮ್ಮ ಜೀವನದಲ್ಲಿ ಬೆಳಗಿ ಹೊರ ಹೊಮ್ಮಲಿ. ಈ ಸಮಾವೇಶದಲ್ಲಿ ನೀವು ಸಕ್ರಿಯವಾಗಿ ಭಾಗವಹಿಸಿ, ಇಲ್ಲಿ ನಿಮಗೆ ದೊರಕುವ ವಿವಿಧ ತರಬೇತಿಯ ಲಾಭವನ್ನು ಪಡೆದುಕೊಳ್ಳಿರಿ” ಎಂದು ತಿಳಿಸಿದರು.
ವಂ|ಧರ್ಮಗುರು ರೊನಾಲ್ಡ್ ವಾಜ್ ಶಿಬಿರಾರ್ಥಿಗಳಿಗೆ ವಿವಿಧ ಆಟಗಳನ್ನು ನಡೆಸಿಕೊಟ್ಟರು. ಡೋನ್ ಬೊಸ್ಕೊ ಸಂಸ್ಥೆಯ ರೆಕ್ಟರ್ ವಂ|ಧರ್ಮಗುರು ಮ್ಯಾಕ್ಷಿಮ್ ಡಿಸೋಜಾ ದೇವಪೀಠ ಸೇವೆಯ ವಿವಿಧ ಆಯಾಮಗಳಲ್ಲಿ ತರಬೇತಿ ನೀಡಿದರು. ವಂ|ಧರ್ಮಗುರು ಜೈಸನ್ ಪಿಂಟೊ, ಎಸ್.ಡಿ.ಬಿ. ಮಧ್ಯಾನ್ಹದ ಅವಧಿಯಲ್ಲಿ ಯಾಜಕರ ದೀಕ್ಷೆ ಮತ್ತು ಜೀವನದಲ್ಲಿ ದೇವರ ಕರೆಯ ಬಗ್ಗೆ, ವಿಶೇಷ ತರಬೇತಿಯನ್ನು ನೀಡಿದರು.
ಸಮಾವೇಶದ ನಡುವೆ ವಂ|ಧರ್ಮಗುರು ಎಡ್ವಿನ್ ಡಿಸೋಜಾ ದಿವ್ಯ ಬಲಿದಾನವನ್ನು ಅರ್ಪಿಸಿದರು. ಉಪ ಪ್ರಾಂಶುಪಾಲರಾದ ವಂ|ಧರ್ಮಗುರು ರೊನಲ್ಡ್ ವಾಜ್, ವಂ|ಧರ್ಮಗುರು ರೋಶನ್ ಡಿಸೋಜಾ ಉಪಸ್ಥಿತರಿದ್ದರು. ವಂ|ಧರ್ಮಗುರು ಮ್ಯಾಕ್ಷಿಮ್ ಡಿಸೋಜಾ ಸ್ವಾಗತಿಸಿದರು. ಜೊಯೆಲ್ ನಜರೇತ್ ನಿರೂಪಿಸಿದರು. ಪ್ರಜ್ವಲ್ ಡಿಸೋಜಾ ವಂದಿಸಿದರು.











