ಮಲಯಾಳ ಸಾಹಿತ್ಯದಲ್ಲಿ ಬಗೆ ಬಗೆಯ ಪ್ರಯೋಗಗಳು ನಡೆಯುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲೊಂದು ವಿಮರ್ಶಾ ಕೃತಿಯಿದೆ. ಇದರ ಮೂಲ ಲೇಖಕರಾದ ಇ.ಎಂ. ಅಶ್ರಫ್ ಇದನ್ನು ಒಂದು ಸಾಹಿತ್ಯ ಸಂಚಾರ ಎಂದಿದ್ದಾರೆ. ಮಲಯಾಳದ ಪ್ರಸಿದ್ದ ಕತೆ, ಕಾದಂಬರಿಕಾರ, ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತರಾದ ಎಂ. ಮುಕುಂದನ್ ಅವರ ಜೊತೆ ಅಶ್ರಫ್ ದೆಹಲಿಯಲ್ಲಿದ್ದುಕೊಂಡು ಒಂದು ಸಾಹಿತ್ಯ ಸಂಚಾರ ನಡೆಸುತ್ತಾರೆ. ಇದು ದೆಹಲಿಯಲ್ಲಿದ್ದ ‘ಸಾಹಿತಿ’ಯ ಒಡನೆ ನಡೆಸಿದ ಸಂಚಾರವಾಗಿದ್ದರೂ ಅವರಿಬ್ಬರ ನಡುವಿನ ಮುಖ್ಯ ವಿಚಾರ ‘ಸಾಹಿತ್ಯ’ವೇ ಆಗಿತ್ತು. ಆದ್ದರಿಂದಲೇ ಇದೊಂದು ‘ಸಾಹಿತ್ಯ ಸಂಚಾರ’….
ಮುಕುಂದನ್ ಮಲಯಾಳಂ ಕಾದಂಬರಿಕಾರರ ನಡುವಿನ ಪ್ರಕಾಂಡ ಬರಹಗಾರ. ನೈಜ ಹಾಗೂ ಕಲ್ಪನೆಯ ವಿಚಾರಗಳನ್ನು ಏಕಕಾಲಕ್ಕೆ ತಂದು ತೋರಿಸಬಲ್ಲವರು. ಅಶ್ರಫ್ ಹೇಳುವಂತೆ ‘ಸಾಮಾನ್ಯ ವಸ್ತುವನ್ನು ಅಸಾಮಾನ್ಯ ಎನ್ನುವಂತೆ ಚಿತ್ರಿಸುವ ಮಾಂತ್ರಿಕ ಶಕ್ತಿ ಅವರಲ್ಲಿತ್ತು. ‘ಅರ್ಧಸತ್ಯವನ್ನು ಪೂರ್ಣಸತ್ಯವನ್ನಾಗಿಸುವ ಬರವಣಿಗೆ ಅವರದಾಗಿತ್ತು ಎಂದು ಅಶ್ರಫ್ ಒಪ್ಪಿಕೊಳ್ಳುತ್ತಾರೆ. ಈ ಮಾತನ್ನು ಸಮರ್ಥಿಸಲೋ ಎಂಬಂತೆ ಮುಕುಂದನ್, ‘ತಾನು ಕುಡಿಯದ್ದನ್ನು ತನ್ನ ಪಾತ್ರಗಳು ಕುಡಿಯುವುದರ ಮೂಲಕ, ತಾನು ಬದುಕಿದ್ದನ್ನು ತನ್ನ ಪಾತ್ರಗಳು ಬದುಕುವುದರ ಮೂಲಕ’ ತೋರಿಸಿಕೊಡುತ್ತಾರೆ, ಎಂದೂ ಆಶ್ರಫ್ ಹೇಳುತ್ತಾರೆ. ಕಾದಂಬರಿಯನ್ನು ಓದುವಾತನಿಗೆ ಕಾದಂಬರಿಕಾರ ಹೇಗೆ ಬದುಕುತ್ತಾನೆ ಎಂಬುದೆಲ್ಲ ಮುಖ್ಯವಲ್ಲ, ಮುಕುಂದನ್ರ ಬರವಣಿಗೆಯೇ ಹಾಗೆ: ಲೈಂಗಿಕತೆಯನ್ನು ಲೈಂಗಿಕತೆಯೆಂದು ಬಿಂಬಿತವಾಗದಂತೆ ಅವರು ಬರೆಯಬಲ್ಲರು. ‘ಅವರು ರತಿಚಿತ್ರಣಗಳ ಮೂಲಕ ಸಾಹಿತ್ಯವನ್ನು ಉದ್ದೀಪನಗೊಳಿಸುತ್ತಿದ್ದರು’ ಎಂಬ ಅಶ್ರಫರ ಮಾತು ಬಹಳ ಮುಖ್ಯವಾದುದು. ಸಾಹಿತ್ಯ ಅಕ್ಷರಗಳಲ್ಲಷ್ಟೇ ಹುದುಗಿದ್ದರೆ ಅದು ಮೇಲ್ನೋಟದ ಬರಹವಾಗಿ ಬಿಡುತ್ತದೆ. ಅದನ್ನು ಮೀರಿದ ಅನುಭವಕ್ಕೆ ಓದುಗನನ್ನು ಕೊಂಡೊಯ್ಯಬೇಕು. ಪ್ರಸ್ತುತ ಕಾದಂಬರಿಕಾರರಂತೆ…..
ಅಶ್ರಫರ ಈ ಮರುಪಯಣ ಕೇವಲ ಸ್ಥಳವೀಕ್ಷಣೆಯ ಉದ್ದೇಶದ್ದಲ್ಲ. ಕಾದಂಬರಿಯೊಂದು ಶೂನ್ಯದಿಂದ ಹುಟ್ಟಿಕೊಳ್ಳುವುದಿಲ್ಲ. ಅದು ಅನುಭವಜನ್ಯ ಅದಕ್ಕೆ ಜಂಗಮ ಮನಸ್ಸಿನಂತೆ ಸ್ಥಾವರಗಳೂ ಎಷ್ಟು ಮುಖ್ಯವಾಗುತ್ತವೆ ಎಂಬುದನ್ನು ಕಂಡುಡುಕೊಳ್ಳುವುದಕ್ಕೂ ಈ ಮರುಪಯಣ ಸಹಕಾರಿ. ಈ ಸಾಹಿತ್ಯ ಸಂಚಾರ ಒಂದು ಚರಿತ್ರೆಯನ್ನು ಮರಳಿಕಟ್ಟುವ ಪ್ರಯತ್ನಕೂಡ.
ಡಾ. ನಾ. ದಾಮೋದರ ಶೆಟ್ಟಿ ಬೆಂಗಳೂರು, ಇವರು ಕೃತಿಗೆ ಬರೆದ ಮುಮ್ಮಾತುಗಳ ಕೆಲವು ಸಾಲುಗಳು.