ಬಾಲ ಕಾರ್ಮಿಕ ಪದ್ಧತಿ ನಿವಾರಣೆಗೆ ಸಮಾಜದ ಎಲ್ಲ ವರ್ಗದ ಜನರೂ ಸಹಕರಿಸಬೇಕು : ಡಾ. ವೈ.ವಿ.ವೆಂಕಟಾಚಲ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಬಾಲ ಕಾರ್ಮಿಕ ಪದ್ಧತಿ ನಿವಾರಣೆಗೆ ಸಮಾಜದ ಎಲ್ಲ ವರ್ಗದ ಜನರೂ ಸಹಕರಿಸಬೇಕು ಎಂದು ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ಪಟ್ಟಣದ ಮಾರುತಿ ಸಭಾ ಭವನದಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಹಾಗೂ ವೆಂಕಟೇಶ್ವರ ಗ್ರಾಮೀನ ಆರೋಗ್ಯ ಶಿಕ್ಷಣೆ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ, ಉತ್ತಮ ಶಿಕ್ಷಕರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿ ಕಾನೂನು ಬಾಹಿರ ಎಂದು ತಿಳಿದಿರುವ ಶ್ರೀಮಂತರು ಮತ್ತು ಕಾರ್ಖಾನೆ ಮಾಲೀಕರು ಮಕ್ಕಳಿಂದ ಗುಟ್ಟಾಗಿ ದುಡಿಸಿಕೊಳ್ಳುತ್ತಿದ್ದಾರೆ. ಕಾನೂನಿಂದ ಪಾರಾಗಲು ಮಕ್ಕಳ ಜನ್ಮ ದಿನಾಂಕ ಬದಲಾವಣೆ ಮಾಡಲು ಮುದಾಗಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಹೇಳಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವೃದ್ಧರು ನಿರ್ಲಕ್ಷ್ಯಕ್ಕೆ ಒಳಗಾಗಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಅವರ ಕ್ಷೇಮ ಪಾಲನೆಗಾಗಿ ಅಂಗನವಾಡಿ ರೀತಿಯಲ್ಲಿ ಗ್ರಾಮ ಪಂಚಾಯಿತಿಗೆ ಒಂದರಂತೆ ಹಿರಿಯರವಾಡಿ ತೆರೆಯಬೇಕಾದ ಅಗತ್ಯವಿದೆ. ಉತ್ತಮ ಶಿಕ್ಷಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅವರಿಗೆ ಗೌರವಾರ್ಪಣೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ರಾಷ್ಟ್ರದಲ್ಲಿ 20 ವರ್ಷದ ವರೆಗೆ ಲಿಂಗ ಭೇದವಿಲ್ಲದೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಬೇಕು. ಯಾವುದೇ ತಾರತಮ್ಯಕ್ಕೆ ಅವಕಾಶ ನೀಡದೆ ಎಲ್ಲರಿಗೂ ಸಮಾನ ಶಿಕ್ಷಣ ನೀಡಬೇಕು. ಮಾದರಿ ಶಿಕ್ಷಣ ನೀಡುವುದಕ್ಕೆ ದೆಹಲಿ ಸರ್ಕಾರ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಎಎಪಿ ಅಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ಉತ್ತಮ ಆಡಳಿತಕ್ಕೆ ಎಎಪಿ ಆಶಾಕಿರಣವಾಗಿದೆ. ದೆಹಲಿ ಹಾಗೂ ಪಂಜಾಬಿನಲ್ಲಿ ಅಧಿಕಾರದಲ್ಲಿರುವ ಎಎಪಿ ಸರ್ಕಾರಗಳು ಮಾದರಿಯಾಗಿ ಆಡಳಿತ ನಡೆಸುತ್ತಿವೆ. ಪಕ್ಷದ ಸಮಾಜ ಮುಖಿ ಧೋರಣೆ, ಸಮಾಜದ ಎಲ್ಲ ವರ್ಗದ ಜನರಿಗೆ ಭರವಸೆಯ ಬೆಳಕಾಗಿದೆ. ಎಲ್ಲ ವಯೋಮಾನದ ವ್ಯಕ್ತಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ ಎಂದು ಹೇಳಿದರು.
ಮೂಲ ಸೌಕರ್ಯ, ಶಿಕ್ಷಣ ಹಾಗೂ ಆರೋಗ್ಯ ರಕ್ಷಣೆ ಪ್ರಜೆಯ ಹಕ್ಕು. ಎಎಪಿ ಎಲ್ಲರಿಗೂ ಈ ಸೌಲಭ್ಯ ಒದಗಿಸಲು ಬದ್ಧವಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ಎಎಪಿ ಸರ್ಕಾರದ ಹೆಗ್ಗಳಿಕೆಯಾಗಿದೆ. ಹಾಗಾಗಿ ರಾಜ್ಯದ ಮತದಾರರು ಎಲ್ಲ ಚುನಾವಣೆಗಳಲ್ಲೂ ಎಎಪಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಚಿತ್ರ ನಟ ಮುಖ್ಯ ಮಂತ್ರಿ ಚಂದ್ರು ಮಾತನಾಡಿ, ಎಎಪಿ ರಾಜಕೀಯ ಕ್ಷೇತ್ರದಲ್ಲಿ ಒಂದು ಪರ್ಯಾಯ ಶಕ್ತಿಯಾಗಿ ಬೆಳೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಯಿಂದ ಜನರು ಬೇಸತ್ತಿದ್ದಾರೆ. ಬಿಜೆಪಿ ಸರ್ಕಾರ ನಾಡು ನುಡಿಗೆ ಅಪಚಾರವಾಗುವಂತೆ ನಡೆದುಕೊಳ್ಳುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎಂದು ಹೇಳಿದರು.
ಮತದಾರರು ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಜನವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು, ಎಎಪಿ ಸರ್ಕಾರವನ್ನು ಪ್ರತಿಷ್ಠಾಪಿಸಬೇಕು. ಹಿಂದಿ ಹೇರಿಕೆಯನ್ನು ಸಾಂಘಿಕವಾಗಿ ತಡೆಯಬೇಕು ಎಂದು ಹೇಳಿದರು.
ಎಎಪಿ ರಾಜ್ಯ ಕಾರ್ಯದರ್ಶಿ ಡಾ. ವೆಂಕಟೇಶ್, ವಲಯ ಸಂಯೋಜಕ ರವಿಶಂಕರ್, ಸಿಬಿಐಟಿ ಕಾರ್ಯದರ್ಶಿ ಕೃಷ್ಣಾರೆಡ್ಡಿ, ಜಿಲ್ಲಾ ಕಾರ್ಮಿಕರ ಸಂಘದ ಉಪಾಧ್ಯಕ್ಷೆ ಜಿ.ಈಶ್ವರಮ್ಮ, ಮಕ್ಕಳ ತಜ್ಞ ಡಾ. ಬೀರೇಗೌಡ, ಎಎಪಿ ಜಿಲ್ಲಾಧ್ಯಕ್ಷ ಸುರೇಶ್ ಬಾಲಕೃಷ್ಣ, ತಾಲ್ಲೂಕು ಮುಖಂಡ ಬಾಬುರೆಡ್ಡಿ, ಮುಖಂಡರಾದ ಫಸಲ್ ಮಹಮೂದ್, ಕೆ.ಎಸ್.ನಾರಾಯಣಸ್ವಾಮಿ, ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಕಾರ್ಯದರ್ಶಿ ನಾರಾಯಣಸ್ವಾಮಿ, ಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು, ರಾಮಚಂದ್ರಪ್ಪ, ಸುಧಾಕರ್ ಇದ್ದರು.