

ಉಡುಪಿ: ಎಲ್ಲಾ ಧರ್ಮಗಳು ಭೋಧಿಸುವುದು ಸತ್ಯ ವಾಕ್ಯವನ್ನು ಅದನ್ನು ಅರಿತು ನವ ಸಮಾಜದ ರಚನೆಗೆ ಅಣಿಯಾಗಬೇಕಾದ ಅವಶ್ಯಕತೆ ಇದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಭಾನುವಾರ ತೊಟ್ಟಂ ಸಂತ ಅನ್ನಮ್ಮ ದೇವಾಲಯಕ್ಕೆ ತಮ್ಮ ಅಧಿಕೃತ ಭೇಟಿಯ ಸಂದರ್ಭದಲ್ಲಿ ಚರ್ಚಿನ ಸಭಾಂಗಣದಲ್ಲಿ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಇದರ ಪದಾಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಮಧ್ಯೆ ಇರುವ ಗೋಡೆಗಳನ್ನು ಒಡೆದು ಸೇತುವೆಗಳನ್ನು ಕಟ್ಟುವ ಮೂಲಕ ನಾವೆಲ್ಲರೂ ಒಂದೇ ತಾಯಿಯ ಮಕ್ಕಳ ಎಂಬಂತೆ ಬದುಕಿದಾಗ ಭಾರತ ದೇಶವು ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದನ್ನು ನಮ್ಮ ಕ್ರಿಯೆಯಲ್ಲಿ ತೋರಿಸಿದಂತಾಗುತ್ತದೆ. ಒಂದು ತೋಟದಲ್ಲಿ ಬೇರೆ ಬೇರೆ ಬಣ್ಣದ ಹೂಗಳಿದ್ದಾಗ ಅದರ ಅಂದ ಹೆಚ್ಚುತ್ತದೆ ಅದರಂತೆ ಸಮಾಜದಲ್ಲಿ ಬೇರೆ ಬೇರೆ ಧರ್ಮದವರೊಂದಿಗೆ ಅರಿತು ಬಾಳಿದಾಗ ನಾವೆಲ್ಲರೂ ಕೂಡ ಪರಸ್ಪರ ಸಹೋದರ ಸಹೋದರಿಯರಂತೆ ಬದುಕುವುದು ಕಷ್ಟವಾಗಲಾರದು ಎಂದರು.
ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಇದರ ಅಧ್ಯಕ್ಷರಾದ ರಮೇಶ್ ತಿಂಗಳಾಯ ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಮಾತನಾಡಿ ಸಮಿತಿ ಆರಂಭವಾಗಿ ಕೇವಲ ನಾಲ್ಕೈದು ತಿಂಗಳುಗಳು ಕಳೆದಿದ್ದು ಇಷ್ಟರಲ್ಲೆ ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ಎಲ್ಲಾ ವರ್ಗದ ಜನರಿಗೆ ಹತ್ತಿರವಾಗಲು ಸಾಧ್ಯವಾಗಿದೆ. ರಕ್ತದಾನದಂತಹ ಉತ್ತಮ ಕಾರ್ಯಕ್ರಮಗಳು ಈಗಾಗಲೇ ನಡೆದಿದ್ದು ತೊಟ್ಟಂ ಪರಿಸರದಲ್ಲಿ ಪರಸ್ಪರ ಎಲ್ಲಾ ಧರ್ಮಗಳ ಜನರು ಸೌಹಾರ್ದತೆಯಿಂದ ಬದುಕುವತ್ತ ಸಮಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.
ತೊಟ್ಟಂ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಮಾತನಾಡಿ ನಮ್ಮೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಕಾರ್ಯಾಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ಇದಕ್ಕಾಗಿ ವಿವಿಧ ಯೋಜನೆಗಳನ್ನು ಹಾಕಲಾಗುವುದು ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಶರತ್ ಶೆಟ್ಟಿ, ರಾಮಪ್ಪ ಸಾಲಿಯಾನ್, ಗಣೇಶ್ ನೆರ್ಗೀ, ಶಂಕರ್ ಅವರು ಮುಂದಿನ ದಿನಗಳಲ್ಲಿ ಸಮಿತಿಯನ್ನು ಯಾವ ರೀತಿಯಲ್ಲಿ ಮುನ್ನಡೆಸಬಹುದು ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಮಲ್ಪೆ ಎಬನೇಜರ್ ಚರ್ಚಿನ ವಂ|ಎಡ್ವಿನ್ ಜೊಸೇಫ್, ತೊಟ್ಟಂ ಸಂತ ಅನ್ನಮ್ಮ ಕಾನ್ವೆಂಟ್ ಮುಖ್ಯಸ್ಥರಾದ ಸಿಸ್ಟರ್ ಪ್ರೆಸಿಲ್ಲಾ, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಸಹಕಾರ್ಯದರ್ಶಿ ಶೋಭಾ, ಬಿ. ಸಿರಾಜ್ ಅಹಮದ್, ಎಂ. ಶಬ್ಬೀರ್ ಸಾಹೇಬ್ ಮಲ್ಪೆ ಉಪಸ್ಥಿತರಿದ್ದರು.













