ಕೋಲಾರ, ಮೇ 04 ಜೂ.3ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಒಟ್ಟು 4142 ಮಂದಿ ಶಿಕ್ಷಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಇಂದು ಮನ್ನಣೆ ಪಡೆದ ರಾಜಕೀಯ ಪಕ್ಷಗಳ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಜೂ.3ರಂದು ಮತದಾನ ಹಾಗೂ ಜೂ.6ರಂದು ಮತಗಳ ಏಣಿಕೆ ನಡೆಯಲಿದೆ ಎಂದು ಹೇಳಿದರು.
ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸುತ್ತಿರುವುದರಿಂದ ಚುನಾವಣಾ ಆಯೋಗ ನಿಗಧಿಪಡಿಸಿರುವ ನೇರಳೆ ಬಣ್ಣದ ಪೆನ್ ಮೂಲಕವೇ ಯಾವ ಅಭ್ಯರ್ಥಿಗೆ ಎಷ್ಟನೇ ಪ್ರಾಶಸ್ತ್ಯದ ಮತ ಚಲಾಯಿಸುತ್ತಾರೆ ಎಂಬುದನ್ನು ಅಂಕಿಯಲ್ಲಿ ಬರೆಯಬೇಕು. ಇಲ್ಲವಾದರೆ, ಅದು ತಿರಸ್ಕøತಗೊಳ್ಳುವ ಸಾಧ್ಯತೆಯಿರುತ್ತದೆ. ಶಾಹಿ ಯನ್ನು ಎಡಗೈನ ಮಧ್ಯದ ಬೆರಳಿಗೆ ಹಚ್ಚಲಾಗುತ್ತದೆ ಎಂದರು.
ಬೆಳಗ್ಗೆ 8 ರಿಂದ ಸಂಜೆ 4 ತನಕ ಮತದಾನ: ಆಗ್ನೇಯ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಯ ಮತದಾನ ಈವರೆಗೆ ಬೆಳಗ್ಗೆ 7ರಿಂದ ಸಂಜೆ 5ರ ತನಕ ನಡೆಯುತ್ತಿತ್ತು. ಈಗ ಚುನಾವಣಾ ಆಯೋಗ ಸಮಯ ಬದಲಾಯಿಸಿದ್ದು, ಜೂ.3ರ ಬೆಳಗ್ಗೆ 8 ರಿಂದ ಸಂಜೆ 4ರ ತನಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಕಡ್ಡಾಯವಾಗಿ ಮತ ಚಲಾಯಿಸಿ: ಈ ಚುನಾವಣೆ ಶಿಕ್ಷಕರ ಕ್ಷೇತ್ರಕ್ಕೆ ಮಾತ್ರ ಸಂಬಂಧಪಟ್ಟದ್ದಾಗಿದ್ದು, ಶಿಕ್ಷಕರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಮತದಾನ ಕೇಂದ್ರಕ್ಕೆ ಕಡ್ಡಾಯವಾಗಿ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು. ಬ್ಯಾಲೆಟ್ ಪೇಪರ್ ಮೇಲೆ ಚುನಾವಣಾಧಿಕಾರಿ ಸಹಿ ಇದೆಯೇ ಇಲ್ಲವೇ ಎಂಬುದರ ಬಗ್ಗೆ ಗಮನಿಸಬೇಕು. ನಂತರ ಗುರುತು ಹಾಕಿ ನಾಲ್ಕು ಬಾರಿ ಮಡಚಿ ಮತ ಪೆಟ್ಟಿಗೆಗೆ ಹಾಕಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 4142 ಮಂದಿ ಶಿಕ್ಷಕ ಮತದಾರರು: ಜಿಲ್ಲೆಯಲ್ಲಿ ಒಟ್ಟು 4142 ಮತದಾರರಿದ್ದು, ಈ ಪೈಕಿ 2128 ಮಂದಿ ಪುರುಷರು ಹಾಗೂ 2014 ಮಹಿಳಾ ಮತದಾರರಿದ್ದಾರೆ. ಕೋಲಾರದಲ್ಲಿ 1437, ಮಾಲೂರು 458, ಬಂಗಾರಪೇಟೆ 400, ಕೆಜಿಎಫ್ 609, ಮುಳಬಾಗಿಲು 575, ಶ್ರೀನಿವಾಸಪುರ 663 ಮತದಾರರು ಇದ್ದಾರೆ ಎಂದು ತಿಳಿಸಿದರು.
ಮತದಾನದ ಮಾರನೇ ದಿನದ ನಂತರ ಸೂಕ್ತ ಭದ್ರತೆ ಮೂಲಕ ಬೆಂಗಳೂರಿನ ಆರ್.ಸಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿಗೆ ಮತಪಟ್ಟೆಗೆಗಳನ್ನು ಸಾಗಿಸಲಾಗುವುದು. ಜೂ.6ರಂದು ಮತ ಏಣಿಕೆ ಮುಗಿದ ಮೇಲೆ ಜೂ.12ಕ್ಕೆ ನೀತಿ ಸಂಹಿತೆ ಕೊನೆಗೊಳ್ಳಲಿದೆ ಎಂದರು.
ಯಾವುದೇ ಪ್ರಕರಣ ದಾಖಲಾಗಿಲ್ಲ: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳನ್ನು ಜೂ.2ರ ಸಂಜೆ 5ರಿಂದ ಜೂ.3ರ ಸಂಜೆ 6ತನಕ ಮುಚ್ಚಲಾಗುವುದು. ಜೂ.1ಕ್ಕೆ ಬಹಿರಂಗ ಪ್ರಚಾರ ಮುಗಿಯಲಿದ್ದು, ಮನೆಮನೆಗೆ ತೆರಳಿ ಮತಯಾಚಿಸಬಹುದು. ಇದುವರೆಗೂ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿಲ್ಲ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಒಟ್ಟು 7 ಮತ ಕೇಂದ್ರಗಳನ್ನು ಸ್ಥಾಪಿಸಿದ್ದು, ಶ್ರೀನಿವಾಸಪುರ, ಕೋಲಾರ, ಮುಳಬಾಗಿಲು, ಮಾಲೂರು, ಬಂಗಾರಪೇಟೆ ತಾಲ್ಲೂಕುಗಳಲ್ಲಿ ಆಯಾ ತಾಲ್ಲೂಕು ಕಚೇರಿಯಲ್ಲಿ ಹಾಗೂ ಕೆಜಿಎಫ್ನಲ್ಲಿ ನಗರಸಭೆ ಕಚೇರಿಯಲ್ಲಿ ತಲಾ ಒಂದು ಹಾಗೂ ಕೋಲಾರ ತಾಲ್ಲೂಕು ಕಚೇರಿಯಲ್ಲಿ ಒಂದು ಆಕ್ಸಿಲರಿ ಮತ ಕೇಂದ್ರ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮೂರು ದಿನ ಅವಕಾಶ :
ಕೋಲಾರ ಜಿಲ್ಲೆಯಲ್ಲಿ ನಿರಂತರ ಪರಿಷ್ಕರಣೆಗೊಳಪಟ್ಟ ಮತದಾರರ ಪಟ್ಟಿಯಲ್ಲಿ 30ನೇ ಡಿಸೆಂಬರ್ 2023ರ ವರೆಗೆ ಒಟ್ಟು 4142 ಅರ್ಹ ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿದ್ದು ಮೇ 3ರಿಂದ 6ರ ಸಂಜೆ 5.30ರ ವರೆಗೆ ಅರ್ಹ ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹತೆ ಹೊಂದಿರುವ ಶಿಕ್ಷಕರು ಆಯಾ ತಾಲ್ಲೂಕು ಕಚೇರಿಗಳಲ್ಲಿ ನೋಂದಾಯಿಸಬಹುದಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಉಪವಿಭಗಾಧಿಕಾರಿ ವೆಂಕಟಲಕ್ಷ್ಮಿ, ಚುನಾವಣೆ ತಹಸೀಲ್ದಾರ್ ಶರೀನ್ ತಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.