ಶ್ರೀನಿವಾಸಪುರ: ಪೌರಕಾರ್ಮಿಕರು ನಿಜವಾದ ಕ್ಷೇಮ ಪಾಲಕರು. ಪೌರಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ತಮ್ಮ ನಿಸ್ವಾರ್ಥ ಸೇವೆ ಮೂಲಕ ನಾಗರಿಕರ ಪ್ರೀತಿ ಹಾಗೂ ಗೌರಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಪಟ್ಟಣದ ನಾಗರಿಕರಿಗೆ ನೀರು ಹಂಚಿಕೆ ಹಾಗೂ ಸ್ವಚ್ಛ ಪರಿಸರ ನಿರ್ಮಾಣ ಮಾಡುವುದರದ ಮೂಲಕ ನಾಗರಿಕರ ಆರೋಗ್ಯ ರಕ್ಷಣೆ ಮಾಡುವ ಪೌರಕಾರ್ಮಿಕರ ಬಗ್ಗೆ ಲಘುವಾಗಿ ಮಾತನಾಡಬಾರದು. ಅವರು ನಿರ್ವಹಿಸುವ ಕೆಲಸ ಯಾವುದೇ ದೊಡ್ಡ ಕಾರ್ಯಕ್ಕಿಂತ ಕಡಿಮೆಯದಲ್ಲ. ಅವರು ವೈಯಕ್ತಿಕ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ರೂ.25 ಕೋಟಿ ವೆಚ್ಚದಲ್ಲಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲಾಗುವುದು. ಪಟ್ಟಣದ ಹೊರವಲಯದಲ್ಲಿನ ಅಮಾನಿ ಕೆರೆ ಅಭಿವೃದ್ಧಿ ಪಡಿಸಿ, ಬೋಟಿಂಗ್ ಸೌಲಭ್ಯ ಕಲ್ಪಿಸಲಾಗುವುದು. ಅದಕ್ಕೆ ಪೂರಕವಾಗಿ ಬೇರೆ ಕೆರೆಗಳಿಂದ ಅಮಾನಿ ಕೆರೆಗೆ ಮಳೆ ನೀರು ಹರಿಸುವ ಕಾಮಗಾರಿ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಕೆ ಮಾಡಲು ಹಾಗೂ ಚರಂಡಿ ಸ್ವಚ್ಛತೆಗೆ ಪುರಸಭೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ವೈ.ಎನ್.ಸತ್ಯನಾರಾಯಣ ಮಾತನಾಡಿ, ಪೌರಕಾರ್ಮಿಕರು ಕಾರ್ಯನಿರ್ವಹಿಸುವಾಗ ತಪ್ಪದೆ ಸುರಕ್ಷತಾ ಕ್ರಮ ಅನುಸರಿಸಬೇಕು. ಪುರಸಭೆ ವತಿಯಿಂದ ನೀಡಲಾಗಿರುವ ಸುರಕ್ಷತಾ ಸಾಧನ ಧರಿಸಿ ಕಾರ್ಯನಿರ್ವಹಿಸಬೇಕು. ನಿಯಮಾನುಸಾರ ಪುರಸಭೆ ವತಿಯಿಂದ ಲಭ್ಯವಿರುವ ಎಲ್ಲ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಪಟ್ಟಣದಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ ನಿಷೇಧಿಸಲಾಗಿದೆ. ಪುರಸಭೆ ಸಿಬ್ಬಂದಿ ಕೈಗೊಂಡ ಕಾರ್ಯಾಚರಣೆಯಿಂದಾಗಿ ಶೇ.60 ರಷ್ಟು ಪ್ಲಾಸ್ಟಿಕ್ ಬಳಕೆ ನಿಲ್ಲಿಸಲಾಗಿದೆ. ಪ್ಲಾಸ್ಟಿಕ್ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು. ಬಟ್ಟೆ ಬ್ಯಾಗ್ ಬಳಸಬೇಕು. ಅನಾರೋಗ್ಯಕರ ಪರಿಸರ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು. ತ್ಯಾಜ್ಯ ವಸ್ತು ನಿರ್ವಹಣೆಗೆ ಸಹಕರಿಸಬೇಕು ಎಂದು ಹೇಳಿದರು.
ಪುರಸಭೆ ವ್ಯವಸ್ಥಾಪಕ ನವೀನ್ ಚಂದ್ರ ಮಾತನಾಡಿ, ಪೌರಕಾರ್ಮಿಕರು ವೈದ್ಯರಿಗೆ ಸಮಾನವಾಗಿ ನಾಗರಿಕರ ಆರೋಗ್ಯ ರಕ್ಷಣೆ ಮಾಡುತ್ತಿದ್ದಾರೆ. ಪಟ್ಟಣದ 35 ಸಾವಿರ ನಾಗರಿಕರ ಆರೋಗ್ಯದ ಹೊಣೆ ಹೊತ್ತಿದ್ದಾರೆ. ಅವರ ಸೇವೆ ಪರಿಗಣಿಸಿ ಅಭಿನಂದಿಸವ ಉದ್ದೇಶದಿಂದ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ಪೌರಕಾರ್ಮಿಕರ ಕ್ರೀಡಾ ಕೂಟದಲ್ಲಿ ವಿಜೇತರಾಗಿದ್ದ ಕ್ರೀಡಾಪಟುಗಳಿಗೆ ಪ್ರಮಾಣ ಪತ್ರ ಹಾಗೂ ಪಾರಿತೋಷಕ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ. ಪುರಸಭೆ ಮಾಜಿ ಉಪಾಧ್ಯಕ್ಷೆ ಆಯಿಷಾ ನಯಾಜ್, ಪುರಸಭೆ ಪರಿಸರ ಅಭಿಯಂತರ ಕೆ.ಎಸ್.ಲಕ್ಷ್ಮೀಶ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ನಿರೀಕ್ಷಕ ಎಂ.ಶಂಕರ್, ಎಂಜಿನಿಯರ್ ಶ್ರೀನಿವಾಸ್, ವೇದಾಂತ್ ಶಾಸ್ತ್ರಿ, ಸೀತಾರಾಮರೆಡ್ಡಿ, ಸುರೇಶ್, ಸಂತೋಷ್, ಶಿವಪ್ರಸಾದ್, ಗೌತಮ್, ಶ್ರೀನಾಥ್, ವಿ.ಶ್ರೀನಿವಾಸ್, ಚೆಂದು. ಶಾರದ, ರೂಪ, ಭಾಗ್ಯಮ್ಮ, ಶಾಂತಮ್ಮ, ನೇತ್ರಾ, ಬಾಲಕೃಷ್ಣ ಇದ್ದರು.