ಅಕ್ಷರ ದಾಸೋಹ ಯೋಜನೆ ನೌಕರರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕು-ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸುಬ್ರಮಣಿ

ಶ್ರೀನಿವಾಸಪುರ: ಅಕ್ಷರ ದಾಸೋಹ ಯೋಜನೆ ನೌಕರರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕು. ಅಡುಗೆ ತಯಾರಿಸುವಾಗ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸುಬ್ರಮಣಿ ಹೇಳಿದರು.
ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಅಕ್ಷರ ದಾಸೋಹ ನೌಕರರಿಗೆ ಬಟ್ಟೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೀಗೆಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಆರ್.ಧರ್ಮೇಶ್ ಸುಗಟೂರು ಕ್ಲಸ್ಟರ್‍ನ 40 ಮಂದಿ ನೌಕರರಿಗೆ ಇಷ್ಟದ ಬಟ್ಟೆ ಕೊಡಿಸಿದ್ದಾರೆ. ಅವರು ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ ರೂ.10 ಸಾವಿರ ಉಳಿಸಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಶೈಕ್ಷಣಿ ಅಭಿವೃದ್ದಿಗಾಗಿ ಬಳಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ದಾನಿಗಳ ನೆರವಿನ ಅಗತ್ಯವಿದೆ. ಅದು ಸರ್ಕಾರ ನೀಡುತ್ತಿರುವ ಸೌಲಭ್ಯಕ್ಕೆ ಪೂರಕವಾಗಿದೆ. ಧರ್ಮೇಶ್ ಅವರು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ನೆರವು ನೀಡುತ್ತಿರುವುದು ಸ್ತುತ್ಯಾರ್ಹವಾದುದು ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಚ್.ಸಿ.ಬೈರೇಗೌಡ ಮಾತನಾಡಿ ವಿದ್ಯಾರ್ಥಿಗಳು ದಾನಿಗಳ ನೆರವು ಪಡೆದು ಶೈಕ್ಷಣಿಕವಾಗಿ ಮುಂದೆಬರಬೇಕು. ದಾನಿಗಳು ಬಡ ಪೋಷಕರ ಹೊರೆ ಕಡಿಮೆ ಮಾಡುತ್ತಾರೆ. ದಾನಿಗಳ ನೆರವು ಪಡೆದ ಗುರಿ ತಲುಪಿದ ವಿದ್ಯಾರ್ಥಿಗಳು ದಾನ ನೀಡುವುದನ್ನು ಕಲಿಯಬೇಕು. ಕಷ್ಟದಲ್ಲಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ನೌಕರರಿಗೆ ಇಷ್ಟದ ಸೀರೆ, ತಟ್ಟೆ ಹಾಗೂ ಸಿಹಿ ವಿತರಿಸಲಾಯಿತು.
ಸಿಆರ್‍ಪಿ ವೆಂಕಟರಾಮ್, ದಾನಿ ಎಸ್.ಆರ್.ಧರ್ಮೇಶ್, ಶಿಕ್ಷಕರಾದ ಮಾರುತಿ, ಸಂಘರ್ಷ, ಶಿಕ್ಷಕಿಯರಾದ ಪದ್ಮಾವತಿ, ಅನುಷಾ, ಪದ್ಮಾವತಮ್ಮ, ಶಶಿಕಲಾ ಇದ್ದರು.