JANANUDI.COM NETWORK

ಬೆಂಗಳೂರು: ಅರಬ್ಬೀ ಸಮುದ್ರದಿಂದ ಪಶ್ಚಿಮ ಕರಾವಳಿಗೆ ತೇವಾಂಶ ತುಂಬಿದ ಗಾಳಿಯು ವೇಗವಾಗಿ ಬೀಸುತ್ತಿರುವುದು ಹಾಗೂ ಲಕ್ಷದ್ವೀಪದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಪರಿಣಾಮ ರಾಜ್ಯದಲ್ಲಿ ಮುಂದಿನ 4 ರಿಂದ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ಅರಬ್ಬೀ ಸಮುದ್ರದಿಂದ 1.5 ಕಿಮೀ ಎತ್ತರದಲ್ಲಿ ಪಶ್ಚಿಮ ಕರಾವಳಿ ಪ್ರದೇಶಕ್ಕೆ ತೇವಾಂಶ ತುಂಬಿದ ಗಾಳಿಯು ವೇಗವಾಗಿ ಬೀಸುತ್ತಿರುವ ಕಾರಣ ಕೇರಳ ಮತ್ತು ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.
ರಾಜ್ಯದಲ್ಲಿ ಮುಂದಿನ 4ರಿಂದ5 ದಿನಗಳ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ, ಕರಾವಳಿಯಲ್ಲಿ ಮೇ 19ರಂದು ರೆಡ್ ಅಲರ್ಟ್ ಘೋಷಿಸಿದ್ದು. ಮೇ 17,18 ಮತ್ತು 20, 21ರಂದು ಎಲ್ಲೋ ಅಲರ್ಟ್ ಘೋಷಿಸಿದೆ.
ಉಳಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಿದ್ದು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.
ರಾಜಧಾನಿ ಬೆಂಗಳೂರಿನಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಹಾಗೂ ಒಂದೆರಡು ವೇಳೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಬೆಂಗಳೂರು ಹವಾಮಾನ ಇಲಾಖೆಯ ಕೇಂದ್ರದ ವಿಜ್ಞಾನಿ ಎ. ಪ್ರಸಾದ್ ತಿಳಿಸಿದ್ದಾರೆ.
ಪ್ರಮುಖವಾಗಿ ನಾಲ್ಕು ಕಾರಣಗಳಿಂದ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮೊದಲನೆಯದಾಗಿ ಲಕ್ಷ ದ್ವೀಪದಲ್ಲಿ 3.6 ಕಿಮೀ ನಿಂದ 5.8 ಕಿಮೀ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿದೆ. ಎರಡನೇದಾಗಿ ತಮಿಳುನಾಡು ಕರಾವಳಿಯಲ್ಲಿ 1.5ರಿಂದ 3.1 ಕಿಮೀ ಎತ್ತರದಲ್ಲಿ ಮತ್ತೊಂದು ಸುಳಿಗಾಳಿ ಬೀಸುತ್ತಿದೆ. ಮೂರನೆಯದಾಗಿ ತೇವಾಂಶ ತುಂಬಿದ ನೈರುತ್ಯ ಮಾನ್ಸೂನ್ ಗಾಳಿಯು ಅರಬ್ಬೀ ಸಮುದ್ರದಿಂದ ಪಶ್ಚಿಮ ಕರಾವಳಿಗೆ ಸಮುದ್ರಮಟ್ಟದಿಂದ 1.5 ಕಿಮೀ ಎತ್ತರದ ವರೆಗೆ ಅತಿ ವೇಗವಾಗಿ ಬೀಸುತ್ತಿದೆ, ಅದು ಮಧ್ಯಪ್ರವೇಶದಿಂದ ತಮಿಳುನಾಡುವರೆಗೆ 900 ಮೀ. ಎತ್ತರದಲ್ಲಿ ಕರ್ನಾಟಕವನ್ನು ಹಾದು ಹೋಗಲಿದೆ. ಈ ಕಾರಣಗಳಿಂದಾಗಿ ಮಳೆಯಾಗುತ್ತಿದೆ.
ಸದ್ಯದ ಮಟ್ಟಿಗೆ ಮೇ 21ರ ವರೆಗೆ ಭಾರೀ ಮಳೆಯ ಮುನ್ಸೂಚನೆ ಇದೆ. ನಂತರ 5 ದಿನಗಳ ಕಾಲ ಬಿಡುವು ನೀಡಲಿದ್ದು, ನಂತರ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆಗಳಿವೆ.ಲಕ್ಷದ್ವೀಪದಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ 21ರ ಬಳಿಕ ಮಳೆಯ ಸಾಧ್ಯತೆಗಳನ್ನು ಮತ್ತೆ ನಿರ್ಣಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ.