ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಪತ್ರಕರ್ತರು ತಮ್ಮ ವೃತ್ತಿ ಘನತೆ ಕಾಪಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪತ್ರಕರ್ತರೆಂದು ಹೇಳಿಕೊಳ್ಳಲು ಅಂಜಿಕೆ ಪಡುವ ಪರಿಸ್ಥಿತಿ ನಿರ್ಮಾಣವಾದೀತು, ದಂಧೆ ಮಾಡುವಂತಿದ್ದರೆ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಎಚ್ಚರಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾದಿನಾಚರಣೆ,ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕೋವಿಡ್‍ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ಸಂಘದಿಂದ 10 ಸಾವಿರ ರೂ ಚೆಕ್ ವಿತರಿಸಿ ಮಾತನಾಡಿದ ಅವರು, ಕಾಡಿಸಿ,ಪೀಡಿಸುವ ಮತ್ತು ದಂಧೆ ನಡೆಸುವವರು ಈ ಕ್ಷೇತ್ರಕ್ಕೆ ಬರಬೇಡಿ ಎಂದು ತಿಳಿಸಿದರು.
ಜನ ನಮ್ಮನ್ನು ಪ್ರೀತಿ ಮಾಡುವಂತಹ ನಡವಳಿಕೆ ನಮ್ಮದಾಗಿರಬೇಕು, ಸಮಾಜದಲ್ಲಿನ ಅಸಮಾನತೆ ವಿರುದ್ದ, ಅಶಕ್ತರ ಪರವಾಗಿ ಮಾನವೀಯ ತುಡಿತ ಇರುವಂತಹವರು ಮಾತ್ರ ಪತ್ರಕರ್ತರಾಗಲು ಸಾಧ್ಯ ಎಂದರು.
ಬರವಣಿಗೆ ಇಲ್ಲದ ಅನೇಕರು ಇಂದು ಪತ್ರಿಕಾರಂಗಕ್ಕೆ ಬಂದಿದ್ದಾರೆ ಎಂದು ವಿಷಾದಿಸಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ನಮಗೆ ಗಾಂಧೀಜಿ, ಅಂಬೇಡ್ಕರ್ ಸ್ವತಃ ಪತ್ರಕರ್ತರಾಗಿ ನಮಗೆ ಆದರ್ಶವಾಗಿದ್ದಾರೆ, ಅವರಿಗೆ ಅಗೌರವ ತರುವ ಕೆಲಸ ನಮ್ಮಿಂದಾಗಬಾರದು ಎಂದರು.
ಕೋಲಾರದ ಪತ್ರಕರ್ತರ ಸಂಘ ರಾಜ್ಯಕ್ಕೆ ಮಾದರಿಯಾಗಿದೆ, ಪ್ರತಿಭಾ ಪುರಸ್ಕಾರ, ನವೀಕೃತ ಸಭಾಂಗಣ ಉದ್ಘಾಟನೆ, ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಮೂರು ಕಾರ್ಯಕ್ರಮಗಳನ್ನು ಒಂದೇ ದಿನ ಮಾಡುತ್ತಿದ್ದೀರಿ, ನಿಮಗೆ ರಾಜ್ಯ ಸಂಘದ ಪರವಾಗಿ ಅಭಿನಂದನೆ ಎಂದು ತಿಳಿಸಿದರು.
1932 ರಲ್ಲಿ ಈ ಜಿಲ್ಲೆಯವರೇ ಆದ ಡಿವಿಜಿ ಅವರುಹುಟ್ಟು ಹಾಕಿದ ಸಂಘಟನೆ ನಮ್ಮದು, ಇಂತಹ ಸಂಘಟನೆಯಲ್ಲಿ ನಾವು ವೃತ್ತಿ ಘನತೆ ಕಾಪಾಡಿಕೊಳ್ಳುವ ಅಗತ್ಯವಿದೆ, ದಂಧೆ ಮಾಡುವಂತಿದ್ದರೆ ಬೇರೆ ಕ್ಷೇತ್ರ ಆರಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಸಂಸದ ಮುನಿಸ್ವಾಮಿ, ಶಾಸಕರಾದ ಕೆ.ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಸಿ.ಆರ್.ಮನೋಹರ್, ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಎಸ್ಪಿ ಡೆಕ್ಕಾಕಿಶೋರ್‍ಬಾಬು, ಸಮಾಜಸೇವಕ ಸಿಎಂಆರ್.ಶ್ರೀನಾಥ್,ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ನಗರಸಭಾ ಸದಸ್ಯ ಬಿ.ಎಂ.ಮುಭಾರಕ್, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್,ಸಂಘದ ರಾಜ್ಯಕಾರ್ಯಕಾರಿ ಸದಸ್ಯರಾದ ಬಿ.ವಿ.ಗೋಪಿನಾಥ್,ಮಹಮದ್ ಯೂನಸ್, ಹಿರಿಯ ಪತ್ರಕರ್ತರಾದ ಎಂ.ಜಿ.ಪ್ರಭಾಕರ್, ಅನಂತರಾಮ್
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ಮತ್ತಿತರರಿದ್ದರು.