ರೈತರಿಗೆ ಕೃಷಿ ಮಾಹಿತಿ ತಲುಪಿಸುವಲ್ಲಿ ಕೃಷಿ ಪರಿಕರ ಮಾರಾಟಗಾರರು ಪ್ರಾರ್ಥಮಿಕ ಹಾಗೂ ಪ್ರಮುಖ ಮೂಲ – ಸಂಸದ ಶ್ರೀ.ಎಸ್. ಮುನಿಸ್ವಾಮಿ

ಕೃಷಿ ಪರಿಕರ ಮಾರಾಟದ ಜೊತೆಗೆ ರೈತರಿಗೆ ಕೃಷಿ ಮಾಹಿತಿ ತಲುಪಿಸುವಲ್ಲಿ ಕೃಷಿ ಪರಿಕರ ಮಾರಾಟಗಾರರು ಪ್ರಾಥಮಿಕ ಮೂಲಗಳಾಗಿದ್ದು ಮತ್ತು ಹೆಚ್ಚಿನ ಮಾರಾಟಗಾರರು ಕೃಷಿಗೆ ಸಂಬಂಧಿಸಿದಂತೆ ಮೂಲ ಶಿಕ್ಷಣವನ್ನು ಹೊಂದಿರುವುದಿಲ್ಲ. ಈ ನಿಟ್ಟಿನಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ಕೋರ್ಸ್ (ದೇಸಿ) ಅತ್ಯವಶ್ಯಕವಾಗಿದೆ ಎಂದು ಸನ್ಮಾನ್ಯ ಶ್ರೀ. ಎಸ್ ಮುನಿಸ್ವಾಮಿ ಮಾನ್ಯ ಸಂಸದರು, ಕೋಲಾರ ಲೋಕಸಭಾ ಕ್ಷೇತ್ರ, ಕೋಲಾರರವರು ಅಭಿಪ್ರಾಯಪಟ್ಟರು.

ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಟಮಕ, ಕೋಲಾರ, ಸಮೇತಿ (ದಕ್ಷಿಣ) ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಮ್ಯಾನೇಜ್ (ಹೈದರಾಬಾದ್) ಮತ್ತು ಕೃಷಿ ಇಲಾಖೆ, ಕೋಲಾರ ರವರ ಸಹಯೋಗದಲ್ಲಿ ದಿ: 24.07.2021 ರಂದು ಹಮ್ಮಿಕೊಂಡ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾದ 3ನೇ ಬ್ಯಾಚ್‍ನ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಯಲ್ಲಿ ಕೋಲಾರವೇ ಇಸ್ರೇಲ್‍ಗೆ ಮಾದರಿ. ನಾವು ಗಟ್ಟಿ ನಮ್ಮ ನೆಲವು ಗಟ್ಟಿ ಎಂಬ ನಿಲುವಿನಲ್ಲಿ ಕೋಲಾರದ ರೈತರು ಇದ್ದಾರೆ. ತರಗತಿಗಳಲ್ಲಿ ವಿಜ್ಞಾನಿಗಳು ಕೊಟ್ಟ ಜ್ಞಾನವನ್ನು ಕೃಷಿ ಪರಿಕರ ಮಾರಾಟಗಾರರು ರೈತರಿಗೂ ಸಹ ತಿಳಿಸಿ ರೈತರ ಆದಾಯ ದ್ವೀಗುಣಗೊಳ್ಳುವಂತೆ ನೋಡಿಕೊಳ್ಳಬೇಕು. ರಾಸಾಯನಿಕ ಬಳಕೆಯನ್ನು ತಗ್ಗಿಸಿ ಸಮಗ್ರ ಪದ್ಧತಿಯಿಂದ ಬೆಳೆಯನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಯಾವ ಯಾವ ಬೆಳೆಯನ್ನು ಎಲ್ಲೆಲ್ಲಿ, ಎಷ್ಟೇಷ್ಟು ಬೆಳೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ಇಲಾಖೆಗಳು ರೈತರಿಗೆ ಒದಗಿಸುವಲ್ಲಿ ಸಹಕರಿಸಬೇಕು. ಒಂದೇ ಬೆಳೆಯನ್ನು ಹೆಚ್ಚಾಗಿ ಬೆಳೆಯದೇ ವಿವಿಧ ಬೆಳೆಗಳನ್ನು ಬೆಳೆಯಲು ಸಲಹೆ ನೀಡಿದರು. ನಂತರ ಸಂಸದರಾದ ಸನ್ಮಾನ್ಯ ಶ್ರೀ. ಮುನಿಸ್ವಾಮಿರವರು ದೇಸಿ ಶಿಬಿರಾರ್ಥಿಗಳಿಗೆ ಪದವಿಧಾರಣೆ ಪ್ರಮಾಣ ಪತ್ರ ವಿತರಣೆ ಮಾಡಿದರು.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಸಮೇತಿ (ದಕ್ಷಿಣ) ರಾಜ್ಯ ಘಟಕ ಅಧಿಕಾರಿಯಾದ ಡಾ. ಜಿ. ಆರ್. ಪೆನ್ನೊಬಳಿಸ್ವಾಮಿ ಪ್ರಾಸ್ತಾವಿಕ ನುಡಿಯಲ್ಲಿ ರಾಷ್ಟ್ರೀಯ ಕೃಷಿ ವಿಸ್ತರಣೆ ನಿರ್ವಹಣಾ ಸಂಸ್ಥೆ, ಹೈದರಾಬಾದ್, ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ಸಂಬಂಧಿತ ಜ್ಞಾನ ಹೆಚ್ಚಿಸಲು ಹಲವು ವರ್ಷಗಳ ಹಿಂದೆಯೇ ಒಂದು ವರ್ಷದ ಡಿಪ್ಲೊಮಾ ಇನ್ ಅಗ್ರಿಕಲ್ಚರಲ್ ಎಕ್ಸ್‍ಟೆಂಷನ್ ಸರ್ವಿಸಸ್ ಫಾರ್ ಇನ್‍ಪುಟ್ ಡೀಲರ್ಸ್ (ಆಂಇSI) ಎಂಬ ಕೋರ್ಸ್‍ನ್ನು ಪ್ರಾರಂಭಿಸಿತು. ಇದರ ಸಕಾರಾತ್ಮಕ ಬೆಳವಣಿಗೆ ಕಂಡ ಭಾರತ ಸರ್ಕಾರದ ಕೃಷಿ ಸಚಿವಾಲಯ ಈ ಕೋರ್ಸ್‍ನ್ನು ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಅನುಷ್ಠಾನಗೊಳಿಸಲು ನಿರ್ಧರಿಸಿತು. ಪ್ರಸ್ತುತದಲ್ಲಿ ಈ ಡಿಪ್ಲೊಮಾ ಕೋರ್ಸ್ ಕೃಷಿ ಪರಿಕರ ಮಾರಾಟಗಾರರಿಗೆ ರೈತರಿಗೆ ಕೃಷಿ ಮಾಹಿತಿ ನೀಡಲು ವರದಾನವಾಗಿದೆ ಎಂದರು. ರೈತರು ಕೆಲವೊಮ್ಮೆ ಕೃಷಿಯಲ್ಲಿ ಸಮಸ್ಯೆ ಕಂಡುಬಂದಲ್ಲಿ ವಿಜ್ಞಾನಿಗಳನ್ನು ಸಂಪರ್ಕಿಸದೆ ನೇರವಾಗಿ ಕೃಷಿ ಪರಿಕರ ಮಾರಾಟಗಾರರ ಅಂಗಡಿಗೆ ಭೇಟಿಕೊಟ್ಟು ಪರಿಕರಗಳನ್ನು ಖರೀದಿಸುತ್ತಾರೆ. ಈ ನಿಟ್ಟಿನಲ್ಲಿ ಕೃಷಿ ಪರಿಕರ ಮಾರಾಟಗಾರರು ಕೃಷಿಯ ತಾಂತ್ರಿಕ ಮಾಹಿತಿಯನ್ನು ತಿಳಿದು ರೈತರಿಗೆ ಸೂಕ್ತ ಸಲಹೆಗಳನ್ನು ಒದಗಿಸಲು ದೇಸಿ ಡಿಪ್ಲೊಮಾ ಕೋರ್ಸ್‍ನ ಅವಶ್ಯಕತೆ ಹೆಚ್ಚಿರುತ್ತದೆ ಎಂದರು. ಕೋಲಾರದಲ್ಲಿ ಒಟ್ಟು 8 ಬ್ಯಾಚ್‍ಗಳು ಮುಕ್ತಾಯವಾಗಿದು,್ದ 2 ಬ್ಯಾಚ್ ಸಧ್ಯದಲ್ಲಿ ನಡೆಯುತ್ತಿವೆ. ಈ ಕೋರ್ಸನ ಸದುಪಯೋಗವನ್ನು ಒಟ್ಟು 400 ಅಭ್ಯರ್ಥಿಗಳು ಈ ಜಿಲ್ಲೆಯಲ್ಲಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳ ವಿತರಣೆಯ ನಂತರ, ಒಂದು ವರ್ಷದ ದೇಸಿ ಡಿಪ್ಲೊಮಾ ಕೋರ್ಸ್ ನಡೆದುಬಂದ ದಾರಿಯ ಬಗ್ಗೆ ಸಹಾಯಕ ಪ್ರಾಧ್ಯಾಪಕರು ಹಾಗೂ ದೇಸಿ ಕೋರ್ಸ್‍ನ ಸಂಯೋಜಕರಾದ ಡಾ. ನಾಗರಾಜ ಕೆ.ಎಸ್ ರವರು ತಿಳಿಸಿದರು. ನಂತರ ಡಿಪ್ಲೋಮಾ ಪದವಿ ಪಡೆದ ಅಭ್ಯರ್ಥಿಗಳಾದ ಶ್ರೀ ಸಿ.ಪಿ. ನಾಗರಾಜ ಮತ್ತು ಶ್ರೀ. ಮುನಿರೆಡ್ಡಿರವರು ದೇಸಿ ಕೋರ್ಸನ ಅನುಭವಗಳನ್ನು ಹಂಚಿಕೊಂಡರು ಹಾಗೂ ಎಲ್ಲ ಅಭ್ಯರ್ಥಿಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಮುಖ್ಯ ಅತಿಥಿಗಳಾದ ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರದ ಡೀನ್‍ರಾದ ಡಾ. ಬಿ.ಜಿ ಪ್ರಕಾಶ್, ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಹೈನುಗಾರಿಕೆಗಳಲ್ಲಿ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವಲ್ಲಿ ಡಿಪ್ಲೋಮಾ ಪದವಿ ಪಡೆದ ಕೃಷಿ ಪರಿಕರ ಮಾರಾಟಗಾರರ ಜವಾಬ್ದಾರಿ ಸಮಾಜದಲ್ಲಿ ಹೆಚ್ಚಾಗಿದೆ ಎಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಸಹ ವಿಸ್ತರಣಾ ನಿರ್ದೇಶಕರು (ದಕ್ಷಿಣ), ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ಡಾ. ಟಿ.ಬಿ. ಬಸವರಾಜುರವರು ಮಾತನಾಡಿ, ಈ ಒಂದು ವರ್ಷದ ದೇಸಿ ಡಿಪ್ಲೊಮಾ ಕೋರ್ಸ್‍ನಲ್ಲಿ ವಿದ್ಯಾರ್ಥಿಗಳಿಗೆ ವಿವರವಾಗಿ ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತಿಳಿಸಲಾಗಿದೆ. ಕೃಷಿ ಇಲಾಖೆ, ವಿಶ್ವವಿದ್ಯಾಲಯ, ಪ್ರಗತಿಪರ ರೈತರು ಯಾರೇ ಇರಲಿ, ಒಂದು ತಾಂತ್ರಿಕತೆಯನ್ನು ಸಂಶೋಧನೆ ಮಾಡಿದ ನಂತರ ಅದು ರೈತರಿಗೆ ತಲುಪಬೇಕು. ಆ ಜವಾಬ್ದಾರಿಯು ಕೃಷಿ ಪರಿಕರ ಮಾರಾಟಗಾರರ ಮೇಲೆ ಇದೆ. ಈ ಕಾರ್ಯಕ್ರಮದ ಉದ್ದೇಶ ರೈತರ ಆದಾಯ ದ್ವೀಗುಣಗೊಳಿಸುವದ್ದಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಮತ್ತು ರಾಸಾಯನಿಕಗಳ ಮಾರಟವನ್ನು ಅಷ್ಟೇ ಗಮನದಲ್ಲಿಟ್ಟುಕೊಳ್ಳದೇ ಸಾವಯವ ಗೊಬ್ಬರ, ಕೃಷಿ ತ್ಯಾಜ್ಯಗಳ ಬಳೆಕಯ ಬಗ್ಗೆಯು ರೈತರಿಗೆ ತಿಳಿಸಿ ಮನವರಿಕೆ ಮಾಡಿ ಕೊಡಬೇಕು ಹಾಗೂ ಅದು ರೈತರಿಗೆ ಉಪಯೋಗವಾಗಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕರು (ಜಾಗೃತಿ ಕೋಶ), ಕೃಷಿ ಇಲಾಖೆ, ಕೊಲಾರದ ಶ್ರೀ. ಎಸ್. ರವಿಕುಮಾರ ರವರು ಮಾತನಾಡಿ ಪದವಿ ತೆಗೆದುಕೊಂಡು ಅದಕ್ಕೆ ಸಾರ್ಥಕತೆಯನ್ನು ಕೊಡಬೇಕು ಎಂದು ತಿಳಿಸಿದರು. ತಾಂತ್ರಿಕತೆಯ ಬಗ್ಗೆ ಈಗಾಗಲೆ ಸಂಪೂರ್ಣ ಮಾಹಿತಿ ಕೃಷಿ ಪರಿಕರ ಮಾರಾಟಗಾರರಿಗೆ ಇದ್ದು, ಇನ್ನು ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯನ್ನು ಸಂಪರ್ಕಿಸಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಮಾಡಿದ ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಕೆ. ತುಳಸಿರಾಮ್, ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಡಿಪ್ಲೊಮಾ ಕೊರ್ಸ್‍ಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಈಗ ಕೇವಲ ಕೃಷಿ ಪರಿಕರ ಮಾರಾಟಗಾರರಲ್ಲ, ಪಧವಿದರ ಕೃಷಿ ಪರಿಕರ ಮಾರಾಟಗಾರರು ಎಂದು ತಿಳಿಸುತ್ತ, ರೈತರಿಗೆ ಹಚ್ಚು ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು, ತಮಗೆ ಸಂದೇಹವಿದ್ದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸೂಕ್ತ ಸಲಹೆಗಳನ್ನು ನೀಡಲು ಹಾಗೂ ಕ್ಷೇತ್ರ ಭೇಟಿಗೂ ಯಾವಾಗಲೂ ಸಿದ್ದರಿರುತ್ತಾರೆ ಎಂದು ತಿಳಿಸುತ್ತ, ಕೋಲಾರ ಜಿಲ್ಲೆಯ ರೈತರಿಗೆ ಇದರ ಸದುಪಯೋಗವಾಗಲಿ ಎಂದರು.
ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಮಣ್ಣು ವಿಜ್ಞಾನಿ ಡಾ. ಅನಿಲಕುಮಾರ್ ಎಸ್, ತೋಟಗಾರಿಕೆ ವಿಜ್ಞಾನಿ ಡಾ. ಜ್ಯೋತಿ ಕಟ್ಟೇಗೌಡರ, ಸಸ್ಯ ರೋಗ ವಿಜ್ಞಾನಿ ಡಾ. ಡಿ. ಎಸ್. ಅಂಬಿಕಾ, ಡಾ. ಶಶಿಧರ್ ಕೆ.ಆರ್, ಶ್ರೀಮತಿ. ಸ್ವಾತಿ ಜಿ.ಆರ್ & ಕೆವಿಕೆಯ ಬೋಧಕೇತರ ಸಿಬ್ಬಂದಿಗಳು ಹಾಗೂ ದೇಸಿ ಕೋರ್ಸ್‍ನ ಫೆಸಿಲಿಟೇಟರ್ ಶ್ರೀ. ಶಶಿಕುಮಾರ್, ಶ್ರೀ. ಮೊಹಮ್ಮದ ಫಿರ್ದೋಸ್, ಶ್ರೀ. ಚಲಪತಿ, ಶ್ರೀ. ಬುಜ್ಜಿ ನಾಯ್ಡು, ಶ್ರೀ. ಜಮೀರ ಅಹ್ಮದ, ಶ್ರೀ. ಪಿ. ನಾರಾಯಣಸ್ವಾಮಿ ಹಾಗೂ 36 ಜನ ಕೃಷಿ ಪರಿಕರ ಮಾರಾಟಗಾರರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.