ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ,ಜ-24, ಕೋಲಾರದ ಟೆಮೋಟೋ ಮಾರುಕಟ್ಟೆಯ ಅಭಿವೃದ್ದಿಗೆ ಅವಶ್ಯಕತೆ ಇರುವ 50 ಎಕರೆ ಜಮೀನಿನ ಸಮಸ್ಯೆಯನ್ನು ಬಗೆ ಹರಿಸಿ ಮುಂದಿನ ಟೆಮೋಟೋ ಋತಮಾನದೊಳಗೆ ಮಾರುಕಟ್ಟೆ ಅಭಿವೃದ್ದಿ ಪಡಿಸಿಬೇಕೆಂದು ರೈತ ಸಂಘದಿಂದ ಎ.ಪಿ.ಎಂ.ಸಿ. ಅದ್ಯಕ್ಷ ಮಂಜುನಾಥ್ ಮತ್ತು ಎ.ಪಿ.ಎಂ.ಸಿ ವಿಜಯಲಕ್ಷ್ಮೀ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಕೆ.ಸಿ.ವ್ಯಾಲ್ಯೂ ನೀರಿನ ಜೊತೆಗೆ ಮಳೆ ನೀರು ಸಂಗ್ರಹವಾಗಿ ಜಿಲ್ಲಾದ್ಯಂತ ಎಲ್ಲಾ ಕೆರೆಗಳು ತುಂಬಿ ತುಳುಕುತ್ತಿದ್ದು, ಮುಂದಿನ ಟೆಮೋಟೋ ಅವಕ ಹೆಚ್ಚಾಗುವ ಮುನ್ಸೂಚನೆ ಇದ್ದರೂ ಮುಂಜಾಗೃತವಾಗಿ ಜಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಕೃಷಿ ಉತ್ಪನ್ನ ಆಡಳಿತ ಮಂಡಳಿ ಜನ ಪ್ರತಿನಿಧಿಗಳ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದೇ ಹೋದರೆ ಎಲ್ಲಾ ಜನ ಪ್ರತಿನಿಧಿಗಳ ಮನೆ ಮುಂದೆ ಟೆಮೋಟೋ ಹರಾಜು ಹಾಕುವ ಮೂಲಕ ನ್ಯಾಯ ಪಡೆದುಕೊಳ್ಳುತ್ತೇವೆಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.
ಏಷ್ಯಾದಲ್ಲೇ ಅತಿ ದೊಡ್ಡ ಎರಡನೇ ಮಾರುಕಟ್ಟೆಯೆಂದು ಹೆಸರು ಪಡೆದಿರುವ ಕೋಲಾರ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯ ಅಭಿವೃದ್ದಿಗೆ ಅವಶ್ಯಕತೆ ಇರುವ 50 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡುವ ಕಡತಗಳು ಟೇಬಲ್‍ನಿಂದ ಟೇಬಲ್‍ಗೆ ಅಲೆದಾಡಿ 5-6 ವರ್ಷಗಳಿಂದ ಸರ್ಕಾರದ ಮಟ್ಟದಲ್ಲಿ ದ್ವನಿ ಇಲ್ಲದೆ ದೂಳು ಹಿಡಿಯುತ್ತಿದೆ ಎಂದು ಅಧಿಕಾರಿಗಳ ವಿರುದ್ದ ಆರೋಪ ಮಾಡಿದರು.
ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಜನ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳು ವರ್ಷಕ್ಕೊಮ್ಮೆ ಬದಲಾವಣೆಯಾಗುತ್ತಿದ್ದಾರೆ. ಆದರೆ ರೈತರ ಜೀವನಾಡಿಯಾಗಿರುವ ಮಾರುಕಟ್ಟೆಯ ಜಾಗದ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ವಕ್ಕಲೇರಿಯಿಂದ ಮಡೇರಹಳ್ಳಿ ಮತ್ತೆ ಚಲುವನಹಳ್ಳಿಯಿಂದ ನೇರವಾಗಿ ವಿಧಾನಸೌಧದ ಅಧಿಕಾರಿಗಳ ಮುಂದೆ ಇರುವ ಕಡತವನ್ನು ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಜಾಗವನ್ನು ಮಂಜೂರು ಮಾಡಿಸಿಕೊಳ್ಳಲು ಅಧಿಕಾರಿಗಳು ಮತ್ತು ಜಿಲ್ಲೆಯ ಜನ ಪ್ರತಿನಿಧಿಗಳು ಮಲತಾಯಿ ದೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.
ಜಾಗದ ಸಮಸ್ಯೆ ಬಗ್ಗೆ ಗಮನ ಹರಿಸದೇ ಇರುವುದನ್ನು ನೋಡಿದರೆ ಮಾರುಕಟ್ಟೆಯನ್ನು ಕೆಲವು ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಮಂಡಳಿಯಲ್ಲಿರುವ ಜನ ಪ್ರತಿನಿಧಿಗಳು ಖಾಸಗಿ ಮಾರುಕಟ್ಟೆಯನ್ನು ಸ್ಥಾಪನೆ ಮಾಡುವ ಮನಸ್ಸಿರುವುದರಿಂದ ಮುಂದೆ ಮನಸ್ಸು ಮಾಡುತ್ತಿಲ್ಲ. ಜೊತೆಗೆ ಇರುವ ಮಾರುಕಟ್ಟೆಯಲ್ಲಿ ವಿವಿಧ ಅನುದಾನಗಳನ್ನು ಬಿಡುಗಡೆ ಮಾಡಿಸಿಕೊಂಡು ಕೆಲಸಕ್ಕೆ ಬಾರದ ಹಾಗೆ ಕಾಮಗಾರಿಗಳನ್ನು ಮಾಡುವ ಮುಖಾಂತರ ರೈತರ ತೆರಿಗೆ ಹಣವನ್ನು ವ್ಯರ್ಥ ಮಾಡುವ ಜೊತೆಗೆ ಕೋಟಿ ಕೋಟಿ ಹಣವನ್ನು ಆಡಳಿತ ಮಂಡಳಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ವ್ಯವಸ್ಥೆ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಮಾರುಕಟ್ಟೆಯ ಅಭಿವೃದ್ದಿ ಜಿಲ್ಲಾಧಿಕಾರಿಗಳು, ಜನ ಪ್ರತಿನಿಧಿಗಳು ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಮಂಡಳಿ ಕೆಲವೇ ಕೆಲವು ದಿನಗಳಲ್ಲಿ ಕೋಲಾರ ಮಾರುಕಟ್ಟೆಯನ್ನು ಸಿಂಗಪೂರು ಮಾಡುತ್ತೇನೆಂದು ಪತ್ರಿಕಾ ಮತ್ತು ಮಾದ್ಯಮ ಹೇಳಿಕೆಗಳಿಗೆ ಸೀಮತಿವಾಗುತ್ತಿದ್ದಾರೆ. ಇದರಿಂದ ಪ್ರತಿ ವರ್ಷ ಟೆಮೋಟೋ ಋತುವಿನ ವೇಳೆಯಲ್ಲಿ ಸಮರ್ಪಕವಾದ ಜಾಗವಿಲ್ಲದೆ, ರೈತರ ಜೊತೆಗೆ ವ್ಯಾಪಾರಸ್ಥರು, ದಲ್ಲಾಳಿಗಳು ನಷ್ಟವನ್ನು ಅನುಭವಿಸುತ್ತಿದ್ದಾರೆ. ಆದರೂ ಸಹ ಮಾರುಕಟ್ಟೆಯ ಅಭಿವೃದ್ದಿಗೊಳಿಸಲು ಮುಂದಾಗದ ವ್ಯವಸ್ಥೆ ವಿರುದ್ದ ರೈತರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ಒಂದುವಾರದೊಳಗೆ ಟೆಮೋಟೋ ಮಾರುಕಟ್ಟೆಯ ಜಾಗದ ಸಮಸ್ಯೆಯನ್ನು ಬಗೆಹರಿಸದೇ ಹೋದರೆ ಮಾರಕಟ್ಟೆಯ ವಹಿವಾಟಿನ್ನು ಬಂದ್‍ಮಾಡುವ ಜೊತೆಗೆ ಎಲ್ಲಾ ಜನ ಪ್ರತಿನಿಧಿಗಳ ಮನೆ ಮುಂದೆ ಟೆಮೋಟೋ ಸಮೇತ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡುವ ಮುಖಾಂತರ ಮನವಿ ನೀಡಿ ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿ ಕಾರ್ಯದರ್ಶಿಯಾದ ರವಿಕುಮಾರ್ ರವರು ಚಲುವನಹಳ್ಳಿ ಗ್ರಾಮದ ಬಳಿ 50 ಎಕರೆ ಜಮೀನು ಈಗಾಗಲೇ ಮಾರುಕಟ್ಟೆಗೆ ಮಂಜೂರಾಗಿದೆ. ಆದರೆ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಕಾರಣ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆ ಹರಿಸಬೇಕು. ಸಂಬಂಧಪಟ್ಟ ಉಸ್ತುವಾರಿ ಸಚಿವರು ಹಾಗೂ ಸಂಸದರು, ಶಾಸಕರು, ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರೈತ ಸಂಘದ ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಂಗಸಂದ್ರ ನಾಗೇಶ್, ಪುತ್ತೇರಿ ರಾಜು, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ತಾಲ್ಲೂಕು ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ಕುವಣ್ಣ, ವೆಂಕಟೇಶಪ್ಪ, ಗೋವಿಂದಪ್ಪ, ಮುದುವಾಡಿ ಚಂದ್ರಪ್ಪ, ಮಾಲೂರು ತಾ.ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ, ಮುಳಬಾಗಿಲು ತಾ.ಅಧ್ಯಕ್ಷ ಯಲುವಹಳ್ಳಿ ಪ್ರಭಾಕರ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಮುಂತಾದವರಿದ್ದರು.