JANANUDI.COM NETWORK

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ 6 ಮಂದಿ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ ಮಂಗಳವಾರ ನ.16 ರ ಬೆಳಗ್ಗೆ ಈ ಭೀಕರ ಆ್ಯಕ್ಸಿಡೆಂಟ್ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ 4 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಹಾರದ ಲಖಿಸರಾಯ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 333 ರಲ್ಲಿ ಈ ಅಪಘಾತ ಸಂಭವಿಸಿದ್ದು. ಸುಶಾಂತ್ ಕುಟುಂಬದವರು ಸೇರಿ ಒಟ್ಟು ೧೦ ಮಂದಿ ಪ್ರಯಾಣಿಸಿದ್ದ ಕಾರು ಮತ್ತು ಟ್ರಕ್ ನಡುವೆ ನಡೆದ ಅಪಘಾತದ ಪರಿಣಾಮ ಸ್ಥಳದಲ್ಲೇ ೬ ಮಂದಿ ಮೃತಪಟ್ಟಿದ್ದಾರೆ.
ವಾಹನದಲ್ಲಿದ್ದವರು ಕುಟುಂಬಸ್ಥರೊಬ್ಬರ ಅಂತ್ಯಸಂಸ್ಕಾರ ಮುಗಿಸಿ ಬರುತ್ತಿರುವಾಗ ಈ ಅಪಘಾತ ಸಂಭವಿಸಿದ್ದು 6 ಮಂದಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಖಿಸರಾಯ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಬಾಲಮುಕುಂದ್ ಸಿಂಗ್ ಮತ್ತು ದಿಲ್ ಖುಷ್ ಸಿಂಗ್ ಅವರನ್ನು ಪಾಟ್ನಾಗೆ ಕಳಿಸಿ ಹೆಚ್ಚುವರಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರಿಗೆ ಲಖಿಸರಾಯ್ ಜಿಲ್ಲಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಮೃತರನ್ನು ಬಾಬಿ ದೇವಿ, ಅನಿತಾ ದೇವಿ, ಲಾಲ್ಜಿತ್ ಸಿಂಗ್, ಅಮಿತ್ ಶೇಖರ್, ರಾಮಚಂದ್ರ ಸಿಂಗ್ ಹಾಗೂ ಚಾಲಕ ಪ್ರೀತಂ ಎಂದು ಗುರುತಿಸಲಾಗಿದೆ.