

ಬೆಂಗಳೂರು : ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಪ್ರೆಸ್ ಕ್ಲಬ್ ಮತ್ತು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಜಂಟಿಯಾಗಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರು ಗ್ರಾಮೀಣ ಪತ್ರಕರ್ತರ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಿದ್ದಾರೆ. ಈ ಬಾರಿ ಗ್ಯಾರಂಟಿ ಯೋಜನೆ ಜಾರಿ ಆದ್ಯತೆ ಆಗಿದ್ದರಿಂದ ಇದೆಲ್ಲಾ ಸಾಧ್ಯವಾಗಲಿಲ್ಲ. ಚರ್ಚೆ ಮಾಡಿ ಮುಂದಿನ ಕ್ರಮ ಜರುಗಿಸಲಾಗುವುದು. ಸುಮ್ಮನೆ ನಿಮಗೆ ಭರವಸೆ ಕೊಡುವುದಿಲ್ಲ. ನುಡಿದಂತೆ ನಡೆದು ಮಾಡಿ ತೋರಿಸುತ್ತೇವೆ ಎಂದರು.
ಪತ್ರಕರ್ತರ ಹಲವು ಬೇಡಿಕೆಗಳ ಬಗ್ಗೆ ಗಮನ ಸೆಳೆದಿದ್ದೀರಿ. ಹಂತ ಹಂತವಾಗಿ ಬೇಡಿಕೆ ಈಡೇರಿಸಲಾಗುವುದು. ಈ ಬಗ್ಗೆ ಶಿವಾನಂದ ಅವರ ಜೊತೆಗೆ ಚರ್ಚೆ ಮಾಡಲಾಗುವುದು. ಪತ್ರಕರ್ತರ ಹಿತ ಕಾಯಲು ಸರ್ಕಾರ ಬದ್ದವಾಗಿದೆ ಎಂದರು.
ಪ್ರೆಸ್ ಕ್ಲಬ್ ಜಾಗದ ಬಗ್ಗೆ ಶ್ರೀಧರ್ ಪ್ರಸ್ತಾಪಿಸಿದ್ದು, ಅರಕೆರೆ ಜಯರಾಂ ಗಮನ ಸೆಳೆದಿದ್ದಾರೆ. ನಿಮ್ಮನ್ನು ಯಾರೂ ಒಕ್ಕಲೆಬ್ಬಿಸುವುದಿಲ್ಲ. ನೀವು ಇದೇ ಜಾಗದಲ್ಲಿ ಮುಂದುವರಿಯುತ್ತೀರಿ ಎಂದು ಮುಖ್ಯಮಂತ್ರಿ ಅಭಯ ನೀಡಿದರು.
ನಾನು ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಿಕಾ ದಿನಾಚರಣೆ ಉದ್ಘಾಟಿಸಿದ್ದೇನೆ. ಅನೇಕ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿದ ಸೌಭಾಗ್ಯ ನನ್ನದು. ನಿಮಗೆಲ್ಲ ಪತ್ರಿಕಾ ದಿನಾಚರಣೆ ಶುಭಾಶಯ ಕೋರುತ್ತೇನೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತರನ್ನು ಯಶಸ್ವಿನಿ ಯೋಜನೆಗೆ ಸೇರಿಸಬೇಕು. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಬೇಕು. ಪತ್ರಕರ್ತರು ಮತ್ತು ಪತ್ರಿಕೆಗಳ ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಗಮನ ಸೆಳೆದರು.
ಚುನಾವಣೆ ಮುಂಚೆ ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಪತ್ರಕರ್ತರಿಗಾಗಿ 500 ಕೋಟಿ ಮೀಸಲಿಡುವ ಆಶ್ವಾಸನೆ ನೀಡಿದ್ದು ಅಭಿನಂದನಿಯ. ಅದನ್ನು ಕಾರ್ಯಗತ ಮಾಡಲು ಬಜೆಟ್ ನಲ್ಲಿ ಹಣ ನೀಡಬೇಕು ಎಂದು ತಗಡೂರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಿ.ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಾಮಾಜಿಕ ಜವಾಬ್ದಾರಿ ಬಗ್ಗೆ ಹಿರಿಯ ಪತ್ರಕರ್ತರಾದ ಪೂರ್ಣಿಮಾ, ಡಿ.ಉಮಾಪತಿ, ರವಿಹೆಗಡೆ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪ್ರಭಾಕರ್,ಶಾಸಕರಾದ ಅಜಯ್ ಸಿಂಗ್, ಗೋವಿಂದ ರಾಜು, ವಾರ್ತಾ ಇಲಾಖೆ ಆಯುಕ್ತ ಹೇಮಂತ ನಿಂಬಾಳ್ಕರ್, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ, ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಕಾರ್ಯದರ್ಶಿ ಸೋಮಶೇಖರ ಕೆರಗೋಡು ಮತ್ತಿತರರು ಹಾಜರಿದ್ದರು.
ಹಿಂದುಳಿದ ಪತ್ರಿಕೆಗಳಿಗೆ ಮುಖ್ಯಮಂತ್ರಿ ಅಭಯ:
ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ಪತ್ರಕರ್ತರು ಹಿಂದುಳಿದ ಪತ್ರಿಕೆಗಳಿಗೆ ಜಾಹೀರಾತು ಸೇರಿದಂತೆ ಯೋಜನೆ ಮುಂದುವರಿಸುವಂತೆ ಗಮನ ಸೆಳೆದರು. ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದೆ ನನ್ನ ಅಧಿಕಾರಾವಧಿಯಲ್ಲಿಯೇ ಆ ವರ್ಗಕ್ಕೆ ಸೌಲಭ್ಯ ನೀಡಿದ್ದೆ. ತಾರತಮ್ಯ ಮಾಡದೆ ಜಾಹೀರಾತು ನೀಡಿಕೆ ಮತ್ತು ಹಿಂದುಳಿದ ವರ್ಗಗಳ ಪತ್ರಿಕೆಗಳಿಗೂ ಯೋಜನೆ ಮುಂದುವರಿಸುವುದಾಗಿ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು.