ರೈಲು ನಿಲ್ದಾಣದಲ್ಲಿ ಅಗತ್ಯ ಸೌಲಭ್ಯಕ್ಕೆ ಕ್ರಮ – ಸಂಸದ ಎಸ್.ಮುನಿಸ್ವಾಮಿ

ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಕೋಲಾರ : ದಿನ ನಿತ್ಯ ಮಾಲೂರು ಮತ್ತು ಬಂಗಾರಪೇಟೆ ರೈಲು ನಿಲ್ದಾಣದಿಂದ ಬೆಂಗಳೂರಿನ ಕಡೆಗೆ ಹೊರಡುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸರಿಯಾದ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು . ಇಂದು ಮಾಲೂರು ಹಾಗೂ ಬಂಗಾರಪೇಟೆ ರೈಲು ನಿಲ್ದಾಣಗಳಲ್ಲಿ ಹಮ್ಮಿಕೊಂಡಿದ್ದ , ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದ ಅವರು , ಮಾಲೂರಿನ ರೈಲು ನಿಲ್ದಾಣದಲ್ಲಿ ಕಬ್ಬಿಣದ ಮೇಲೇತುವೆಯನ್ನು ಅತಿ ಶೀಘ್ರದಲ್ಲಿ ಮಾಡಿಕೊಡಲಾಗುವುದು . ಬೆಂಗಳೂರಿನಿಂದ ಮಾಲೂರಿಗೆ ಬೆಳಿಗ್ಗೆ 8.30 ರಿಂದ 10.40 ರವರೆಗೆ ಯಾವುದೇ ರೈಲು ಸೇವೆ ಇಲ್ಲ . ಈ ಸಮಯದಲ್ಲಿ ಒಂದು ರೈಲು ಸೇವೆ ಒದಗಿಸುವಂತೆ ಸಾರ್ವಜನಿಕರು ಸಂಸದರಲ್ಲಿ ಮನವಿ ಮಾಡಿದರು . ಶೀಘ್ರದಲ್ಲೇ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಂಸದರು ಭರವಸೆ ನೀಡಿದರು . ಕೆಲವು ತಿಂಗಳಿನಿಂದ ಮರಲಹಳ್ಳಿ ರೈಲು ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲಿಸುತ್ತಿಲ್ಲ , ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ . ಆದ್ದರಿಂದ ರೈಲು ನಿಲ್ದಾಣದಲ್ಲಿ ಕಡ್ಡಾಯವಾಗಿ ರೈಲುಗಳನ್ನು ನಿಲ್ಲಿಸಬೇಕು . ಬಂಗಾರಪೇಟೆಯಿಂದ ಕೋಲಾರಕ್ಕೆ ಅತಿ ಕಡಿಮೆ ರೈಲುಗಳಿವೆ ಆದ್ದರಿಂದ ಹೆಚ್ಚುವರಿ ರೈಲಿನ ವ್ಯವಸ್ಥೆ ಮಾಡಿಕೊಡಲಾಗುವುದು . ಪ್ಯಾಸೆಂಜರ್ ರೈಲುಗಳು ಬೆಂಗಳೂರಿನಿಂದ ಸಿಟಿಗೆ ಹೋಗದೆ ಕೆ.ಆರ್.ಪುರಂ ಮತ್ತು ಬೈಯಪನಹಳ್ಳಿಯವರೆಗೆ ಮೊಟಕುಗೊಳಿಸಲಾಗುತ್ತಿದೆ . ಇದರಿಂದ ಪ್ರಯಾಣಿಕರಿಗೆ ನಗರಕ್ಕೆ ಹೋಗಲು ತೊಂದರೆಯಾಗುತ್ತಿದೆ . ಆದ್ದರಿಂದ ರೈಲುಗಳು ನಗರದವರೆಗೂ ತಲುಪುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದರು . ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್‌ ಅವರು ಮಾತನಾಡಿ , 511 ಕಿ.ಮೀ ನೈರುತ್ಯ ರೈಲ್ವೆ ಮಾರ್ಗವನ್ನು ನಿರ್ಮಿಸಲಾಗಿದೆ . ಜಮ್ಮನಹಳ್ಳಿ , ಚಿಕ್ಕಬಳ್ಳಾಪುರ , ಕೋಲಾರ , ಬಂಗಾರಪೇಟೆ ಮಾರ್ಗವಾಗಿ ಪ್ಯಾಸೆಂಜರ್ ರೈಲುಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ . ಅಕ್ಟೋಬರ್ ಮಾಹೆಯ ಅಂತ್ಯಕ್ಕೆ ಪ್ಯಾಸೆಂಜರ್ ರೈಲುಗಳ ವ್ಯವಸ್ಥೆಯನ್ನು ಪೂರ್ಣಪ್ರಮಾಣದಲ್ಲಿ ಕಲ್ಪಿಸಲಾಗುವುದು . ಟೇಕಲ್ ನಿಲ್ದಾಣದಲ್ಲಿ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸಲಾಗುವುದು . ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದ ಈ ಎಲ್ಲಾ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತೇವೆ ಎಂದು ತಿಳಿಸಿದರು . ಈ ಸಂದರ್ಭದಲ್ಲಿ ರೈಲ್ವೆ ವ್ಯವಸ್ಥಾಪಕರಾದ ಶಾಮ್ ಸಿಂಗ್ , ಬಂಗಾರಪೇಟೆ ತಹಶೀಲ್ದಾರರಾದ ದಯಾನಂದ್ , ಬಂಗಾರಪೇಟೆ ಮಾಜಿ ಪುರಸಭೆ ಅಧ್ಯಕ್ಷರಾದ ಚಂದ್ರಾರೆಡ್ಡಿ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ವಿ.ಮಹೇಶ್ ಸೇರಿದಂತೆ ರೈಲ್ವೆ ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು .