ಶಾಸಕ ಕೊತ್ತೂರು ಮಂಜುನಾಥ್‍ರ ನುಡಿದಂತೆ ನಡೆಯ ಫಲಶೃತಿಅರಾಭಿಕೊತ್ತನೂರು ಶಾಲೆಗೆ ಡ್ರೈನೇಜ್ ಕಾಮಗಾರಿಗೆ ಸೂಚನೆ

ಕೋಲಾರ:- ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದ ನೂತನ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಶಾಲೆಯ ಆವರಣದಲ್ಲಿ ಮಳೆಯ ಜೌಗು ನೀರು ಹರಿಸಲು ಡ್ರೈನೇಜ್ ನಿರ್ಮಾಣ ಮತ್ತಿತರ ಕಾಮಗಾರಿಗಳ ಕುರಿತು ಮಾಡಿದ ಮನವಿಗೆ ಸ್ಪಂದಿಸಿದ್ದು, ಇದೇ ದಿನ ನಡೆದ ಅಧಿಕಾರಿಗಳ ಸಭೆಯಲ್ಲೇ ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಲು ಸೂಚನೆ ನೀಡಿ ನುಡಿದಂತೆ ನಡೆಯುವೆ ಎಂಬುದನ್ನು ಸಾಕ್ಷೀಕರಿಸಿದರು.
ಅರಾಭಿಕೊತ್ತನೂರು ಪ್ರೌಢಶಾಲೆಯಲ್ಲಿ ಅವರು ಶಾಸಕರಾದ ನಂತರ ನಡೆದ ಮೊದಲ ಶಾಲಾ ಭೇಟಿ, ಕಾರ್ಯಕ್ರಮದ ಫಲಶೃತಿ ಎಂಬಂತೆ ಶಾಸಕರು ತಕ್ಷಣ ಕಾರ್ಯಪ್ರವೃತ್ತರಾಗಿ ಶಾಲೆಯ ಸಮಸ್ಯೆಗಳಿಗೆ ಸ್ಪಂದಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಶಾಸಕರು ಶಾಲೆಯ ಕಂಪ್ಯೂಟರ್‍ಲ್ಯಾಬ್, ವಿಜ್ಞಾನ ಪ್ರಯೋಗಾಲಯ ವೀಕ್ಷಿಸಿದ್ದು, ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಪ್ರದೀಪ್ ಕುಮಾರ್,ಎಸ್‍ಡಿಎಂಸಿ ಅಧ್ಯಕ್ಷ ಮಹೇಂದ್ರ ಮತ್ತಿತರರು
ಬೆಟ್ಟದ ತಪ್ಪಲಲ್ಲಿ ಇರುವ ಶಾಲೆ ಇದಾಗಿದ್ದು, ಮಳೆ ಬಂದರೆ ಜೌಗು ನೀರು ಇಡೀ ಆವರಣದಲ್ಲಿ ಹರಿಯುವುದರಿಂದ ಮಕ್ಕಳ ಆಟೋಟಗಳಿಗೆ ಆಗುತ್ತಿರುವ ತೊಂದರೆ ಕುರಿತು ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಶಾಸಕರು ಈ ಶಾಲೆಯ ಸಮಗ್ರ ಅಭಿವೃದ್ದಿಗೆ ಎಲ್ಲಾ ನೆರವು ಒದಗಿಸುವ ಮೂಲಕ ಇದನ್ನು ಜಿಲ್ಲೆಯಲ್ಲೇ ಮಾದರಿ ಶಾಲೆಯಾಗಿಸುವ ಭರವಸೆ ನೀಡಿ ಕಾರ್ಯಕ್ರಮ ಮುಗಿಸಿ ಹೊರಟರು.


ಸಭೆ ಫಲಶೃತಿ ಎಸ್ಟಿಮೇಟ್‍ಗೆ ಸೂಚನೆ


ಮಧ್ಯಾಹ್ನ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅರಾಭಿಕೊತ್ತನೂರು ಶಾಲೆಗೆ ನೀಡಿದ ಭರವಸೆ ಈಡೇರಿಸುವ ಸಂಕಲ್ಪದೊಂದಿಗೆ ನುಡಿದಂತೆ ನಡೆದ ಶಾಸಕ ಕೊತ್ತೂರು ಮಂಜುನಾಥ್, ಸಣ್ಣ ನೀರಾವರಿ ಇಂಜಿನಿಯರ್‍ಗೆ ಸೂಚನೆ ನೀಡಿ, ನಾಳೆಯೇ ಶಾಲೆಗೆ ಭೇಟಿ ನೀಡಿ ಅಂದಜುಪಟ್ಟಿ ತಯಾರಿಸಿ ನೀಡುವಂತೆ ಆದೇಶಿಸುವ ಮೂಲಕ ನುಡಿದಂತೆ ನಡೆದಿದ್ದು, ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಫಲಶೃತಿ ಎಂಬಂತಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಒಟ್ಟಾರೆ ಮುಳಬಾಗಿಲಿನಲ್ಲಿ ಸರ್ಕಾರಿ ಶಾಲೆಗಳಿಗೆ ನೆರವಾಗುವ ಮೂಲಕವೇ ತಮ್ಮ ಸಮಾಜಸೇವೆಗೆ ಮುನ್ನುಡಿ ಬರೆದು ಶಾಸಕರಾಗಿದ್ದ ಕೊತ್ತೂರು ಮಂಜುನಾಥ್ ಕೋಲಾರದಲ್ಲೂ ಸರ್ಕಾರಿ ಶಾಲೆಗಳ ಕುರಿತು ಹೊಂದಿರುವ ಕಾಳಜಿ, ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಸಂಕಲ್ಪ ನಿಜಕ್ಕೂ ಆದರ್ಶವಾಗಿದೆ.