ಕುಂದಾಪುರ,ಸೆ. 24 ಭೀಕರ ರಸ್ತೆ ಅಪಘಾತದಲ್ಲಿ ಭಟ್ಕಳ ನಿವಾಸಿ ದಿವಂಗತ ಅಬೂಬಕರ್ ಸಿದ್ದೀಕ್ವಾ ಅವರ ಪುತ್ರ ಮೊಹಮ್ಮದ್ ನಾಸಿರ್ ಸಿದ್ದೀಕ್ವಾ (ಘಾಟಿ) ಎಂಬುವರು ಮೃತಪಟ್ಟಿದ್ದಾರೆ. ಇವರು ಭಟ್ಕಳದ ಮೂಸ ನಗರದ ನಿವಾಸಿಯಾಗಿದ್ದರು ಸೆ. ೨೩ ಸೋಮವಾರ ರಾತ್ರಿ 8:45 ರ ಸುಮಾರಿಗೆ ಕುಂದಾಪುರ ಸಮೀಪ NH 66 ರ ಅರಾಟೆ ಸೇತುವೆ ಬಳಿ ಅಪಘಾತ ಸಂಭವಿಸಿದ್ದು. ಕುಟುಂಬ ಸದಸ್ಯರೊಂದಿಗೆ ಮಂಗಳೂರಿನಿಂದ ಮನೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ವಾಹನದಿಂದ ಅಸ್ವಾಭಾವಿಕ ಶಬ್ಧ ಕೇಳಿ ಬಂದ ಬಳಿಕ ನಾಸಿರ್ ಕಾರನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ರಸ್ತೆ ಬದಿ ವಾಹನ ನಿಲ್ಲಿಸಿ ಸಮಸ್ಯೆ ಪರಿಶೀಲಿಸಲು ಮುಂದಾದರು. ಮತ್ತೆ ಕಾರಿನೊಳಗೆ ಬರಲು ಮುಂದಾದಾಗ ಅದೇ ದಿಕ್ಕಿಗೆ ಸಾಗುತ್ತಿದ್ದ ಖಾಸಗಿ ಬಸ್ ಕಾರಿನ ಬಾಗಿಲಿಗೆ ಡಿಕ್ಕಿ ಹೊಡೆದಿದ್ದು, ನಾಸೀರ್ ಗೆ ತೀವ್ರ ಗಾಯಗಳಾಗಿದ್ದವು.
ಗಂಗೊಳ್ಳಿಯಿಂದ 24×7 MHI ಆಂಬ್ಯುಲೆನ್ಸ್ ಘಟನಾ ಸ್ಥಳಕ್ಕೆ ಆಗಮಿಸಿತು, ಮತ್ತು ನಾಸಿರ್ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಲ್ಲಿಗೆ ತಲುಪಿದಾಗ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಅಪಘಾತಕ್ಕೀಡಾದ ಖಾಸಗಿ ಬಸ್ ಕುಂದಾಪುರದಿಂದ ಗಂಗೊಳ್ಳಿಗೆ ತೆರಳುತ್ತಿತ್ತು ಎನ್ನಲಾಗಿದೆ. ನಾಸಿರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವಿಧಿವಿಧಾನಗಳು ಪೂರ್ಣಗೊಂಡ ನಂತರ ಭಟ್ಕಳಕ್ಕೆ ಸಾಗಿಸಲಾಗುವುದು.
ಕಾರು ಮತ್ತು ಬಸ್ ನಡುವೆ ಅಪಘಾತ ನಡೆದು ಸಂಚಾರ ಅಸ್ತವ್ಯಸ್ತ ಆಗಿದ್ದು, ಗಂಗೊಳ್ಳಿ ಪಿಎಸ್ಐ ಮತ್ತು ಟ್ರಾಫಿಕ್ ಪಿಎಸ್ಐರವರು ಘಟನಾ ಸ್ಥಳಕ್ಕೆ ಆಗಮಿಸಿ, ಕೇಸು ದಾಖಲಿಸಿ, ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.