ಹಂಗಾರಕಟ್ಟೆ : ಸಮಕಾಲೀನ ಸಮಾಜದ ಸ್ಥಿತಿಗತಿಯಲ್ಲಿ ನಾವೆಲ್ಲ ಕಲಿತು-ಬೆರೆತು ಅನನ್ಯತೆಯನ್ನು ಸಾಧಿಸಬೇಕಾಗಿದೆ. ಮೌಲ್ಯಗಳು ಕಟ್ಟಾಜ್ಞೆ ಆಗುವುದಿಲ್ಲ. ಅದು ದಿನೇ ದಿನೇ ರೂಢಿಸಿಕೊಳ್ಳುವ ಪ್ರಕ್ರಿಯೆಯಾಗಿದ್ದು ನಾವುಗಳು ಸನ್ನಿವೇಶವನ್ನು ರೂಪಿಸಿಕೊಡುವ ಮಹತ್ತರ ಕೆಲಸ ಮಾಡಬೇಕಾಗಿದೆ. ಮೌಲ್ಯ ಪ್ರಜ್ಞೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ತಂದೆ, ತಾಯಿ, ಪಾಲಕರು, ಸಂಘ ಸಂಸ್ಥೆಯವರು ಕ್ರಿಯಾತ್ಮಕ ಹೆಜ್ಜೆ ಇಡುವಂತೆ ಮಗುವಿನಲ್ಲಿ ಅಂತರಂಗದ ತುಡಿತವನ್ನು ಪ್ರೇರೇಪಿಸುವುದಾಗಿದೆ ಎಂದು ರೊ| ಕೆ.ಆರ್. ನಾೈಕ್, ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಹಂಗಳೂರು ಅವರು ಹೇಳಿದರು.
ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ ಇದರ 14ನೇ ವಾರ್ಷಿಕೋತ್ಸವದ ಅಂಗವಾಗಿ ಸರಕಾರಿ ಪ್ರೌಢಶಾಲೆ, ಗುಂಡ್ಮಿ, ಸಾಸ್ತಾನ ಇಲ್ಲಿ ಹಮ್ಮಿಕೊಂಡ ‘ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು’ ಎಂಬ ಮಾಹಿತಿ ಶಿಬಿರ ಹಾಗೂ ಸಂಸ್ಥೆ ನೀಡುವ ಕಲಾ ಕುಸುಮ ಪ್ರಶಸ್ತಿ ಪ್ರಧಾನ ಮಾಡಿ ಮಗುವಿನಲ್ಲಿ ಮೌಲ್ಯಗಳು ರೂಢಿಗತವಾಗಿರುವುದು, ಅದನ್ನು ನಿರಂತರ ಬಳಸುವುದು, ಆಪ್ತ ಸಮಾಜದ ನಿರ್ಮಾಣವೇ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಭಾಧ್ಯಕ್ಷತೆಯನ್ನು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸತೀಶ್ ಐತಾಳ್ ನಿರ್ವಹಿಸಿ ನಮ್ಮಲ್ಲಿ ಅಡಕವಾಗಿರುವ ಸೂಕ್ತ ಪ್ರತಿಭೆ ಅನಾವರಣಗೊಳ್ಳುವುದೇ ಅತೀ ಪ್ರಮುಖ ಘಟ್ಟವಾಗಿದ್ದು ನಮ್ಮ ದೈನಂದಿನ ಕ್ರಿಯೆಯಲ್ಲಿ ಅದನ್ನು ಅನುಷ್ಠಾನಗೊಳಿಸುವುದು ಗುರು-ಹಿರಿಯರಲ್ಲಿ ಗೌರವ, ಪ್ರೀತಿ ಮತ್ತು ಸ್ವಾಭಿಮಾನವನ್ನು ಪ್ರಕಟಿಸಬೇಕಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಬಾರ್ಕೂರಿನ ಖ್ಯಾತ ಉದ್ಯಮಿ ರಾಜಗೋಪಾಲ್ ನಂಬಿಯಾರ್ ಮಾತಾಡಿ ಮೌಲ್ಯ ಪ್ರಜ್ಞೆ ಮತ್ತು ಶಿಕ್ಷಣ ಪರಸ್ಪರ ಪೂರಕವಾಗಿದ್ದು ಅವಿನಾಭಾವ ಸಂಬಂಧ ಹೊಂದಿದೆ. ಮೌಲ್ಯಗಳಿಗೆ ಕ್ರಿಯಾ ಸ್ವರೂಪ ಕೊಡುವ ಕೆಲಸವನ್ನು ಶಿಕ್ಷಣವು ಮಾಡುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಮಂದಾರ ಶೆಟ್ಟಿ ಮಾತಾಡಿ ಇಂದಿನ ಸಾಮಾಜಿಕ ಸ್ಥಿತ್ಯಂತರ ಕಾಲಘಟ್ಟದಲ್ಲಿ ನಮ್ಮ ಜನಪದೀಯ ಸಂಸ್ಕøತಿ, ಜೀವನ ಕ್ರಮ, ನಡೆ ನುಡಿ, ಆಚಾರ-ವಿಚಾರ, ಆಹಾರ-ವಿಹಾರ, ಹಬ್ಬ ಹರಿದಿನಗಳು ತೀವ್ರ ಪಲ್ಲಟನೆಗೊಂಡಿದೆ. ನಮ್ಮ ಗುರಿಗಳನ್ನು ತಲುಪಲು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದೇವೆ. ಅದು ಅವರ ಭವಿಷ್ಯಕ್ಕೆ ಕಂಟಕವಾಗುವುದು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಜಿ., ಶಾಲಾ ಮುಖ್ಯ ಶಿಕ್ಷಕರಾದ ಸತೀಶ್ ಐತಾಳ್, ಕಲಾ ಕುಸುಮ ಪ್ರಶಸ್ತಿ ವಿಜೇತರಾದ ಆವರ್ಸೆ ಶ್ರೀನಿವಾಸ ಮಡಿವಾಳ, ಸಂಪನ್ಮೂಲ ವ್ಯಕ್ತಿ ಗಿರೀಶ್ ಅಚ್ಲಾಡಿ, ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ, ಪೋಷಕ ಪರಿಷತ್ ಸದಸ್ಯ ಗಣೇಶ್ ಗಾಣಿಗ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿ ಮಾತನಾಡಿ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ, ಸಾಮಾಜಿಕ ಮೌಲ್ಯ, ಸಾಂಸ್ಕøತಿಕ ಮೌಲ್ಯ ಹಾಗೂ ಮಾನವೀಯ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಅಲ್ಲದೇ ವಿದ್ಯಾರ್ಥಿಗಳು ಯಾವುದಾದರೊಂದು ಪ್ರವೃತ್ತಿ ಯಾ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮವನ್ನು ಕು| ವರ್ಷ ಸಾಲಿಗ್ರಾಮ ನಿರೂಪಿಸಿ ಶಾಲಾ ಮುಖ್ಯ ಶಿಕ್ಷಕ, ಸತೀಶ್ ಐತಾಳ್ ಸ್ವಾಗತಿಸಿ, ರಮೇಶ್ ವಕ್ವಾಡಿ ಪ್ರಸ್ತಾವನೆ ಮಾಡಿ ವಂದಿಸಿದರು. ಸುಮಾರು 185 ವಿದ್ಯಾರ್ಥಿಗಳು ಈ ಮಾಹಿತಿ ಶಿಬಿರದಿಂದ ಪ್ರಯೋಜನ ಪಡೆದರು.