ನವೆಂಬರ್ 4 ರ ಸೋಮವಾರ ತಡರಾತ್ರಿ 43 ವರ್ಷದ ಬಾಲಸುಬ್ರಮಣ್ಯಂ ಮತ್ತು ಅವರ 17 ವರ್ಷದ ಮಗಳು ದೊಡ್ಡ ಸೂಟ್ಕೇಸ್ನೊಂದಿಗೆ ನಿಲ್ದಾಣಕ್ಕೆ ಬಂದಿದ್ದರು. ಬಾಲಸುಬ್ರಹ್ಮಣ್ಯಂ ಆ ಸೂಟ್ಕೇಸ್ನ್ನು ಅಲ್ಲಿಯೇ ಬಿಟ್ಟು ರೈಲ್ವೆ ನಿಲ್ದಾಣದಿಂದ ಹೊರಹೋಗಲು ಯತ್ನಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.
ಸಾಮಾನು ಸರಂಜಾಮು ಬಿಟ್ಟು ಹೋಗಿರುವ ಬಗ್ಗೆ ಆತಂಕಗೊಂಡ ಪ್ರಯಾಣಿಕರು ಕೂಡಲೇ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸೂಟ್ಕೇಸ್ ತುಂಬಾ ದೊಡ್ಡದಾಗಿದ್ದ ಕಾರಣ, ಅಲ್ಲಿಂದ ಸ್ಥಳಾಂತರಿಸಲು ಸಾಧ್ಯವಾಗದ ಕಾರಣ ಆರ್ಪಿಎಫ್ ಅಧಿಕಾರಿಗಳು ಅನುಮಾನಗೊಂಡು ಕೊರುಕ್ಕುಪೇಟೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಅನುಮಾನಗೊಂಡ ಅಧಿಕಾರಿಗಳು ಸೂಟ್ಕೇಸ್ನ ವಿಷಯಗಳ ಬಗ್ಗೆ ವಿಚಾರಿಸಲು ಬಾಲಸುಬ್ರಮಣ್ಯಂನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಅವರು ಕೊಟ್ಟ ವಿವರಣೆ ಅಸ್ಪಷ್ಟವಾಗಿತ್ತು. ಇದು ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿತ್ತು. ಹೀಗಾಗಿ ಸೂಟ್ ಕೇಸ್ ತೆರೆಯಲಾಗಿದೆ. ಈ ವೇಳೆ ಅದರಲ್ಲಿ ಮಹಿಳೆಯ ಶವ ಕಂಡು ಬಂದಿದೆ.
ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಲಾಗಿದ್ದ ಮ್ರತ ಹೆಂಗಸಿನ ತಲೆಯಲ್ಲಿ ಗಾಯಗಳಿದ್ದವು. ತಕ್ಷಣವೇ ಪೊಲೀಸರು ಬಾಲಸುಬ್ರಮಣ್ಯಂ ಮತ್ತು ಅವರ ಪುತ್ರಿ ಇಬ್ಬರನ್ನೂ ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ತಂದೆ ಮತ್ತು ಮಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಹಿಳೆ ಮಗಳನ್ನು ವೇಶ್ಯಾವಾಟಿಕೆಗೆ ಬಲವಂತಪಡಿಸಲು ಯತ್ನಿಸಿದಾಗ ಕೋಪದಿಂದ ಕೊಂದಿರುವುದಾಗಿ ಹೇಳಿದ್ದಾರೆ. ಮೃತಳನ್ನು ಮಾನ್ಯಂ ರಮಣಿ ಎಂದು ಪೊಲೀಸರು ಗುರುತಿಸಿದ್ದು, ಆಕೆ ಚೆನ್ನೈನಲ್ಲಿರುವ ಆರೋಪಿಗಳ ಮನೆಯ ಬಳಿ ವಾಸಿಸುತ್ತಿದ್ದಳು.