

ಕುಂದಾಪುರ: ಡಿಸೆಂಬರ್ 13ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನ “ಪರಂಪರಾ” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು ಅವರು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕು. ಮುಂದಿನ ಪೀಳಿಗೆಗೆ ಅದನ್ನು ಹಂಚುವಂತಹ ಕೆಲಸವೂ ಆಗಬೇಕು ಎಂದು ಕರೆ ನೀಡಿದರು.
ಶಂಕರನಾರಾಯಣದ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಇಂಗ್ಲಿಷ್ ಉಪನ್ಯಾಸಕರಾದ ರಾಮ ಭಟ್ ಅವರು ಭಾರತೀಯ ಸಂಸ್ಕೃತಿಯ ಮಹತ್ವದ ಕುರಿತು ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಸ್ರೂರಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜ್ಯೋತಿ ಬಿ. ಮಾತನಾಡಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡದೆ ನಮ್ಮ ಹೆಮ್ಮೆಯ ಸಂಸ್ಕೃತಿಯ ಸಂಸ್ಕಾರ ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡು ಸಮುದಾಯಕ್ಕೂ ಅದನ್ನು ಹಂಚುವಂತಹ ಕೆಲಸವೂ ಆಗಬೇಕು ಎಂದು ಹೇಳಿದರು.
ಮತ್ತೋರ್ವ ಅತಿಥಿ ಕೋಟದ ವಿವೇಕ ಪ್ರೌಢಶಾಲೆಯ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟಿ ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವಸ್ಥರಾದ ಯು.ಎಸ್.ಶೆಣೈ, ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸರೋಜ ಎಂ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಇಂಚರಾ ಕಾರ್ಯಕ್ರಮ ನಿರೂಪಿಸಿದರು. ಸಿ.ಪಿ.ಸಿಂಚನಾ ಸ್ವಾಗತಿಸಿದರು. ತೃಪ್ತಿ ವಂದಿಸಿದರು.





