ತಾಯಿಯ ಸ್ಮರಣಾರ್ಥ ಮಕ್ಕಳಿಗೆ ಯೋಧ ಆನಂದ್ ಸಹೋದರರಿಂದ
ತಟ್ಟೆ ಲೋಟ-ಶಾಲೆಯ ಅಡುಗೆ ಮನೆ ನವೀಕರಣಕ್ಕೆ ಆರ್ಥಿಕ ನೆರವು

ಕೋಲಾರ:- ತಮ್ಮ ತಾಯಿಯ ಪುಣ್ಯತಿಥಿಯಂದು ಅವರ ನೆನಪಿನಲ್ಲಿ ಪ್ರತಿ ವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತಾ ಬಂದಿರುವ ಯೋಧ ಆನಂದ್ ಸಹೋದರರು ಈ ಬಾರಿ ಅರಾಭಿಕೊತ್ತನೂರು ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ತಟ್ಟೆ ಲೋಟ ಹಾಗೂ ಪ್ರೌಢಶಾಲೆಯ ಬಿಸಿಯೂಟ ಕೊಠಡಿ ನವೀಕರಣಕ್ಕೆ 10 ಸಾವಿರ ರೂ ಆರ್ಥಿಕ ನೆರವು ನೀಡಿದರು.
ತಾಯಿ ಆಂಜಿನಮ್ಮ ಅವರ ಪುಣ್ಯತಿಥಿ ಅಂಗವಾಗಿ ಸಹೋದರರಾದ ಶೇಖರ್, ಯೋಧ ಆನಂದ್, ಅಬಕಾರಿ ಇಲಾಖೆ ನೌಕರ ಶಿವಶಂಕರ್ ಪ್ರತಿವರ್ಷದಂತೆ ಈ ಬಾರಿಯೂ ಸೋಮವಾರ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಿಗೆ ಸಿಹಿ ವಿತರಿಸಿದ್ದಲ್ಲದೇ ನೆರವು ಒದಗಿಸಿದರು.

ಎಸ್ಸೆಸ್ಲೆಸಿ ಟಾಫರ್‍ಗೆ 5 ಸಾವಿರ ಬಹುಮಾನ


ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಆನಂದ್ ತನ್ನ ತಾಯಿಯ ಪುಣ್ಯತಿಥಿ ಸಲುವಾಗಿ ಅರಾಭಿಕೊತ್ತನೂರು ಗ್ರಾಮಕ್ಕೆ ಬಂದಿದ್ದು, ತಾಯಿ ಸ್ಮರಣೆಯ ಜತೆಗೆ ಅವರ ನೆನಪಿನಲ್ಲಿ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ನೆರವಾಗುವ ಹೃದಯವಂತಿಕೆ ತೋರಿದ್ದು, ಪ್ರತಿ ವರ್ಷ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗೆ 5 ಸಾವಿರ ರೂ ನಗದು ಪುರಸ್ಕಾರ ನೀಡುವ ಮೂಲಕ ಮಕ್ಕಳಿಗೆ ಸಾಧನೆಗೆ ಪ್ರೇರಣೆ ನೀಡಿದ್ದಾರೆ.
ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‍ಕುಮಾರ್ ಮಾತನಾಡಿ, ಯೋಧ ಆನಂದ್ ಸಹೋದರರ ಹೃದಯವಂತಿಕೆಗೆ ಧನ್ಯವಾದ ಸಲ್ಲಿಸಿ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಮತ್ತಷ್ಟು ನೆರವು ಹರಿದು ಬರಲಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಆನಂದ್, ನಾನು ಇದೇ ಶಾಲೆಯಲ್ಲಿ ಓದಿದವನು, ಸೇನೆಯಲ್ಲಿ ನಾವು ಪ್ರಾಣ ಒತ್ತೆಯಿಟ್ಟು ದೇಶಕ್ಕಾಗಿ ಕೆಲಸ ಮಾಡುವಾಗ ಅತ್ಯಂತ ಹೆಮ್ಮೆ ಎನಿಸುತ್ತದೆ, ವಿದ್ಯಾರ್ಥಿ ಸಮುದಾಯವೂ ದೇಶ ರಕ್ಷಣೆಗೆ ಪಣತೊಡುವ ಮೂಲಕ ಸೈನ್ಯಕ್ಕೆ ಸೇರಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅವರ ಸಹೋದರರಾದ ಶೇಖರ್, ಅಬಕಾರಿ ಇಲಾಖೆಯ ಉದ್ಯೋಗಿ ಶಿವಶಂಕರ್ ಶಾಲೆಗೆ ತಮ್ಮ ತಾಯಿಯ ನೆನಪಿನಲ್ಲಿ ಪ್ರತಿವರ್ಷವೂ ನೆರವಾಗುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪ್ರೇರಕ ರಾಮಚಂದ್ರಪ್ಪ, ವಾಟರ್‍ಮೆನ್ ಕೆಂಪರಾಜ್, ಸ್ನೇಹಿತರಾದ ರೂಪೇಶ್, ಆಕಾಶ್,ಮನು, ಅಶೋಕ್, ಸುಮನ್, ರಾಜು, ಪುನೀತ್, ಯಶವಂತ್, ಪ್ರೌಢಶಾಲಾ ಶಿಕ್ಷಕರಾದ ಎರಡೂ ಶಾಲೆಗಳ ಶಿಕ್ಷಕರಾದ ಸಿದ್ದೇಶ್ವರಿ,ಎಂ.ಆರ್.ಗೋಪಾಲಕೃಷ್ಣ, ಭವಾನಿ,ಶ್ವೇತಾ,ಸುಗುಣಾ,ವೆಂಕಟರೆಡ್ಡಿ, ಫರೀದಾ, ಶ್ರೀನಿವಾಸಲು, ಡಿ.ಚಂದ್ರಶೇಖರ್,ಚೈತ್ರಾ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ನಾಗರಾಜ್, ಶಿಕ್ಷಕರಾದ ಭಾರತಿ,ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.