ವಿಶ್ರಾಂತಿ ಪಡೆಯದೆ ಶ್ರಮಿಸುವ ಹೃದಯ ಘಾಸಿಗೊಳ್ಳದಂತೆ ಎಚ್ಚರ ವಹಿಸಬೇಕು : ಡಾ. ಯಶ್ವಂತ್ ಲಕ್ಷ್ಮಯ್ಯ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ವಿಶ್ರಾಂತಿ ಪಡೆಯದೆ ಶ್ರಮಿಸುವ ಹೃದಯ ಘಾಸಿಗೊಳ್ಳದಂತೆ ಎಚ್ಚರ ವಹಿಸಬೇಕು ಎಂದು ನಾರಾಯಣ ಹೃದಯಾಲಯದ ಹೃದಯ ತಜ್ಞ ಡಾ. ಯಶ್ವಂತ್ ಲಕ್ಷ್ಮಯ್ಯ ಹೇಳಿದರು.
ಪಟ್ಟಣದ ವೆಂಕಟೇಶ್ವರ ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ರೊಟರಿ ಸೆಂಟ್ರಲ್ ಶ್ರೀನಿವಾಸಪುರ ಸಂಸ್ಥೆಯ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ನಮ್ಮ ಹೃದಯಕ್ಕೆ ನಮ್ಮ ಕೊಡುಗೆ’ ಎಂಬ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯ ನಿರಾತಂಕವಾಗಿ ಕಾರ್ಯನಿರ್ವಹಿಸಬೇಕಾದರೆ, ದೇಹ ಹಾಗೂ ಮನಸ್ಸಿನ ಆರೋಗ್ಯ ಮುಖ್ಯವಾಗುತ್ತದೆ. ಧನಾತ್ಮಕ ಚಿಂತನೆಯೂ ಬೇಕಾಗುತ್ತದೆ ಎಂದು ಹೇಳಿದರು.
ರೋಟರಿ ಸೆಂಟ್ರಲ್ ಶ್ರೀನಿವಾಸಪುರ ಸಂಸ್ಥೆಯ ಅಧ್ಯಕ್ಷ ಡಾ.ವೈ.ವಿ.ವೆಂಕಟಾಚಲ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಹಣದ ಹಿಂದೆ ಬಿದ್ದಿರುವ ಮನುಷ್ಯ ಆರೋಗ್ಯದ ಕಡೆ ಅಗತ್ಯ ಗಮನ ಕೊಡದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ವಿ.ಸುಧಾಕರ್, ರೋಟರಿ ಸೆಂಟ್ರಲ್ ಶ್ರೀನಿವಾಸಪುರ ಸಂಸ್ಥೆಯ ಕಾರ್ಯದರ್ಶಿ ಎಚ್.ಆರ್.ನಾರಾಯಣಸ್ವಾಮಿ ಇದ್ದರು.