ಚುನಾವಣಾ ತನಿಖಾ ಚೆಕ್ ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಊಟ ತಿಂಡಿ ಕುಡಿಯುವ ನೀರು ಒದಗಿಸಲು ಮನವಿ

ಕೋಲಾರ ಏಪ್ರಿಲ್ 25 : ಕರ್ನಾಟಕ ರಾಜ್ಯದಾದ್ಯಂತ ಹೊರವಲಯದ ಚೆಕ್ ಪೋಸ್ಟ್‍ಗಳಲ್ಲಿ ಕರ್ನಾಟಕ ರಾಜ್ಯದ ಚುನಾವಣಾ ಕರ್ತವ್ಯವನ್ನು ನಿರ್ವಹಿಸುತ್ತಿರುವ ಪೊಲೀಸ್ ಹಾಗೂ ಇತರೆ ಸಿಬ್ಬಂದಿಗೆ ಊಟ, ತಿಂಡಿ, ಕಾಫಿ, ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಅಥವಾ ಸರ್ಕಾರದ ವತಿಯಿಂದ ಒದಗಿಸುವಂತೆ ಜಿಲ್ಲಾಡಳಿತ ಮುಖಾಂತರ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ವಂದಿತಾ ಶÀರ್ಮಾ ರವರಿಗೆ ಮನವಿಯನ್ನು ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ ಕೆ.ಎನ್.ರವೀಂದ್ರನಾಥ್, ಬೆಗ್ಲಿಹೊಸಹಳ್ಳಿ ಬಿ.ಎಂ.ಮುನಿಕೃಷ್ಣಯ್ಯ, ನಿವೃತ್ತ ಪಿಡಬ್ಲೂಡಿ ಅಧಿಕಾರಿ ಎನ್. ರಾಮಚಂದ್ರ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023ರ ಸಲುವಾಗಿ ರಾಜ್ಯದಾದ್ಯಂತ ವಿವಿಧ ಕಡೆಗಳಲ್ಲಿ ತನಿಖಾ ಚೆಕ್ ಪೋಸ್ಟ್‍ಗಳನ್ನು ತೆರೆದು ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗಿರುವುದು ಸ್ವಾಗತಾರ್ಹವಾಗಿದೆ. ಆದರೆ ಇಂತಹ ತನಿಖಾ ಚಕ್‍ಪೋಸ್ಟ್‍ಗಳು ಊರುಗಳಿಂದ ಹೊರವಲಯದಲ್ಲಿ ನಿರ್ಮಿಸಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಹಾಗೂ ಇತರೆ ಸಿಬ್ಬಂದಿಗೆ ಉಪಹಾರ ಮತ್ತು ಊಟಕ್ಕೆ ತೊಂದರೆಯಾಗುತ್ತಿದೆ. ಮಾನವೀಯತೆಯ ದೃಷ್ಟಿಯಿಂದ ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಗದವರಿಗೆ ಜಿಲ್ಲಾಡಳಿತ ಮತ್ತು ಸರ್ಕಾರದ ವತಿಯಿಂದ ಉಚಿತವಾಗಿ ತಿಂಡಿ, ಊಟ, ಕಾಫಿ, ಕುಡಿಯುವ ನೀರು ಹಾಗೂ ಇತರೆ ಮೂಲಭೂತ ವ್ಯವಸ್ಥೆಯನ್ನು ಮಾಡಬೇಕೆಂದು ಹಾಗೂ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿರುವ ಇತರೆ ಇಲಾಖೆಗಳ ಸಿಬ್ಬಂದಿಗೆ ಸಿಗುವ ಸೌಲಭ್ಯವನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಪೊಲೀಸ್ ವಿಶೇಷ ಭತ್ಯೆಯನ್ನು ಮಂಜೂರು ಮಾಡುವಂತೆ ಮನವಿಯಲ್ಲಿ ಕೋರಿದ್ದಾರೆ.